ಗುರುವಾರ , ಜನವರಿ 28, 2021
23 °C
ಸ್ಮಾರ್ಟ್‌ಸಿಟಿಗೆ ‘ಮರಬಲಿ’ l ಮೂರು ರಾಷ್ಟ್ರೀಯ ಹೆದ್ದಾರಿ ಮತ್ತು ಒಂದು ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ

ವರ್ಷದಲ್ಲಿ 11 ಸಾವಿರ ಮರಗಳಿಗೆ ಕೊಡಲಿ!

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

ತುಮಕೂರು: ಸ್ಮಾರ್ಟ್‌ಸಿಟಿ ಮತ್ತು ಹೆದ್ದಾರಿ ಕಾಮಗಾರಿಗಾಗಿ 2020ನೇ ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ ಜಮೀನು ಮತ್ತು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟ 11 ಸಾವಿರಕ್ಕೂ ಹೆಚ್ಚು ಮರಗಳು ಬಲಿಯಾಗಿವೆ.

ಜಿಲ್ಲೆಯಲ್ಲಿ ಹಾದು ಹೋಗಿರುವ ಮೂರು ರಾಷ್ಟ್ರೀಯ ಹೆದ್ದಾರಿ ಮತ್ತು ಒಂದು ರಾಜ್ಯ ಹೆದ್ದಾರಿಯ ವಿಸ್ತರಣೆಯ ಜತೆಗೆ ಸ್ಮಾರ್ಟ್‌ಸಿಟಿ ಕಾಮಗಾರಿ ಭರದಿಂದ ಸಾಗಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಮರ ಕಡಿಯುವ ಪ್ರಕ್ರಿಯೆ ಈಗಲೂ ಮುಂದುವರಿದಿದೆ. ಮರ ಕಡಿಯಲು ಅನುಮತಿ ಕೋರಿ ಅರಣ್ಯ ಇಲಾಖೆಗೆ ಪ್ರಸ್ತಾವಗಳು ಸಲ್ಲಿಕೆಯಾಗುತ್ತಲೇ ಇವೆ.

ಇದರಿಂದ ಜಿಲ್ಲೆಯ ಪರಿಸರದ ಮೇಲೆ ಗಂಭೀರ ಪರಿಣಾಮವಾಗುತ್ತದೆ ಎಂದು ಆರೋಪಿಸಿ ಪರಿಸರಪ್ರಿಯರು ‘ಅಪ್ಪಿಕೊ’ ಮಾದರಿಯ ಚಳವಳಿ ಸಹ ನಡೆಸಿದ್ದರು. ಇದರಿಂದ ಏನೂ ಪ್ರಯೋಜನವಾಗಿಲ್ಲ. 

‘ಅರಣ್ಯ ಇಲಾಖೆಯು ನಿಯಮಾನುಸಾರ ತೆರಿಗೆ ಕಟ್ಟಿಸಿಕೊಂಡು 11,333 ಮರಗಳನ್ನು ಕಡಿಯಲು ಅನುಮತಿ ನೀಡಿದೆ. ಈಗಾಗಲೇ ಬಹಳಷ್ಟು ಮರಗಳನ್ನು ಕಡಿಯಲಾಗಿದೆ. ಮತ್ತಷ್ಟು ಮರಗಳು ನೆಲಕ್ಕೊರಗುವ ಹಂತದಲ್ಲಿವೆ. ಇದು ಬರೀ ಸರ್ಕಾರಿ ಜಮೀನು ಅರಣ್ಯ ಇಲಾಖೆ ವ್ಯಾಪ್ತಿಯ ಮರಗಳ ಸಂಖ್ಯೆ. ಇನ್ನೂ ಖಾಸಗಿ ಜಮೀನುಗಳಲ್ಲಿ ಕಡಿದ ಮರಗಳನ್ನು ಲೆಕ್ಕಹಾಕಿದರೆ ಇದರ ಮೂರು ಪಟ್ಟು ಮರಗಳು ಧರೆಗೆ ಉರುಳಿವೆ’ ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು.

ಕುಣಿಗಲ್, ಗುಬ್ಬಿ, ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಮರಗಳನ್ನು ಕಡಿಯಲಾಗಿದೆ. ರಾಜ್ಯದಲ್ಲಿಯೇ ತೀವ್ರ ಅಂತರ್ಜಲ ಕುಸಿದಿರುವ ತಾಲ್ಲೂಕುಗಳಲ್ಲಿ ಚಿಕ್ಕನಾಯಕನಹಳ್ಳಿ ಎರಡನೇ ಸ್ಥಾನದಲ್ಲಿದೆ.  

‘ಅಭಿವೃದ್ಧಿಗಾಗಿ ಮರ ಕಡಿಯುವುದು ಅನಿವಾರ್ಯ ಎನ್ನುವಂತೆ ಆಗಿದೆ. ಅನುಮತಿ ಕೊಡುವುದು ಸ್ವಲ್ಪ ತಡವಾದರೂ ಅರಣ್ಯ ಇಲಾಖೆಯವರು ಅಭಿವೃದ್ಧಿ ವಿರೋಧಿಗಳು ಎಂದು ಜನಪ್ರತಿನಿಧಿಗಳು ದೂರುತ್ತಾರೆ’ ಎಂದು ಇಲಾಖೆ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಒಂದು ಮರ ಕಡಿದರೆ 10 ಸಸಿ ನಾಟಿ

ಒಂದು ಮರ ಕಡಿದರೆ ಅದಕ್ಕೆ ಪ್ರತಿಯಾಗಿ 10 ಸಸಿಗಳನ್ನು ಬೆಳೆಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರತಿ ಸಸಿ ಬೆಳೆಸಲು ಅರಣ್ಯ ಇಲಾಖೆಗೆ ₹ 373 ನೀಡುತ್ತದೆ. ಹೆದ್ದಾರಿ ಕಾಮಗಾರಿ ಪೂರ್ಣವಾದ ನಂತರ ಇವುಗಳ ಎರಡೂ ಬದಿಯಲ್ಲಿ ಸಸಿಗಳನ್ನು ನೆಡಲಾಗುವುದು’ ಎಂದು ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಗಿರೀಶ್ ಮಾಹಿತಿ ನೀಡಿದರು.

‘ಇದರ ಜತೆಗೆ ಹೆದ್ದಾರಿಯ ಎರಡೂ ಬದಿಯಲ್ಲಿ ಸಸಿಗಳನ್ನು ನೆಡಲು ಪ್ರತಿ ಒಂದು ಕಿ.ಮೀ.ಗೆ ಹೆದ್ದಾರಿ ಪ್ರಾಧಿಕಾರದವರು ₹ 3 ಲಕ್ಷ ನೀಡಿದ್ದಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು