ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರ ಸಹಕಾರದಿಂದ ಶೈಕ್ಷಣಿಕ ಕ್ರಾಂತಿ: ರುದ್ರಮುನಿ ಸ್ವಾಮೀಜಿ

ತಿಪಟೂರು ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಮಾರಂಭ
Last Updated 22 ಏಪ್ರಿಲ್ 2019, 15:37 IST
ಅಕ್ಷರ ಗಾತ್ರ

ತಿಪಟೂರು: ‘ಹುಬ್ಬಳ್ಳಿಯಿಂದ ದೂರ ಮಾಡಿದಾಗ ತಿಪಟೂರು ಷಡಕ್ಷರ ಮಠದ ಜವಾಬ್ದಾರಿ ವಹಿಸಿಕೊಂಡೆ. ಇಲ್ಲಿನ ಭಕ್ತರ ಸಹಕಾರದಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಸಾಧ್ಯವಾಯಿತು’ ಎಂದು ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ನುಡಿದರು.

ಗೌರವ ಡಾಕ್ಟರೇಟ್ ಪಡೆದಿದ್ದಕ್ಕೆ ನಗರದಲ್ಲಿ ತಿಪಟೂರು ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳ ಉದ್ಯೋಗ ದೃಷ್ಟಿಯಿಂದ ಐಟಿಐ, ಡಿಪ್ಲೊಮೊ ಕಾಲೇಜು ತೆರೆಯಲಾಗಿದೆ. ಹಲವಾರು ಪ್ರಶಸ್ತಿಗಳು ಹುಡುಕಿ ಬಂದಿದ್ದರೂ ನಿರಾಕರಿಸಿದ್ದೆ. ಆದರೆ ಒತ್ತಾಯಪೂರ್ವಕವಾಗಿ ಗೌರವ ಡಾಕ್ಟರೇಟ್ ಸ್ವೀಕರಿಸಿದೆ’ ಎಂದರು.

ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಮಠಮಾನ್ಯಗಳು ಕೇವಲ ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗಿಲ್ಲ. ನಿರುದ್ಯೋಗ, ಸಾಮಾಜಿಕ ಪಿಡುಗುಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ’ ಎಂದು ಹೇಳಿದರು.

‘ಕಾಡಸಿದ್ದೇಶ್ವರ ಮಠದಲ್ಲಿ ವಿಧವಾ ವಿವಾಹ ನೆರವೇರಿಸಿದಾಗ ಕೆಲವರು ವಿರೋಧಿಸಿದರು. ಆದರೆ ಸುತ್ತಮುತ್ತಲಿನ ಮಠಾಧೀಶರು ಧೈರ್ಯ ತುಂಬಿದರು. ಮಠಗಳು ಸಾಮಾಜಿಕ ನೆಲೆಯಲ್ಲಿ ಮಾಡಬೇಕಾದ ಕೆಲಸ ಬಹಳಷ್ಟಿವೆ’ ಎಂದರು.

ಉತ್ತಮ ಕಾರ್ಯಗಳನ್ನು ನಿರ್ವಹಿಸಿದಾಗ ಸಮಾಜ ಸನ್ಮಾನಿಸುವುದು ಪ್ರೋತ್ಸಾಹದಾಯಕ ಕೆಲಸ. ಸಮಾಜಮುಖಿ ಚಿಂತನೆಗಳಿಂದ ಎಲ್ಲ ಕ್ಷೇತ್ರದವರು ಸೇರಿ ಸಮೃದ್ಧ ಸಮಾಜ ನಿರ್ಮಿಸಬೇಕು. ಶಿಕ್ಷಣ, ಆರೋಗ್ಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ವ್ಯಾಪಕ ಅವಕಾಶಗಳಿವೆ. ಮಠಮಾನ್ಯಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಸಮಾಜದ ಏಳಿಗೆಗೆ ಶ್ರಮಿಸುತ್ತಿವೆ. ಎಲ್ಲ ವರ್ಗದವರ ಶಿಕ್ಷಣಕ್ಕೆ ಆದ್ಯತೆ ನೀಡಿವೆ ಎಂದು ಹೇಳಿದರು.

ಕೆರಗೋಡಿ ರಂಗಾಪುರ ಮಠದ ಗುರುಪರದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಸಮಾಜ ಸೇವೆಯಲ್ಲಿ ನಿರತವಾಗಿರುವ ಮಠಾಧೀಶರಿಗೆ ಗೌವರ ಡಾಕ್ಟರೇಟ್ ದೊರೆಯುತ್ತಿರುವುದು ಪ್ರೋತ್ಸಾಹದಾಯಕ. ನಮ್ಮ ತಾಲ್ಲೂಕಿನ ಎಲ್ಲ ಮಠಗಳು ಸಮಾಜದ ಪ್ರಗತಿಗೆ ತಮ್ಮದೇ ರೀತಿಯ ಕೊಡುಗೆ ನೀಡಿವೆ. ಬಸವಣ್ಣ ಅವರ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಮಠಗಳು ನಡೆದುಕೊಂಡಾಗ ಮಾತ್ರ ಭವ್ಯ ಪರಂಪರೆಯ ಘನತೆಯನ್ನು ಎತ್ತಿ ಹಿಡಿಯಬಹುದು’ ಎಂದರು.

ತಿಪಟೂರು ಹೋರಾಟ ಸಮಿತಿ ಅಧ್ಯಕ್ಷ ಲೋಕೇಶ್ವರ ಮಾತನಾಡಿ, ‘ಈ ತಾಲ್ಲೂಕು ಸರ್ವ ಜಾತಿಗಳ ಶಾಂತಿಯ ತೋಟವಾಗಿದೆ. ಜಾತ್ಯತೀತ ಮನಸ್ಥಿತಿಯನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ಮಠಗಳ ಕೊಡುಗೆ ಅಪಾರವಾಗಿದೆ’ ಎಂದು ನುಡಿದರು.

ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಕೆ.ಷಡಕ್ಷರಿ ಮಾತನಾಡಿದರು. ಸಂಘಟಕ ವೋಡೋಫೋನ್ ಚಂದ್ರು ಇದ್ದರು. ಕದಳಿ ಬಳಗ, ಅಕ್ಕಮಹಾದೇವಿ ಮತ್ತು ವಿಷ್ಣು ಸಂಘದಿಂದ ಸ್ವಾಮೀಜಿ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT