ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ: ಶಸ್ತ್ರಚಿಕಿತ್ಸೆ ಅರ್ಧಕ್ಕೆ ನಿಲ್ಲಿಸಿ ಹೊಲಿಗೆ ಹಾಕಿದ ವೈದ್ಯರು!

Published 20 ಮಾರ್ಚ್ 2024, 5:42 IST
Last Updated 20 ಮಾರ್ಚ್ 2024, 5:42 IST
ಅಕ್ಷರ ಗಾತ್ರ

ಗುಬ್ಬಿ (ತುಮಕೂರು): ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಮಹಿಳೆಯೊಬ್ಬರಿಗೆ ನಡೆಸುತ್ತಿದ್ದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಅರ್ಧದಲ್ಲೇ ನಿಲ್ಲಿಸಿ, ಹೊಲಿಗೆ ಹಾಕಿದ್ದಾರೆ.

ಇದರಿಂದ ತೊಂದರೆಗೀಡಾದ ತಾಲ್ಲೂಕಿನ ಬಿಳೆಕಲ್ಲುಪಾಳ್ಯ ಗ್ರಾಮದ ರೇಣುಕಾ (34) ಎಂಬ ಮಹಿಳೆಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಿಂದ ನೋವಿನಿಂದ ಚಿರಾಡುವ ಶಬ್ದ ಕೇಳಿ ಬಂತು. ಕೊಠಡಿ ಹೊರಗೆ ನಿಂತಿದ್ದ ನಾವು ಒಳ ಹೋಗಿ ನೋಡಿದಾಗ ರೇಣುಕಾ ಕೈ, ಕಾಲು ಗಟ್ಟಿಯಾಗಿ ಹಿಡಿದುಕೊಂಡು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು’ ಎಂದು ಮಹಿಳೆಯ ಗಂಡ ತಿಮ್ಮರಾಜು ಆರೋಪಿಸಿದ್ದಾರೆ.   

‘ಅರವಳಿಕೆ ಮದ್ದು ನೀಡದೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಕಾರಣ ನೋವು ತಡೆದುಕೊಳ್ಳಲಾಗದೆ ನನ್ನ ಹೆಂಡತಿ ಕೂಗಿಕೊಳ್ಳುತ್ತಿದ್ದಳು. ನಾವು ಒಳಗೆ ಹೋಗಿ ಗಲಾಟೆ ಮಾಡಿದ ನಂತರ ಶಸ್ತ್ರಚಿಕಿತ್ಸೆ ನಿಲ್ಲಿಸಿದರು. ತಡೆದುಕೊಳ್ಳಲು ಆಗುವುದಿಲ್ಲ ಅಂತ ಮೊದಲೇ ಹೇಳಬೇಕಲ್ಲವೇ ಎಂದು ನಮ್ಮ ಮೇಲೆಯೇ ವೈದ್ಯರು ರೇಗಾಡಿದರು’ ಎಂದು ತಿಳಿಸಿದರು.

‘ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ವೈದ್ಯರು ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆ ಮಾಡಲು ಹೊರಟಿದ್ದರು. ಬೆಳಿಗ್ಗೆ ಚಿಕಿತ್ಸೆಗೂ ಮುನ್ನ ₹5 ಸಾವಿರ ಹಣ ಕೇಳಿದರು. ಕೊಡಲು ಆಗುವುದಿಲ್ಲ ಎಂದು ಹೇಳಿದ್ದೆ. ಇದರಿಂದ ಕೋಪಗೊಂಡು ಈ ರೀತಿ ಮಾಡಿದ್ದಾರೆ’ ಎಂದು ತಿಮ್ಮರಾಜು ಆರೋಪ ಮಾಡಿದರು.

‘ಅರವಳಿಕೆ ಮದ್ದು ಕೊಟ್ಟ ನಂತರವೇ ಶಸ್ತ್ರಚಿಕಿತ್ಸೆ ಮಾಡುತ್ತಿದ್ದೆವು. ಆದರೆ, ಅರವಳಿಕೆ ಮದ್ದು ಸರಿಯಾಗಿ ಕೆಲಸ ಮಾಡಿಲ್ಲ’ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ದಿವಾಕರ್ ಸ್ಪಷ್ಟನೆ ನೀಡಿದರು.

ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ತಿಂಗಳು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರು ನಂಜಾಗಿ ಮೃತಪಟ್ಟಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT