ತುಮಕೂರಿನ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಗಿಡ ಬೆಳೆಸಿರುವುದು
ತುಮಕೂರಿನ ತೋಟಗಾರಿಕೆ ಇಲಾಖೆ ಕಚೇರಿ ಹೊರನೋಟ
ಡಿ.ಸಿ ಕಚೇರಿಗೆ ಸೂಕ್ತ ಜಾಗವೇ?
ಎಸ್.ಎಸ್.ಪುರಂನಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿ ಜಾಗ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಿಸಲು ಸೂಕ್ತ ಜಾಗವೇ ಎಂಬ ಪ್ರಶ್ನೆಯೂ ಮೂಡುತ್ತದೆ. ಈ ಜಾಗ ಬಿ.ಎಚ್.ರಸ್ತೆಗೆ ಹೊಂದಿಕೊಂಡಿದ್ದು ಎಸ್.ಎಸ್.ಪುರಂನ ಯಾವ ರಸ್ತೆಯೂ ವಿಶಾಲವಾಗಿಲ್ಲ. ಒಂದು ಕಾರು ತೆರಳುವ ಸಮಯದಲ್ಲಿ ಎದುರಿಗೆ ಮತ್ತೊಂದು ಕಾರು ಬಂದರೆ ಜಾಗ ಮಾಡಿಕೊಡುವುದೇ ಕಷ್ಟಕರವಾಗಿದೆ. ಇಂತಹ ಕಿಷ್ಕಿಂದೆಯಂತಿರುವ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಿದರೆ ವಾಹನಗಳ ದಟ್ಟಣೆ ಹೆಚ್ಚಾದರೆ ಸುಗಮ ಸಂಚಾರ ಸಾಧ್ಯವೇ? ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಪ್ರತಿ ದಿನ ಪ್ರತಿ ಕ್ಷಣವೂ ಟ್ರಾಫಿಕ್ ಜಾಮ್‌ನಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ಜಿಲ್ಲಾಧಿಕಾರಿ ಕಚೇರಿ ಎಂದ ಮೇಲೆ ಚಟುವಟಿಕೆಗಳು ಹೆಚ್ಚು ಜನರ ಭೇಟಿಯೂ ಅಧಿಕ. ಅಂತಹ ಸಮಯದಲ್ಲಿ ಸಂಚಾರ ದಟ್ಟಣೆಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಚಿಂತನೆ ನಡೆಸಿದಂತೆ ಕಾಣುತ್ತಿಲ್ಲ ಎಂಬ ಆಕ್ಷೇಪಣೆಗಳು ಕೇಳಿ ಬಂದಿವೆ. ನಗರದ ಪ್ರಗತಿ ಹಾಗೂ ಜನಸಂಖ್ಯೆಯ ಬೆಳವಣಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನೋಡುವುದಾದರೆ ಜಿಲ್ಲಾಧಿಕಾರಿ ಕಚೇರಿಗೆ ಎಂಟತ್ತು ಎಕರೆಯಷ್ಟು ವಿಶಾಲವಾದ ಜಾಗ ಬೇಕಾಗುತ್ತದೆ. ಅಂತಹ ಸ್ಥಳವನ್ನು ಪತ್ತೆಮಾಡಿ ಮಂಜೂರು ಮಾಡುವ ಬದಲು ಮುಂದಾಲೋಚನೆ ಇಲ್ಲದೆ ಪುಟ್ಟ ಜಾಗವನ್ನು ನೀಡಿ ಮುಂದೆ ಮತ್ತಷ್ಟು ಸಮಸ್ಯೆಯನ್ನು ತಂದೊಡ್ಡಿಕೊಳ್ಳಲಾಗುತ್ತಿದೆ ಎಂದು ಈ ಯೋಜನೆಯ ಒಳಹೊರಗನ್ನೂ ಬಲ್ಲವರು ಹೇಳುತ್ತಿದ್ದಾರೆ.
ರದ್ದು ಕೋರಿ ನಿರ್ಣಯ
ನಗರದಲ್ಲಿ ಶುಕ್ರವಾರ ನಡೆದ ಹಾಪ್‌ಕಾಮ್ಸ್ ಸರ್ವ ಸದಸ್ಯರ ಸಭೆಯಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗವನ್ನು ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಿಸಲು ಮಂಜೂರು ಮಾಡಿರುವುದನ್ನು ಖಂಡಿಸಲಾಯಿತು. ನಿರ್ದೇಶಕ ಕಾಮರಾಜ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಪಹಣಿಯಲ್ಲಿ ಮಾಡಿರುವ ತಿದ್ದುಪಡಿ ವಾಪಸ್ ಪಡೆಯಬೇಕು. ಈ ಜಾಗದಲ್ಲಿ ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಿಸಬಾರದು. ಈ ಸ್ಥಳವನ್ನು ರೈತರ ಚಟುವಟಿಕೆಗಳಿಗೆ ಮೀಸಲಿಡಬೇಕು. ತೆಗೆದುಕೊಂಡಿರುವ ನಿರ್ಧಾರ ರದ್ದುಪಡಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.