ತುರುವೇಕೆರೆ (ತುಮಕೂರು): ತಾಲ್ಲೂಕಿನ ದಂಡಿನಶಿವರ ಹೋಬಳಿ ಮಾರಸಂದ್ರ ಸಮೀಪದ ರಂಗನಹಟ್ಟಿ ಕಟ್ಟೆಯಲ್ಲಿ ಭಾನುವಾರ ಗಣಪತಿ ವಿಸರ್ಜನೆ ವೇಳೆ ಅಪ್ಪ, ಮಗ ಹಾಗೂ ಮತ್ತೊಬ್ಬ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ರಂಗನಹಟ್ಟಿ ಗ್ರಾಮದ ರೇವಣ್ಣ (50) ಅವರ ಮಗ ಶರತ್ (26) ಹಾಗೂ ದಯಾನಂದ್(22) ಎಂಬುವರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣೇಶನನ್ನು ವಿಸರ್ಜಿಸಲು ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ ರಂಗನಕಟ್ಟೆಗೆ ತೆರಳಿದ್ದರು.
ಗಣೇಶ ಮೂರ್ತಿಯನ್ನು ಹಿಡಿದು ಶರತ್ ಮತ್ತು ದಯಾನಂದ್ ನೀರಿಗೆ ಇಳಿದಿದ್ದರು. ಕೆಸರಿನಲ್ಲಿ ಕಾಲು ಹೂತುಕೊಂಡು ಈಜಲು ಸಾಧ್ಯವಾಗದೆ ದಡದಲ್ಲಿದ್ದವರನ್ನು ಸಹಾಯಕ್ಕೆ ಕೂಗಿಕೊಂಡಿದ್ದಾರೆ.
ಮಗ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ರೇವಣ್ಣ ನೀರಿಗೆ ಧುಮಿಕಿದ್ದಾರೆ. ಅವರಿಗೂ ಈಜಲು ಸಾಧ್ಯವಾಗದೆ ಮುಳುಗಿ ಮೃತಪಟ್ಟಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಕತ್ತಲೆಯಾಗುತ್ತಿರುವುದರಿಂದ ಶೋಧ ಕಾರ್ಯ ವಿಳಂಭವಾಗುವ ಸಾಧ್ಯತೆ ಇದೆ ಎಂದು ಅಗ್ನಿ ಶಾಮಕ ಠಾಣಾಧಿಕಾರಿ ಚನ್ನಾಚಾರಿ ತಿಳಿಸಿದ್ದಾರೆ.
ರಂಗನಹಟ್ಟಿ ಸುತ್ತಮುತ್ತಲಿನ ಜನರು ಕೆರೆ ಬಳಿ ಜಮಾಯಿಸಿದ್ದರು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.