ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯದಲ್ಲೇ ರಾಷ್ಟ್ರೀಯತೆ ಮೂಡಿಸಿ: ರಾಜ್ಯಪಾಲ ಥಾವರಚಂದ್‌ ಗೆಹಲೋತ್‌

Last Updated 13 ಆಗಸ್ಟ್ 2022, 7:08 IST
ಅಕ್ಷರ ಗಾತ್ರ

ತುಮಕೂರು: ಬಾಲ್ಯದಲ್ಲಿಯೇ ಮಕ್ಕಳಿಗೆ ರಾಷ್ಟ್ರೀಯತೆ ಮೂಡಿಸಬೇಕು. ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಕರೆ ನೀಡಿದರು.

ರಾಷ್ಟ್ರೀಯ ಮಾನವ– ಪರಿಸರ ಸಂರಕ್ಷಣಾ ಪಡೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ದೇಶಕ್ಕಾಗಿ ನಡಿಗೆ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ದೇಶದ ಆರ್ಥಿಕ, ಸಾಮಾಜಿಕ ಪ್ರಗತಿಗೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಆತ್ಮನಿರ್ಭರ ಕಾರ್ಯಕ್ರಮದಿಂದ ಭಾರತ ನಿರ್ಮಾಣದ ಶಕ್ತಿ ಅಡಗಿದೆ. ಹಲವರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ದೊರೆತಿದೆ. ಅದನ್ನು ಕಾಪಾಡಿಕೊಂಡು ಹೋಗಲು ರಾಷ್ಟ್ರಾಭಿಮಾನ ಹೊಂದಬೇಕಿದೆ ಎಂದು ಅಭಿಪ್ರಾಯಪಟ್ಟರು.

ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ, ‘ದೇಶದಲ್ಲಿ ಮತಾಂಧತೆಯಿಂದ ಕಿತ್ತಾಡುತ್ತಿದ್ದೇವೆ. ಭಾರತೀಯರಾದ ನಾವೆಲ್ಲ ಜಾತಿ, ಮತ ಧರ್ಮವನ್ನು ಬಿಟ್ಟು ಒಂದಾಗಿ ಬದುಕುವುದನ್ನು ಕಲಿಯಬೇಕು. ಮೊದಲು ಭಾರತೀಯರಾಗಬೇಕು. ಆಗ ಮಾತ್ರ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರದ ಸಾಲಿನಲ್ಲಿ ನಿಲ್ಲಬೇಕಾದರೆ ಎಲ್ಲರಿಗೂ ಸಮಪಾಲು– ಸಮಬಾಳು ಎಂಬ ತತ್ವ ಅಳವಸಿಡಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಪ್ರಸ್ತುತ ಮಕ್ಕಳಿಗೆ ಶಿಕ್ಷಣ ನೀಡುವ ತೀವ್ರತೆ ಕಡಿಮೆಯಾಗುತ್ತಿದೆ. ತಂದೆ, ತಾಯಿಗಳು ದೇಶ, ದೇಶ ಪ್ರೇಮದ ಬಗ್ಗೆ ತಿಳಿಸಿಕೊಡಿಸಬೇಕಾದ ಅಗತ್ಯತೆ ಇದೆ. ಸಮಾಜದ ಋಣವನ್ನು ತೀರಿಸಿದರೆ ದೇಶಸೇವೆ ಮಾಡಿದಂತೆ ಎಂದರು.

ಮಾಜಿ ಸೈನಿಕ ನವೀನ್ ನಾಗಪ್ಪ, ‘ದೇಶಕ್ಕಾಗಿ ನನ್ನದು ಸಣ್ಣ ಅಳಿಲು ಸೇವೆ ಇದೆ. ಕಾರ್ಗಿಲ್ ಯುದ್ಧದಲ್ಲಿ ಕಾಲು ಕಳೆದುಕೊಂಡು ಏರ್ ಲಿಫ್ಟ್‌ನಲ್ಲಿ ಶ್ರೀನಗರಕ್ಕೆ ಕರೆದುಕೊಂಡು ಬರಬೇಕಾದರೆ ತಿರಂಗ ಧ್ವಜ ಹಾರಾಡುತ್ತಿತ್ತು. ಅದನ್ನು ಕಂಡು ಸೆಲೂಟ್ ಮಾಡಿದೆ’ ಎಂದು ಕಾರ್ಗಿಲ್ ಯುದ್ಧದ ಅನುಭವಗಳನ್ನು ಹಂಚಿಕೊಂಡರು.

ಜೂನಿಯರ್ ಕಾಲೇಜಿನಿಂದ ಆರಂಭವಾದ ‘ದೇಶಕ್ಕಾಗಿ ನಡಿಗೆ’ಗೆ ಕಿರುತೆರೆ ನಟಿ ಚಂದನ ಅನಂತಕೃಷ್ಣ ಚಾಲನೆ ನೀಡಿದರು. ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಎಸ್‌ಪಿ ಆರ್.ಕೆ.ಶಹಾಪೂರವಾಡ್, ಸಂರಕ್ಷಣಾ ಪಡೆಯ ಗೌರವ ಅಧ್ಯಕ್ಷ ಎಸ್.ಪಿ.ಚಿದಾನಂದ್, ಅಧ್ಯಕ್ಷ ಜಿ.ಎಸ್.ಬಸವರಾಜು ಇತರರು ಪಾಲ್ಗೊಂಡಿದ್ದರು.

ಜೂನಿಯರ್ ಕಾಲೇಜು ಮೈದಾನದಿಂದ ಆರಂಭಗೊಂಡ ಅಮೃತ ಭಾರತ ವಾಕಥಾನ್‌ನಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಬಿಜಿಎಸ್ ವೃತ್ತ, ಚರ್ಚ್ ವೃತ್ತದ ಮೂಲಕ ಗಾಜಿನ ಮನೆಯಲ್ಲಿ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT