ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ ಕ್ಷೇತ್ರದ ಶಾಸಕರೀಗ ಸಚಿವರು, ನಿರೀಕ್ಷೆಯ ಭಾರವೂ ಹೆಚ್ಚು

Published 1 ಜೂನ್ 2023, 16:42 IST
Last Updated 1 ಜೂನ್ 2023, 16:42 IST
ಅಕ್ಷರ ಗಾತ್ರ

ತೋವಿನಕೆರೆ: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ. ಪರಮೇಶ್ವರ ಸಚಿವರಾಗಿರುವ ಕಾರಣ ಕ್ಷೇತ್ರದ ಜನರ ನಿರೀಕ್ಷೆಗಳೂ ಹೆಚ್ಚಿವೆ.

ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಪಂಚಾಯಿತಿ ವ್ಯಾಪ್ತಿಯ ಹುಣಸೆ ಬೆಳೆಯುವ ರೈತರು ಹುಣಸೆ ಅಭಿವೃದ್ಧಿ ಮಂಡಳಿ ಮತ್ತು ಶೀಥಲ ಸಂಗ್ರಹ ಘಟಕ ನಿರ್ಮಿಸುವಂತೆ ಹಲವು ವರ್ಷಗಳಿಂದ ಕೇಳುತ್ತಿದ್ದಾರೆ. ಪ್ರಚಾರ ಸಮಯದಲ್ಲಿ ಡಾ.ಜಿ.ಪರಮೇಶ್ವರ ಈ ಬಗ್ಗೆ ವಾಗ್ದಾನವನ್ನೂ ನೀಡಿದ್ದರು. ಬೆಳೆಗಾರರಲ್ಲಿ ಈಗ ಈ ವಿಷಯ ಚರ್ಚೆಯಾಗುತ್ತಿದ್ದು, ಶಾಸಕರ ಕಡೆ ನೋಡುತ್ತಿದ್ದಾರೆ.

ಜಿಲ್ಲೆಗೆ ಕೃಷಿ ಕಾಲೇಜು ಮಂಜೂರು ಬಗ್ಗೆ 2018ರಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿತ್ತು. ಅದೇ ಸಭೆಯಲ್ಲಿ ಚಾಮರಾಜನಗರದಲ್ಲಿ ಪ್ರಾರಂಭಿಸಲು ಒಪ್ಪಿಗೆ ನೀಡಲಾಗಿತ್ತು. ತೋವಿನಕೆರೆ ಪಂಚಾಯಿತಿ ವ್ಯಾಪ್ತಿಯ ನಾಲ್ಕು ತಾಲ್ಲೂಕಿಗೆ ಹೊಂದಿಕೊಂಡಿರುವ ಓಬನಹಳ್ಳಿ ಅರಣ್ಯ ಪ್ರದೇಶದಲ್ಲಿ ನೂರಾರು ಎಕರೆ ಜಮೀನು ಇದೆ. ಅಲ್ಲಿ ಕೃಷಿ ಕಾಲೇಜು ನಿರ್ಮಿಸುವಂತೆ ಜನರು ಹಲವು ಬಾರಿ ಮನವಿ ಸಲ್ಲಿಸಿದ್ದಾರೆ.

ಯಾದವ ಸಮುದಾಯದ ವಿದ್ಯಾರ್ಥಿಗಳ 1ರಿಂದ 10ನೇ ತರಗತಿ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಅಲೆಮಾರಿ ಮತ್ತು ಅರೆ ಅಲೆಮಾರಿ ಆಶ್ರಮ ವಸತಿ ಶಾಲೆ ನಿರ್ಮಾಣಕ್ಕಾಗಿ ಐದು ಎಕರೆ ಜಾಗ ಗುರುತಿಸಿದ್ದು, ಅದರ ನಿರ್ಮಾಣದ ಬಗ್ಗೆ ಗಮನ ಹರಿಸುವರ ಎಂದು ಸಮುದಾಯದವರು ಕಾಯುತ್ತಿದ್ದಾರೆ.

ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡತೆ ₹32 ಕೋಟಿ ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಣಕ್ಕೆ ಯೋಜನೆ ರೂಪಿಸಲಾಗಿತ್ತು. ಶಂಕುಸ್ಥಾಪನೆ ವೇಳೆ ಯೋಜನೆ ಬದಲಾಯಿಸಿ ₹12 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಟೆಂಡರ್ ಅಗಿತ್ತು. ಇದರ ಮರುಪರಿಶೀಲನೆಯತ್ತ ಜನರು ಎದುರು ನೋಡುತ್ತಿ‌ದ್ದಾರೆ.

ಸಿದ್ಧರಬೆಟ್ಟದಿಂದ ಪ್ರತಿ ವರ್ಷ ಹಲವು ಕೋಟಿ ಆದಾಯ ಬರುತ್ತಿದ್ದರೂ ಅಭಿವೃದ್ಧಿ ಶೂನ್ಯವಾಗಿದೆ ಎಂಬ ದೂರು ಇದೆ. ಕೂದಲು ತೆಗಿಸಲು ಪುರುಷ ಹಾಗೂ ಮಹಿಳೆಯರಿಗೆ ಸ್ನಾನ ಮಾಡಲು ಸುವ್ಯವಸ್ಥಿತ ಜಾಗ ಇಲ್ಲ. ಕಮಲದ ಕಟ್ಟೆ ಅಭಿವೃದ್ಧಿಯಾಗಬೇಕು. ಈ ಕಟ್ಟೆಗೆ ಹೊಂದಿಕೊಂಡಿರುವ ಶೌಚಾಲಯ ಭಕ್ತರ ಉಪಯೋಗಕ್ಕೆ ತೆರೆಯಬೇಕು ಎನ್ನವುದು ಭಕ್ತರ ಬಯಕೆ.

ದೇಶದ ಪ್ರಥಮ ದಲಿತ ರಾಜ ಕುರಂಗರಾಯ ಅಳ್ವಿಕೆ ಮಾಡಿದ ಸ್ಥಳ ಮತ್ತು ಕುರುಹುಗಳನ್ನು ಸಂರಕ್ಷಣೆ ಮಾಡಲು ಸಂಶೋಧನೆ ಮಾಡಲು ಮಾಡಲು ಅನುಕೂಲವಾಗುವಂತೆ ಕುರಂಗರಾಯರ ಹೆಸರಿನಲ್ಲಿ ಕೇಂದ್ರ ಸ್ಥಾಪಿಸಬೇಕು ಎನ್ನುವುದು ಸಂಶೋಧಕ ರವಿಕುಮಾರ್ ನೀಹ ಮನವಿ.

ತೋವಿನಕೆರೆಗೆ ಸರ್ಕಾರಿ ಕನ್ನಡ ಮತ್ತು ಆಂಗ್ಲ ಪ್ರೌಢಶಾಲೆ, ಐಟಿಐ ಕಾಲೇಜು ಮತ್ತು ಪಿಯು ತರಗತಿಗಳನ್ನು ಸ್ಥಾಪನೆಗೆ ವಿದ್ಯಾರ್ಥಿಗಳು, ಪೋಷಕರು ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT