ತುಮಕೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಎಂ.ಆರ್. ಮಮತ (47) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು.
ಅವರು ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರಿಗೆ ಪತಿ, ಪತ್ರಕರ್ತ ಎಚ್.ಆರ್.ರವೀಶ್, ಪುತ್ರ ಇದ್ದಾರೆ.
ಅವರು ಕಳೆದ 19 ವರ್ಷಗಳಿಂದ ವಾರ್ತಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತುಮಕೂರಿನಲ್ಲಿ ಹಿರಿಯ ಸಹಾಯಕ ನಿರ್ದೇಶಕಿಯಾಗಿ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದರು. ಅನಾರೋಗ್ಯದಿಂದಾಗಿ ಒಂದು ತಿಂಗಳಿಂದ ರಜೆಯಲ್ಲಿದ್ದರು. ಬೆಂಗಳೂರಿನ ಮನೆಯಲ್ಲಿ ಇದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದರು.
ತಾಲ್ಲೂಕಿನ ಹಾಲನೂರು ಗ್ರಾಮದ ತೋಟದಲ್ಲಿ ಆ.3ರಂದು (ಶನಿವಾರ) ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.