ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ವಿದ್ಯೆಗಾಗಿ ಊರೂರು ಅಲೆದಾಟ: ಪದವಿ ಕಾಲೇಜು ಆರಂಭಕ್ಕೆ ನಿವಾಸಿಗಳ ಮನವಿ

Published 27 ನವೆಂಬರ್ 2023, 6:54 IST
Last Updated 27 ನವೆಂಬರ್ 2023, 6:54 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಕೊಡಿಗೇನಹಳ್ಳಿ ತಾಲ್ಲೂಕಿನಲ್ಲಿ ದೊಡ್ಡ ಹೋಬಳಿ ಕೇಂದ್ರ. ‌‌‌ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೇರಿಸಿದರೆ ಪಟ್ಟಣ ಪಂಚಾಯಿತಿ ಆಗುವ ಎಲ್ಲ ಅರ್ಹತೆಯೂ ಇದೆ. ಆದರೆ, ಪ್ರಥಮ ದರ್ಜೆ ಕಾಲೇಜು ಇಲ್ಲದೆ ಪ್ರತಿದಿನ ದೂರದ ನಗರಗಳಿಗೆ ಹೋಗಿ ಬರುವ ವಿದ್ಯಾರ್ಥಿಗಳಿಗೆ ತಲೆ ನೋವಾಗಿ ಪರಿಣಮಿಸಿದರೆ, ಪೋಷಕರು ಆರ್ಥಿಕ ಹೊರೆಯಿಂದ ಹೈರಾಣಾಗಿದ್ದಾರೆ.

ಮಕ್ಕಳು ಪ್ರತಿದಿನ 20ಕಿಲೋಮೀಟರ್ ಅಂತದಲ್ಲಿರುವ ಮಧುಗಿರಿ ಹಾಗೂ ಗೌರಿಬಿದನೂರು ಮತ್ತು 42 ಕಿಲೋಮೀಟರ್ ದೂರದಲ್ಲಿರುವ ತುಮಕೂರು ನಗರಕ್ಕೆ ಹೋಗಿ ಬರಬೇಕಾದ ಪರಿಸ್ಥಿತಿ ಇದೆ. ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹಾಗೂ ಬಡವನಹಳ್ಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದರೆ, ‌ಬ್ಯಾಲ್ಯ, ಪುರವರ, ಕೋಡ್ಲಾಪುರ, ಐಡಿಹಳ್ಳಿ, ಮಿಡಿಗೇಶಿ, ಹೊಸಕೆರೆ ಮತ್ತು ದೊಡ್ಡೇರಿ ಹೋಬಳಿ ದಂಡಿನದಿಬ್ಬ ಹಾಗೂ ದಬ್ಬೆಗಟ್ಟ ಗ್ರಾಮಗಳಲ್ಲಿ ಸರ್ಕಾರಿ ಪಿಯು ಕಾಲೇಜುಗಳಿವೆ. ಆದರೆ, ಕೊಡಿಗೇನಹಳ್ಳಿ ಹೋಬಳಿ ಕಡಗತ್ತೂರ ಗ್ರಾಮದಲ್ಲಿ ಮಾತ್ರ ಪಿಯು ಕಾಲೇಜು ಬಿಟ್ಟರೆ ಕೊಡಿಗೇನಹಳ್ಳಿಯಲ್ಲಿ ಏನೊಂದು ಇಲ್ಲವಾಗಿದೆ.

ಹಿಂದೆ ಶಿಕ್ಷಣ ಇಲಾಖೆಯಲ್ಲಿ ಜೆಡಿಯಾಗಿದ್ದ ಬಿ.ಪಿ.ತಿಪ್ಪಯ್ಯ ಎಂಬುವವರು 1992ರಲ್ಲಿ ಕೊಡಿಗೇನಹಳ್ಳಿಯಲ್ಲಿ ಮಂಗಳ ಪ್ರಥಮ ದರ್ಜೆ ಕಾಲೇಜು ಆರಂಭಿಸಿದಾಗ ಇಲ್ಲಿನ ಪೋಷಕರು ಖುಷಿಯಿಂದ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಿದರು. ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿತ್ತು. ಆದರೆ, ನಂತರ ದಿನಗಳಲ್ಲಿ ಕಾಲೇಜಿಗೆ ಸ್ವಂತ ಕಟ್ಟಡ ಹಾಗೂ ಮೂಲ ಸೌಲಭ್ಯ ಕೊರತೆ ಉಂಟಾಯಿತು. ನಂತರ ಸರಿಯಾದ ನಿರ್ವಹಣೆ ಇಲ್ಲದೆ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿ ಕಾಲೇಜು ನಿಂತೇ ಹೋಯಿತು.

ಕೊಡಿಗೇನಹಳ್ಳಿ ಹೋಬಳಿ ಆಂಧ್ರದ ಗಡಿಭಾಗದಲ್ಲಿ ಇದೆ. 58 ಗ್ರಾಮಗಳಿಂದ ಸುಮಾರು 35 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಇದೆ. ಇದರ ಜೊತೆಗೆ ಈ ಭಾಗ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಿ ಬಿ.ಎ, ಬಿ.ಕಾಂ ಹಾಗೂ ಬಿಎಸ್ಸಿ ಕೋರ್ಸ್‌ ತೆರೆದು ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದರೆ ಈ ಭಾಗದ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಇಲ್ಲಿನ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಜಯರಾಮ್ ಗುಟ್ಟೆ ಪೋಷಕ
ಜಯರಾಮ್ ಗುಟ್ಟೆ ಪೋಷಕ
ಜೂಲಪ್ಪ ಕೊಡಿಗೇನಹಳ್ಳಿ ಗ್ರಾಮಸ್ಥ
ಜೂಲಪ್ಪ ಕೊಡಿಗೇನಹಳ್ಳಿ ಗ್ರಾಮಸ್ಥ
ಶ್ರೀನಿವಾಸ ಕಾಲೇಜು ವಿದ್ಯಾರ್ಥಿ ರೆಡ್ಡಿಹಳ್ಳಿ
ಶ್ರೀನಿವಾಸ ಕಾಲೇಜು ವಿದ್ಯಾರ್ಥಿ ರೆಡ್ಡಿಹಳ್ಳಿ

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೆಣ್ಣು ಮಕ್ಕಳನ್ನು ವಿಧಿ ಇಲ್ಲದೆ ಹೊರಗೆ ಕಳುಹಿಸಬೇಕಾಗಿದೆ. ಜತೆಗೆ ಸಕಾಲಕ್ಕೆ ಬಸ್‌ಗಳು ಸಿಗದೆ ನಿತ್ಯ ಸಂಚಾರಕ್ಕೆ ತೊಂದರೆಯಾಗಿದೆ. ಶೀಘ್ರ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಸಹಕಾರ ಸಚಿವ ಕೆ.ಎನ್. ರಾಜಣ್ಣ ಮುಂದಾಗಬೇಕು

–ಜಯರಾಮ್ ಗುಟ್ಟೆ, ಪೋಷಕ

ಕೊಡಿಗೇನಹಳ್ಳಿ ಹೋಬಳಿಯಲ್ಲಿ ಹೆಚ್ಚು ಜನಸಂಖ್ಯೆ ಇದೆ. ಆರ್ಥಿಕವಾಗಿ ಹಿಂದುಳಿದಿರುವ ಗಡಿ ಪ್ರದೇಶದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸುವ ಅವಶ್ಯವಿದೆ. ಸರ್ಕಾರಿ ಪಿಯು ಕಾಲೇಜು ಮತ್ತು ಹಾಸ್ಟೆಲ್ ವ್ಯವಸ್ಥೆ ಕೂಡ ಕಲ್ಪಿಸಬೇಕಾಗಿದೆ.

–ಜೂಲಪ್ಪ, ಕೊಡಿಗೇನಹಳ್ಳಿ ಗ್ರಾಮಸ್ಥ

ಬಸ್‌ ಸಂಚಾರದಿಂದ ಸಮಯ ವ್ಯರ್ಥವಾಗುತ್ತಿದೆ. ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕಾಲೇಜು ಆರಂಭವಾಗಬೇಕು

– ಶ್ರೀನಿವಾಸ, ಕಾಲೇಜು ವಿದ್ಯಾರ್ಥಿ ರೆಡ್ಡಿಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT