ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಗೆ ಸಂಬಳ ನೀಡದೆ ಏಜೆನ್ಸಿ ನಾಪತ್ತೆ!

Published 11 ಮೇ 2024, 5:59 IST
Last Updated 11 ಮೇ 2024, 5:59 IST
ಅಕ್ಷರ ಗಾತ್ರ

ತುಮಕೂರು: ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಗೆ ಎರಡು ತಿಂಗಳ ವೇತನ ನೀಡದೆ ಗುತ್ತಿಗೆ ಪಡೆದುಕೊಂಡಿದ್ದ ಏಜೆನ್ಸಿಯವರು ನಾಪತ್ತೆಯಾಗಿದ್ದು, ವೇತನ ಪಡೆದುಕೊಳ್ಳಲು ಸಿಬ್ಬಂದಿ ಪರದಾಡುತ್ತಿದ್ದಾರೆ.

ಭದ್ರತಾ ಸಿಬ್ಬಂದಿ, ಸೂಪರ್‌ ವೈಸರ್ಸ್‌ ಸೇರಿದಂತೆ ವಿಶ್ವವಿದ್ಯಾಲಯದಲ್ಲಿ 44 ಮಂದಿ ಕೆಲಸ ಮಾಡುತ್ತಿದ್ದಾರೆ. ‘ಸಿಐಎಸ್‌ಬಿ’ ಸಂಸ್ಥೆಯು ಒಂದು ವರ್ಷದ ಅವಧಿಗೆ ಭದ್ರತೆ ನಿರ್ವಹಣೆಯ ಟೆಂಡರ್‌ ಪಡೆದುಕೊಂಡಿತ್ತು. ಭದ್ರತಾ ಸಿಬ್ಬಂದಿಗೆ ₹13,700, ಸೂಪರ್‌ ವೈಸರ್ಸ್‌ಗೆ ₹14 ಸಾವಿರ ಸಂಬಳ ನಿಗದಿ ಪಡಿಸಿದೆ. ಈ ಸಂಸ್ಥೆಯು ಸಿಬ್ಬಂದಿಯ ಕೊನೆಯ ಎರಡು ತಿಂಗಳ ವೇತನ ಪಾವತಿ ಮಾಡಿಲ್ಲ. ಡಿಸೆಂಬರ್‌ ಮತ್ತು ಜನವರಿ ತಿಂಗಳ ವೇತನಕ್ಕಾಗಿ ಕಾರ್ಮಿಕ ಇಲಾಖೆ, ವಿ.ವಿ ಕುಲಪತಿ ಕಚೇರಿಗೆ ಅಲೆಯುತ್ತಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಏಜೆನ್ಸಿಯಿಂದ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕಿದ್ದ ವಿ.ವಿ ಆಡಳಿತ ವರ್ಗ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಏಜೆನ್ಸಿಯ ಅಧಿಕಾರಿಗಳು ವಿ.ವಿ ಕಡೆ ತಿರುಗಿಯೂ ನೋಡುತ್ತಿಲ್ಲ. ವಿ.ವಿ ಕುಲಪತಿ ಇದನ್ನು ಗಂಭೀರವಾಗಿ ತೆಗೆದುಕೊಂಡು ಸಮಸ್ಯೆ ಬಗೆಹರಿಸುವ ಪ್ರಯತ್ನಕ್ಕೆ ಕೈ ಹಾಕಿಲ್ಲ. ಎಲ್ಲ ಸಿಬ್ಬಂದಿಗೆ ಒಟ್ಟು ₹10 ಲಕ್ಷಕ್ಕೂ ಹೆಚ್ಚು ಹಣ ಬರಬೇಕಿದೆ.

ಈ ಹಿಂದೆ ಗುತ್ತಿಗೆ ಪಡೆದ ಸಂಸ್ಥೆಯಿಂದ ಸರಿಯಾಗಿ ವೇತನ ಪಾವತಿಯಾಗುತ್ತಿರಲಿಲ್ಲ. ಕಳೆದ ಫೆಬ್ರುವರಿಯಿಂದ ಹೊಸ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ‘ಎರಡು ತಿಂಗಳು ಸುಮ್ಮನೆ ದುಡಿದಂತಾಗಿದೆ. ಏಜೆನ್ಸಿ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಸಂಬಂಧಪಟ್ಟವರು ಏಜೆನ್ಸಿಯಿಂದ ವೇತನ ಪಾವತಿಗೆ ಮುಂದಾಗುತ್ತಿಲ್ಲ. ಹೋರಾಟ, ಪ್ರತಿಭಟನೆ ಮಾಡಲು ಮುಂದಾದರೆ ಕೆಲಸ ಕಳೆದುಕೊಳ್ಳುತ್ತೇವೆ ಎಂಬ ಭಯ ನಮ್ಮನ್ನು ಕಾಡುತ್ತಿದೆ’ ಎಂದು ಭದ್ರತಾ ಸಿಬ್ಬಂದಿ ತಮ್ಮ ಬೇಸರ ಹೊರ ಹಾಕಿದರು.

ಈಗಾಗಲೇ ಶಾಲಾ–ಕಾಲೇಜುಗಳಲ್ಲಿ ದಾಖಲಾತಿ ಪ್ರಾರಂಭವಾಗಿದ್ದು, ಮಕ್ಕಳ ಶುಲ್ಕ ಪಾವತಿಗೆ ಪರದಾಡುತ್ತಿದ್ದಾರೆ. ಸೂಕ್ತ ಸಮಯಕ್ಕೆ ವೇತನ ಪಾವತಿ ಮಾಡಿದರೆ ಎಲ್ಲ ರೀತಿಯಿಂದಲೂ ಅನುಕೂಲವಾಗುತ್ತದೆ. 2 ತಿಂಗಳು ಸಂಬಳ ಬಾರದ ಕಾರಣಕ್ಕೆ ಹಲವರು ಸಾಲ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ‘ಈಗ ಸಾಲದ ಹಣ ತೀರಿಸಲು ಆಗುತ್ತಿಲ್ಲ. ಶೇ 10ರಷ್ಟು ಬಡ್ಡಿಗೆ ಸಾಲ ತಂದು ಪರಿತಪಿಸುವಂತಾಗಿದೆ’ ಎಂದು ಸೆಕ್ಯೂರಿಟಿ ಗಾರ್ಡ್‌ ಒಬ್ಬರು ಅಳಲು ತೋಡಿಕೊಂಡರು.

ಈ ಹಿಂದಿನ ಏಜೆನ್ಸಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರಿಂದ ಪ್ರತಿಕ್ರಿಯೆ ಬಂದ ನಂತರ ವೇತನ ಪಾವತಿಗೆ ಕ್ರಮಕೈಗೊಳ್ಳಲಾಗುವುದು
ಪ್ರೊ.ಎಂ.ವೆಂಕಟೇಶ್ವರಲು ಕುಲಪತಿ ತುಮಕೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT