ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಮುಂದೆ ಸಾಗದ ‘ದಸಂಸ’ ಹೋರಾಟ

Published 28 ಸೆಪ್ಟೆಂಬರ್ 2023, 16:32 IST
Last Updated 28 ಸೆಪ್ಟೆಂಬರ್ 2023, 16:32 IST
ಅಕ್ಷರ ಗಾತ್ರ

ತುಮಕೂರು: ದಲಿತ ಸಂಘರ್ಷ ಸಮಿತಿಯ ಹೋರಾಟಗಳು ಮುಂದೆ ಸಾಗದೆ ನಿಂತ ನೀರಾಗಿರುವುದಕ್ಕೆ ಪ್ರಮುಖರು, ಲೇಖಕರು, ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ, ಜೀವಕಾರುಣ್ಯ ಪ್ರಕಾಶನ, ಜಾತ್ಯತೀತ ಯುವ ವೇದಿಕೆ ಆಶ್ರಯದಲ್ಲಿ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೋರಾಟಗಾರ ಕುಂದೂರು ತಿಮ್ಮಯ್ಯ ಅವರ ಆತ್ಮಕಥನ ‘ಅಂಗುಲಿಮಾಲ’ ಕೃತಿ ಬಿಡುಗಡೆ ಮಾಡಲಾಯಿತು. ಈ ಸಮಯದಲ್ಲಿ ಮಾತನಾಡಿದ ಪ್ರಮುಖರು, ಸಂಘಟನೆ ಚಟುವಟಿಕೆಗಳು ತಟಸ್ಥವಾಗಿರುವುದಕ್ಕೆ ವಿಷಾದಿಸಿದರು.

ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ‘ಪರಿಶಿಷ್ಟರ ಮೇಲೆ ದೌರ್ಜನ್ಯಗಳು ನಡೆದರೆ ಕೇಳುವವರೇ ಇಲ್ಲವಾಗಿದ್ದಾರೆ. ಏಕೆ ಅಸಹಾಯಕ ಸ್ಥಿತಿ ತಲುಪಿದ್ದೇವೆ. ಹೋರಾಟಗಳು ಏನಾಗಿವೆ. ದಲಿತ ಸಂಘಟನೆಗಳ ಮುಖಂಡರಲ್ಲಿ ಹಿಂದೆ ಇದ್ದ ಧೈರ್ಯ, ನೈತಿಕ ಸ್ಥೈರ್ಯ, ಹೋರಾಟ ಮನೋಭಾವ ಈಗ ಕಾಣದಾಗಿದೆ. ಈ ಬಗ್ಗೆ ನಾವು ಪ್ರಶ್ನಿಸಿಕೊಳ್ಳಬೇಕಿದೆ’ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ತಿಪಟೂರಿನ ಶಾಸಕರೊಬ್ಬರ ಪಂಚೆ ಬಿಚ್ಚಿ ಪ್ರಶ್ನೆ ಮಾಡಿರುವ ವಿಚಾರವನ್ನು ಅಂಗುಲಿಮಾಲ ಕೃತಿಯಲ್ಲಿ ದಾಖಲಿಸಲಾಗಿದೆ. ಈಗ ಪಂಚೆ ಬಿಚ್ಚಿಸುವುದು ಹೋಗಲಿ, ಶಾಸಕರನ್ನು ನಿಲ್ಲಿಸಿಕೊಂಡು ಕೇಳುವ ಶಕ್ತಿ ಕಳೆದುಕೊಂಡಿದ್ದೇವೆ. ದೌರ್ಜನ್ಯ ನಡೆಸಿದವನ್ನು ಪ್ರಶ್ನಿಸುವ ಬದಲು ಅವರ ಜತೆಗೆ ಸೇರಿಕೊಳ್ಳುತ್ತಿದ್ದಾರೆ. ಇಂತಹ ಸ್ಥಿತಿಯಲ್ಲೂ ಹೋರಾಟ ಮಾಡದೆ ದಲಿತಪರ ಸಂಘಟನೆಗಳು ಏನು ಮಾಡುತ್ತಿವೆ ಎಂದು ಪ್ರಶ್ನಿಸಿದರು.

ದಲಿತಪರ ಹೋರಾಟಗಾರರು, ಪ್ರಮುಖರ ಆತ್ಮಕಥನಗಳು ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾಗಬೇಕು. ಇಂತಹ ವಿಚಾರಗಳ ಮೇಲೆ ಸಂಶೋಧನೆಗಳು ನಡೆಯಬೇಕು. ಸರ್ಕಾರ ಯೋಜನೆ ರೂಪಿಸಿ, ಪ್ರಮುಖ ದಲಿತ ನಾಯಕರ ಇತಿಹಾಸ ಬರೆಸಬೇಕು ಎಂದು ಅವರು ಆಗ್ರಹಿಸಿದರು.

ಸಂಸ್ಕೃತಿ ಚಿಂತಕ ಪ್ರೊ.ಬಿ.ಎಲ್.ರಾಜು, ‘ದಲಿತ ಚಳವಳಿಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ನಮಗೆ ಸಾಧ್ಯವಾಗಿಲ್ಲ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹೋರಾಟ ಬಿಟ್ಟು ಇದಕ್ಕಿದ್ದಂತೆ ನಿರ್ಗಮಿಸಿದ್ದು ಏಕೆಂದು ಪ್ರಶ್ನಿಸಿಕೊಳ್ಳಬೇಕು. ಮಡಿ, ಮೈಲಿಗೆ ಆಧಾರವಾಗಿ ಇಟ್ಟುಕೊಂಡೇ ಸಮಾಜ ಮುನ್ನಡೆದಿದೆ. ಇಂತಹ ಸನ್ನಿವೇಶದಲ್ಲೂ ಹೋರಾಟ ಮುಂದೆ ಸಾಗುತ್ತಿಲ್ಲ. ವಿಷಪೂರಿತ, ಆತಂಕದ ದಿನಗಳಲ್ಲಿ ಇದ್ದೇವೆ’ ಎಂದು ಸಂಘಟನೆ ಮುಖಂಡರನ್ನು ಎಚ್ಚರಿಸಿದರು.

ದಲಿತ ಚಳವಳಿಗಳು ಹೋರಾಟಕ್ಕೆ ಸೀಮಿತವಾಗದೆ ಸಮುದಾಯಕ್ಕೆ ಅರಿವಿನ ಶಿಕ್ಷಣ ಕೊಟ್ಟಿದೆ. ಇಂತಹ ಒಂದು ಹೋರಾಟವನ್ನು ಮುಂದಿನ ತಲೆಮಾರಿಗೆ ದಾಟಿಸಬೇಕಿತ್ತು. ಆದರೆ ರಾಜಕೀಯ ಸರಿತನಕ್ಕಾಗಿ ಮಾತನಾಡಲಾಗದ ಸನ್ನಿವೇಶ ತಂದುಕೊಂಡಿದ್ದೇವೆ ಎಂದು ವಿಷಾದಿಸಿದರು.

ಲೇಖಕ ನಟರಾಜ್ ಹುಳಿಯಾರ್, ‘ಕಪ್ಪು ಜನರ ಆತ್ಮಕಥನಗಳಿಂದ ಬಿಳಿಯರು ಬದಲಾದರು. ಆದರೆ ನಮ್ಮ ಹಿಂದೂ ಮನಸ್ಸುಗಳಲ್ಲಿ ಬದಲಾಗುವ ಮನೋಭಾವ ಕಾಣುತ್ತಿಲ್ಲ. ದಲಿತ ಚಳವಳಿಯಿಂದ ಕೋಮುವಾದಿಗಳನ್ನು ಓಡಿಸಲು ಸಾಧ್ಯವಾಗಿದೆ. ಆದರೆ ಈಗ ಆತಂಕದ ಸ್ಥಿತಿಗೆ ತಲುಪಿದ್ದೇವೆ. ಮತ್ತೆ ಚಳವಳಿಯನ್ನು ಕಟ್ಟಿ ಆತಂಕವನ್ನು ದೂರ ಮಾಡಬೇಕಿದೆ’ ಎಂದು ಸಲಹೆ ಮಾಡಿದರು.

ದಲಿತ ಸಂಘರ್ಷ ಸಮಿತಿಯ ಹೋರಾಟಗಳ ಜತೆಗೆ ಹೊಸ ವಿಚಾರಗಳನ್ನು ಈಗಿನ ತಲೆಮಾರಿಗೆ ತಿಳಿಸಿಕೊಡಬೇಕು. ಹಳೆ ಬಟ್ಟೆ ತೊಳೆದಂತೆ, ಹಿಂದಿನ ವಿಚಾರ ಇಟ್ಟುಕೊಂಡು ಚಳವಳಿ ಕಟ್ಟಲಾಗದು. ಹೋರಾಟಕ್ಕೂ ಹೊರ ರೂಪ ಕೊಡಬೇಕು ಎಂದರು.

ಡಾ.ಬಸವರಾಜು ಪ್ರಸ್ತಾವಿಕವಾಗಿ ಮಾತನಾಡಿದರು. ಚಿಂತಕ ಕೆ.ದೊರೈರಾಜ್ ಅಧ್ಯಕ್ಷತೆ ವಹಿಸಿದ್ದರು. ಕುಂದೂರು ತಿಮ್ಮಯ್ಯ, ಕಲಾವಿದ ಪಿಚ್ಚಹಳ್ಳಿ ಶ್ರೀನಿವಾಸ್, ಪ್ರಮುಖರಾದ ಕೃಷ್ಣಪ್ಪ ಬೆಲ್ಲದಮಡಗು, ಮಲ್ಲಿಕಾ ಬಸವರಾಜು, ಗುರುಮೂರ್ತಿ, ಪ್ರೊ.ರುದ್ರಸ್ವಾಮಿ, ಟಿ.ಕೆ.ದಯಾನಂದ್, ಎಂ.ಜಿ.ರಾಮಚಂದ್ರ, ಗಂಗರಾಜಮ್ಮ, ಗಂಗಮ್ಮ, ವಿರೂಪಾಕ್ಷ ಮೊದಲಾದವರು ಉಪಸ್ಥಿತರಿದ್ದರು.

ಗೃಹ ಸಚಿವರು ಏನು ಮಾಡುತ್ತಿದ್ದಾರೆ?

ಪರಿಶಿಷ್ಟರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ನಮ್ಮದೇ ಸಮುದಾಯದವರು ಗೃಹ ಸಚಿವರಾಗಿದ್ದಾರೆ. ಆದರೆ ಕ್ರಮ ಕೈಗೊಳ್ಳಬೇಕಾದ ಸಚಿವರು ಏನು ಮಾಡುತ್ತಿದ್ದಾರೆ ಎಂಬುದೇ ಗೊತ್ತಿಲ್ಲ ಎಂದು ಎಲ್.ಹನುಮಂತಯ್ಯ ಪ್ರಶ್ನಿಸಿದರು. ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು ರಕ್ಷಣೆ ಇಲ್ಲವಾಗಿದೆ. ಒಂದು ರೀತಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಈಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿದ್ದ ಸಮಯದಲ್ಲಿ ಸಾಕಷ್ಟು ಮಂದಿ ದೂರು ಸಲ್ಲಿಸಿದರು. ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ಗೃಹ ಸಚಿವರು ಸುಮ್ಮನಿದ್ದಾರೆ? ಎಂದರು. ದೌರ್ಜನ್ಯದ ವಿವರ ಕೊಡುವಂತೆ ಹೇಳಿದ್ದು ಅದನ್ನು ಗೃಹ ಸಚಿವರಿಗೆ ತಲುಪಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT