ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಖಾಸಗಿ ಪಾರಮ್ಯ: ನಲುಗಿದ ಸರ್ಕಾರಿ ಶಾಲೆ

ಸರ್ಕಾರಿ ಶಾಲೆಗೆ ದಾಖಲಿಸಲು ಪೋಷಕರ ನಿರಾಸಕ್ತಿ l ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲುಗೈ
Published 3 ಜೂನ್ 2024, 8:16 IST
Last Updated 3 ಜೂನ್ 2024, 8:16 IST
ಅಕ್ಷರ ಗಾತ್ರ

ವೈ.ಎನ್.ಹೊಸಕೋಟೆ: ಹೋಬಳಿಯ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತಗೊಂಡು ಅವಸಾನದತ್ತ ಸಾಗಿದೆ.

ಹೋಬಳಿಯಲ್ಲಿ 59 ಸರ್ಕಾರಿ ಶಾಲೆಗಳಿವೆ. 100 ಗಡಿ ದಾಖಲಾತಿ ದಾಟಿರುವ 14 ಶಾಲೆಗಳಿದ್ದರೆ, 10 ಸಂಖ್ಯೆ ಮೀರದ 5 ಶಾಲೆಗಳಿವೆ. ಅದರಂತೆ 20ರೊಳಗೆ ವಿದ್ಯಾರ್ಥಿಗಳು ಇರುವ ಶಾಲೆಗಳು 6, 50ರೊಳಗೆ 19, 100ಯೊಳಗಿನ 13 ಶಾಲೆಗಳು ಇವೆ. 7 ಸರ್ಕಾರಿ ಪ್ರೌಢಶಾಲೆಗಳಿವೆ. ‌‌‌ಬೂದಿಬೆಟ್ಟ, ಗಂಗಸಾಗರ ಮತ್ತು ಸಾಸಲಕುಂಟೆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 50ರೊಳಗೆ ಇದೆ.

ವಿಷಯವಾರು ಶಿಕ್ಷಕರ ಕೊರತೆ ಇದೆ. ಶಿಕ್ಷಕರ ಬೋಧನಾ ಸಮಯ ವಿವಿಧ ಯೋಜನೆ, ತರಬೇತಿಗಳಿಗೆ ಮೀಸಲು ಇಡಲಾಗಿದೆ. ಕೆಲವೆಡೆ ಶಾಲಾ ಸಮಿತಿ ಮತ್ತು ಶಾಲೆ ಸಾಮರಸ್ಯ ಕೊರತೆ, ಪೋಷಕರ ನಿರಾಸಕ್ತಿ, ಸಾರ್ವಜನಿಕರಲ್ಲಿನ ಕಡೆಗಣನೆ ಮನೋಭಾವ, ಖಾಸಗಿ ಸಂಸ್ಥೆಗಳ ಪೈಪೋಟಿ ಕಾರಣದಿಂದ ಸರ್ಕಾರಿ ಶಾಲೆಗಳು ಅವನತಿ ಹಾದಿ ಹಿಡಿಯುತ್ತಿವೆ.

ಆಡಳಿತ ವ್ಯವಸ್ಥೆ ಶಾಲಾ ಅಭಿವೃದ್ಧಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸುತ್ತಿದೆ. ಕಟ್ಟಡ, ಆಟದ ಮೈದಾನ, ಶೌಚಾಲಯ, ನೀರು, ಬೆಳಕು, ಪೀಠೋಪಕರಣ, ಆಟೋಪಕರಣ, ಕಂಪ್ಯೂಟರ್, ಸಾಧನ ಸಲಕರಣೆ, ಕಲಿಕಾ ಸಾಮಗ್ರಿ, ಬೋಧನ ಸಾಮಗ್ರಿ ಪೂರೈಸುತ್ತಿವೆ. ಮಕ್ಕಳನ್ನು ಶಾಲೆಗೆ ಸೆಳೆಯುವ ಸಲುವಾಗಿ ಮಧ್ಯಾಹ್ನದ ಬಿಸಿಯೂಟ, ಪೌಷ್ಟಿಕ ಆಹಾರ, ಹಾಲು, ಮೊಟ್ಟೆ, ಚಿಕ್ಕಿ ಇತ್ಯಾದಿ ನೀಡುತ್ತಿದೆ.

ಉಚಿತ ಸಮವಸ್ತ್ರ, ಶೂ, ಬ್ಯಾಗ್ ಯೋಜನೆಗಳು ಕಾರ್ಯಗತಗೊಂಡಿವೆ. ಆದರೆ, ಇವೆಲ್ಲವುಗಳಿಗಿಂತ ಅತಿಮುಖ್ಯವಾದ ವಿದ್ಯಾರ್ಥಿ ಕಲಿಕಾ ಗುಣಮಟ್ಟ ಸುಧಾರಿಸುವಲ್ಲಿ ಶಿಕ್ಷಣ ಇಲಾಖೆ ನೀತಿ ನಿಯಮ ಎಡವುತ್ತಿದೆ. ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆಮೆಗತಿಯಲ್ಲಿ ಸಾಗಿದೆ.

ಖಾಸಗಿ ಶಾಲೆಗಳ ಸ್ಪರ್ಧಾ ಕಾರ್ಯಸೂಚಿ ಎಲ್ಲ ವರ್ಗದ ಪೋಷಕರನ್ನು ಆಕರ್ಷಿಸುತ್ತಿದೆ. ಸಹಜವಾಗಿ ಉಳ್ಳವರು ಮಕ್ಕಳನ್ನು ಕಾನ್ವೆಂಟ್ ಸಂಸ್ಕೃತಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಅದೇ ಹಾದಿ ಹಿಡಿದ ಶ್ರಮಿಕ ವರ್ಗ ಕೂಡ ಕೂಲಿ–ನಾಲಿ ಮಾಡಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. 

ಹೋಬಳಿಯ ಸರ್ಕಾರಿ ಶಾಲೆಗಳಲ್ಲಿ ಒಟ್ಟು 68 ಶಿಕ್ಷಕರ ಕೊರತೆ ಇದೆ. ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದ್ದರೆ, ಅನುದಾನಿತ ಸಂಸ್ಥೆಗಳಲ್ಲಿ ದಾಖಲಾತಿಗೆ ಪರದಾಡುವ ಸ್ಥಿತಿ ಇದೆ. ಖಾಸಗಿ ಶಾಲೆಗಳು ಪೋಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಅಧಿಕ ದಾಖಲಾತಿಯೊಂದಿಗೆ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿವೆ.

ಶಿಕ್ಷಣ ವ್ಯವಸ್ಥೆ ಪಟ್ಟಭದ್ರ ಹಿತಾಸಕ್ತಿಗಳ ಕೈ ಸೇರಿದೆ. ಉಚಿತ ಮತ್ತು ಕಡ್ಡಾಯ ಎಂಬ ಸಮಾನ ಶಿಕ್ಷಣ ಪರಿಕಲ್ಪನೆ ಅಸಮಾನತೆ ಕ್ಷೇತ್ರವಾಗುತ್ತಿದೆ. ಪ್ರತಿಮಗು ತನ್ನ ಗ್ರಾಮದಿಂದಲೇ ಗುಣಮಟ್ಟದ ಶಿಕ್ಷಣ ಪಡೆಯುವಂತಾಗಬೇಕು. ಸರ್ಕಾರಿ ಶಾಲೆಯನ್ನು ಕಾರ್ಪೋರೇಟ್ ಶಾಲೆಗಳ ಮಟ್ಟಕ್ಕೆ ಕೊಂಡೊಯ್ಯುವ ಚಿಂತನೆ ಜನಪ್ರತಿನಿಧಿಗಳು ಮತ್ತು ಶಿಕ್ಷಣ ಪ್ರೇಮಿಗಳಲ್ಲಿ ಮೂಡಿದಾಗ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಮತ್ತು ಎಲ್ಲ ಸಮುದಾಯ ಬೆಳೆಯಲು ಸಾಧ್ಯ.

ಅಂಕಿ ಅಂಶ

ಸರ್ಕಾರಿ ಕಿ.ಪ್ರಾ. ಶಾಲೆ ;26

ಸರ್ಕಾರಿ ಹಿ.ಪ್ರಾ.ಶಾಲೆ;33

ಸರ್ಕಾರಿ ಪ್ರೌಢಶಾಲೆ;7

ಅನುದಾನಿತ ಶಾಲೆ;7

ಖಾಸಗಿ ಶಾಲೆ;8

ಸರ್ಕಾರಿ ವಸತಿ ಶಾಲೆ;4

ಹೋಬಳಿಯಾದ್ಯಂತ ತೆಲುಗು ವಾತಾವರಣವಿದೆ. ಕಾನ್ವೆಂಟ್ ಸಂಸ್ಕೃತಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಮುಂಚೂಣಿಯಲ್ಲಿ ನಡೆಯುತ್ತಿದ್ದು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಉಳಿಯುತ್ತಿರುವುದು ಕಂಡುಬರುತ್ತಿದೆ. ಈ ಶಾಲೆಗಳ ಅವಸಾನದೊಂದಿಗೆ ನಾಡಿನ ಭಾಷೆಗೂ ಕುತ್ತು ಬರಬಹುದು

–ಎ.ಓ.ನಾಗರಾಜು ಅಧ್ಯಕ್ಷ ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಲಿ

ಸರ್ಕಾರಿ ಶಾಲೆಗಳ ಬಹುತೇಕ ಶಿಕ್ಷಕರಲ್ಲಿ ಬದ್ಧತೆ ಕೊರತೆ ಇದೆ. ಪೋಷಕರು ಮಕ್ಕಳನ್ನು ದಾಖಲಿಸಲು ಯೋಚಿಸುತ್ತಾರೆ. ಸರ್ಕಾರಿ ಶಾಲೆ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿರುವುದು ಸಮುದಾಯ ಶಾಲೆಗಳ ಸ್ಥಿತಿಗತಿಗೆ ಸಾಕ್ಷಿಯಾಗಿದೆ

– ಕೆ.ಎನ್.ಸುಧೀಂದ್ರಕುಮಾರ್ ಅಧ್ಯಕ್ಷ ತಾಲ್ಲೂಕು ಅಂಗವಿಕಲರ ಒಕ್ಕೂಟ

ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಲಿ  ಪ್ರತಿ ಮಗುವಿಗೂ ಉತ್ತಮ ಗುಣಮಟ್ಟದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಸಿಗಬೇಕಾದರೆ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಸುಸಜ್ಜಿತ ಶಾಲೆ ರೂಪುಗೊಳ್ಳಬೇಕು. ಶಾಲೆಯಲ್ಲಿ ವಿಷಯವಾರು ಎಲ್ಲ ಅನುಭವಿ ಶಿಕ್ಷಕರನ್ನು ನೇಮಿಸಬೇಕು. ಅವರಿಗೆ ಬೋಧನಾ ಚಟುವಟಿಕೆ ಹೊರತಾದ ಯಾವ ಜವಾಬ್ದಾರಿ ಕೆಲಸ ನೀಡಬಾರದು. ಹೋಬಳಿ ಕೇಂದ್ರ ಸೇರಿದಂತೆ ಲಿಂಗದಹಳ್ಳಿ ಕೋಟಗುಡ್ಡ ಸ್ಥಳಗಳಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಾಬಲ್ಯವನ್ನು ವಿಸ್ತರಿಸಿವೆ. ಸೇವಾಕ್ಷೇತ್ರವಾಗಿದ್ದ ಶಿಕ್ಷಣ ವ್ಯವಸ್ಥೆ ಇಂದು ವ್ಯಾಪಾರಿ ರಂಗವಾಗಿದೆ. ಮಕ್ಕಳ ಭವಿಷ್ಯ ಕಷ್ಟವಾಗಲಿದೆ. ‌ ಐ.ಎ.ಜಯರಾಮಪ್ಪ ನಿವೃತ್ತ ಮುಖ್ಯಶಿಕ್ಷಕ ಇಂದ್ರಬೆಟ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT