ಕುಣಿಗಲ್: ತಾಲ್ಲೂಕಿನ ಟಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಪ್ಪಸಂದ್ರ ಗಿರಿನಗರದ ಬಳಿ ಲೋಡ್‌ಗಟ್ಟಲೆ ಔಷಧಿ ಮತ್ತು ಮಾತ್ರೆಗಳನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದು, ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಗ್ರಾಮದ ರಾಜು ಅವರಿಗೆ ಸೇರಿದ ಜಮೀನಿನ ಹಳ್ಳದಲ್ಲಿ ಭಾನುವಾರ ಬೆಳಿಗ್ಗೆ ಮಾತ್ರೆಗಳ ರಾಶಿ ಕಂಡು ಬಂದಿದ್ದು, ಗಾಬರಿಗೊಂಡ ಗ್ರಾಮಸ್ಥರು ಕೂಡಲೇ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮರಿಯಪ್ಪ, ಸಂತೆಮಾವತ್ತೂರು ವೈದ್ಯರಾದ ಪ್ರಸನ್ನ, ಪಿಡಿಒಗೆ ಮಾಹಿತಿ ನೀಡಿದ್ದಾರೆ.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮರಿಯಪ್ಪ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಆರೋಗ್ಯಾಧಿಕಾರಿ ಡಾ.ಮರಿಯಪ್ಪ ಪ್ರತಿಕ್ರಿಯಿಸಿ, ರಾಶಿಗಟ್ಟಳೆ ಮಾತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗೆ ಸೇರಿದ್ದಲ್ಲ. ಶೇ 80ರಷ್ಟು ಮಾತ್ರೆಗಳು ಅವಧಿ ಮೀರಿದ್ದವಾಗಿವೆ. ಶೇ 20ರಷ್ಟು ಬಳಕೆಗೆ ಯೋಗ್ಯವಾಗಿದ್ದರೂ, ಪ್ರಯೋಜನಕ್ಕೆ ಬಾರಾದಾಗಿವೆ. ಯಾವುದೋ ಔಷಧಿ ಕಂಪನಿ ಅಥವಾ ಸಗಟು ಮಾರಾಟಗಾರರು ಸಂಗ್ರಹಿಸಿದ್ದ ಮಾತ್ರೆಗಳು ಅವಧಿ ಮೀರಿದ್ದು, ನಿಯಮಾವಳಿ ಪ್ರಕಾರ ರೀ ಸೈಕಲಿಂಗ್ ಪದ್ಧತಿಯಲ್ಲಿ ನಾಶಪಡಿಸಬೇಕಾಗಿತ್ತು. ಆದರೆ ಹಾಗೆ ಮಾಡದೆ ಲಾರಿಯೊಂದರಲ್ಲಿ ತಂದು ಸುರಿದಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.
ಪೊಲೀಸರಿಗೆ ಮತ್ತು ಔಷಧಿ ನಿಯಂತ್ರಕರಿಗೆ ದೂರು ನೀಡುವುದಾಗಿ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.