ಗುರುವಾರ , ಜೂನ್ 17, 2021
21 °C
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ

ನೀಗಲಿದೆ ಆಮ್ಲಜನಕ ಕೊರತೆ– ಜೆ.ಸಿ.ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಆಮ್ಲಜನಕದ ಕೊರತೆ ನೀಗಲಿದೆ. ಬೇಡಿಕೆಯಷ್ಟು ಪೂರೈಕೆ ಮಾಡಲು ರಾಜ್ಯ ಸರ್ಕಾರ ಸಮ್ಮತಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಇಲ್ಲಿ ಗುರುವಾರ ಹೇಳಿದರು.

ಜಿಲ್ಲೆಗೆ 23 ಕೆಎಲ್ ಆಮ್ಲಜನಕದ ಅಗತ್ಯವಿದ್ದು, ಸದ್ಯ 16 ಕೆಎಲ್ ಮಾತ್ರ ಪೂರೈಕೆಯಾಗುತ್ತಿದೆ. ಬೇಡಿಕೆಯಷ್ಟು ಪೂರೈಸುವಂತೆ ಮನವಿ ಮಾಡಿದ್ದು, 23 ಕೆಎಲ್ ಆಮ್ಲಜನಕ ಹಂಚಿಕೆಯಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಜಿಲ್ಲಾ, ತಾಲ್ಲೂಕು ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಘಟಕ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಇದಲ್ಲದೆ 110 ಆಮ್ಲಜನಕ ಸಾಂದ್ರಕಗಳ ಮೂಲಕವೂ ಸೋಂಕಿತರಿಗೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೈಗಾರಿಕೋದ್ಯಮಿಗಳಿಂದ 250 ಆಮ್ಲಜನಕ ಸಾಂದ್ರಕಗಳ ನೆರವು ಸಿಗಲಿದ್ದು, ತಾಲ್ಲೂಕು ಆಸ್ಪತ್ರೆಗಳಿಗೂ ಪೂರೈಕೆ ಮಾಡಲಾಗುವುದು. ಇದರಿಂದ ಜಿಲ್ಲಾ ಆಸ್ಪತ್ರೆ ಮೇಲಿನ ಒತ್ತಡ ತಗ್ಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಕೈಗೊಂಡ ಕಟ್ಟು
ನಿಟ್ಟಿನ ಕ್ರಮಗಳು, ಮಾರ್ಗಸೂಚಿ ಪಾಲನೆ
ಯಿಂದಾಗಿ ಕೋವಿಡ್–19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ನಿಯಂತ್ರಣಕ್ಕೆ ಬರುತ್ತಿದೆ. ಪಾಸಿಟಿವ್ ಪ್ರಕರಣಗಳ ಶೇಕಡಾವಾರು ಪ್ರಮಾಣ ಇಳಿಕೆಯಾಗಿದೆ. ಆರಂಭದಲ್ಲಿ ಈ ಪ್ರಮಾಣ ಶೇ 45ರಷ್ಟು ಇದ್ದು, ಈಗ ಶೇ 40ಕ್ಕೆ ತಗ್ಗಿದೆ. ಜತೆಗೆ ಸೋಂಕಿತರ ಚೇತರಿಕೆ ಪ್ರಮಾಣವೂ ಏರಿಕೆಯಾಗಿದೆ ಎಂದು ಸಚಿವರು ಹೇಳಿದರು.

ತುಮಕೂರು– ಬೆಂಗಳೂರು ನಡುವೆ ಓಡಾಡುವವರ ಸಂಖ್ಯೆ ಹೆಚ್ಚಿದ್ದ ಕಾರಣ ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗಿತ್ತು. ಈಗ ಸಂಚಾರಕ್ಕೆ ನಿಯಂತ್ರಣ ಬಿದ್ದಿದ್ದು, ಸೋಂಕು ಹರಡುವುದು ಕಡಿಮೆಯಾಗಿದೆ. ಏಪ್ರಿಲ್ ತಿಂಗಳಲ್ಲಿ 18,749 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 69 ಮಂದಿ ಸಾವನ್ನಪ್ಪಿದರು. ಮೇ 1ರಿಂದ 12ರವರೆಗೆ 26,790 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 162 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದರು.

ಮೂರನೇ ಅಲೆ ನಿಗ್ರಹ: ಆಮ್ಲಜನಕ ಸೇರಿದಂತೆ ಸೋಂಕಿತರ ಆರೈಕೆಗೆ ಕೈಗೊಂಡಿರುವ ಕ್ರಮಗಳು ಕೋವಿಡ್ ಮೂರನೇ ಅಲೆ ನಿಗ್ರಹಕ್ಕೆ ಶಕ್ತಿಯಾಗಲಿದೆ. ಮೂರನೇ ಅಲೆ ನಿಯಂತ್ರಣಕ್ಕೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಮಸ್ಯೆ ನಿವಾರಣೆ: ಆಮ್ಲಜನಕ, ರೆಮ್‌ಡಿಸಿವಿರ್ ಸೇರಿದಂತೆ ಬಹುತೇಕ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆಯಿಲ್ಲ. ಸರ್ಕಾರಿ ಆಸ್ಪತ್ರೆಯಿಂದ ಕಳುಹಿಸುವ ಸೋಂಕಿತರಿಗೂ ರೆಮ್‌ಡಿಸಿವಿರ್ ಅಭಾವವಿಲ್ಲ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಕೊಂಚ ಸಮಸ್ಯೆ ಉಂಟಾಗಿದೆ. ಅದರ ನಿವಾರಣೆಗೂ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳಿಂದ ಕಳುಹಿಸಿದ ಸೋಂಕಿತರನ್ನು ಎಬಿಆರ್‌ಕೆ ಅಡಿಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಹಣ ಪಡೆಯುವಂತಿಲ್ಲ. ದಾಖಲೆ ಸಮೇತ ಮಾಹಿತಿ ಒದಗಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿ.ಪಂ ಸಿಇಒ ಕೆ.ವಿದ್ಯಾಕುಮಾರಿ, ಎಸ್ಪಿ ಡಾ.ಕೆ.ವಂಶಿಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಡಿಎಚ್‍ಒ ಡಾ.ನಾಗೇಂದ್ರಪ್ಪ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು