ಬುಧವಾರ, ಅಕ್ಟೋಬರ್ 20, 2021
24 °C

ಅಸ್ಪೃಶ್ಯತೆ ಜೀವಂತ: ಬದಲಾವಣೆ ಅಗತ್ಯ- ಡಿವೈಎಸ್‌ಪಿ ರಮೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ‘ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ ಎನ್ನುವುದನ್ನು ಒಪ್ಪಿಕೊಂಡು ಬದಲಾವಣೆಗೆ ಶ್ರಮಿಸಬೇಕಿದೆ’ ಎಂದು ಡಿವೈಎಸ್‌ಪಿ ರಮೇಶ್ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ, ಮುಜರಾಯಿ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಎಲ್ಲ ಸಮುದಾಯದವರಿಗೆ ದೇವಾಲಯಗಳಲ್ಲಿ ಮುಕ್ತ ಪ್ರವೇಶ ಕಲ್ಪಿಸುವ ಕುರಿತು ದೇವಾಲಯಗಳ ಆಡಳಿತ ಮಂಡಳಿ ಮತ್ತು ಅರ್ಚಕರಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಅಸ್ಪೃಶ್ಯತೆ ಆಚರಣೆಯಿಂದಾಗಿ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಅನಿಷ್ಠ ಪದ್ಧತಿ ಬಗ್ಗೆ ಯಾರು ದೂರು ನೀಡಿಲ್ಲ. ಆದರೂ ಸತ್ಯವನ್ನು ಒಪ್ಪಿಕೊಂಡು, ನಿರ್ಮೂಲನೆಗೆ ಶ್ರಮಿಸಬೇಕು. ಮುಜರಾಯಿ ಇಲಾಖೆ ಅತ್ಯಂತ ಶ್ರೀಮಂತ ಇಲಾಖೆಯಾಗಿದ್ದು, ಎಲ್ಲ ದೇವಾಲಯಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ, ಎಚ್ಚರಿಕೆಯ ಫಲಕ ಅಳವಡಿಸಿ, ಜನಜಾಗೃತಿ ಮೂಡಿಸಬೇಕಿದೆ ಎಂದರು.

ತಹಶೀಲ್ದಾರ್ ಮಹಬಲೇಶ್ವರ ಮಾತನಾಡಿ, ದೇವಾಲಯಗಳ ಅರ್ಚಕರ ಸಮಸ್ಯೆಗಳಿಗೆ ಸ್ಪಂದಿಸಲು ತಾಲ್ಲೂಕು ಆಡಳಿತ ಸಿದ್ಧವಿದೆ. ಅನಿಷ್ಠ ಪದ್ಧತಿ ಮತ್ತು ಕಂದಾಚಾರ ಪದ್ಧತಿಗಳನ್ನು ತೊಡೆದು, ಸರ್ವರಿಗೂ ದೇವಾಲಯ ಪ್ರವೇಶಕ್ಕೆ ಮತ್ತು ಪೂಜೆಗೆ ಅವಕಾಶ ನೀಡಬೇಕು ಎಂದು ಸೂಚನೆ ನೀಡಿದರು.

ಅರ್ಚಕರು ಅಭಿಪ್ರಾಯ ವ್ಯಕ್ತಪಡಿಸಿ, ದೇಗುಲಗಳಲ್ಲಿ ಅರ್ಚಕರು ತಾರತಮ್ಯ ಮಾಡುತ್ತಿಲ್ಲ. ಕೆಲ ಗ್ರಾಮಗಳಲ್ಲಿ ಪರಿಶಿಷ್ಟ ವರ್ಗದವರು ದೇವಾಲಯಕ್ಕೆ ಬರುವುದಿಲ್ಲ. ಅವರೇ ಮುಖ್ಯದ್ವಾರದಲ್ಲಿ ನಿಂತು ಕೈಮುಗಿದು ಹೋಗುತ್ತಾರೆ. ಕೆಲ ಗ್ರಾಮದಲ್ಲಿ ಗ್ರಾಮಸ್ಥರ ವಿರೋಧವಿರುವುದರಿಂದ ದೇವಾಲಯಕ್ಕೆ ಪ್ರವೇಶ ಮಾಡುತ್ತಿಲ್ಲ. ಸಂದಿಗ್ಧ ಪರಿಸ್ಥಿತಿಯಲ್ಲಿ ಅರ್ಚಕರು ಮೌನವಹಿಸಬೇಕಾಗುತ್ತದೆ ಎಂದರು.

ಎಲ್ಲ ದೇವಾಲಯಗಳಿಗೂ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆ ಮತ್ತು ಎಚ್ಚರಿಕೆಯ ಫಲಕಗಳನ್ನು ಮುಜರಾಯಿ ಇಲಾಖೆಯಿಂದ ವ್ಯವಸ್ಥೆ ಮಾಡಲು, ಹೆಚ್ಚಿನ ಮೌಲ್ಯದ ಒಡವೆಗಳಿರುವ ದೇವಾಲಯಗಳ ಅರ್ಚಕರಿಗೆ ಅಗತ್ಯವಿದ್ದರೆ ಬಂದೂಕು ನೀಡಲು ಮನವಿ ಮಾಡಿದರು.

ದಲಿತ ಜಾಗೃತಿ ಸಮಿತಿಯ ದಲಿತ್ ನಾರಾಯಣ್ ಮಾತನಾಡಿ, ದೇವಾಲಯಗಳು ಸಮಾನತೆ ಸಾರುವ ಕೇಂದ್ರಗಳಾಗುವ ಬದಲು, ಅಸಮಾನತೆ ಸಾರುವ ಕೇಂದ್ರಗಳಾಗುತ್ತಿವೆ. ಈ ರೀತಿಯ ವರ್ತನೆ ಹಿಂದೂ ಧರ್ಮಕ್ಕೆ ಅವಮಾನ. ತಾಲ್ಲೂಕಿನಲ್ಲಿ ಮೊದಲಿಗೆ ದೇವಾಲಯಗಳ ಮುಂದೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿ ಫಲಕ ಬರೆಸಲಾಗಿತ್ತು. ಸುಣ್ಣ ಬಣ್ಣ ಬಳಿಯುವ ನೆಪದಲ್ಲಿ ಫಲಕಗಳು ಕಾಣೆಯಾಗಿವೆ. ಗ್ರಾಮೀಣ ಪ್ರದೇಶದ ದೇವಾಲಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅರ್ಚಕರು ಮನಸ್ಸು ಮಾಡಿ ಹೊರಗಡೆ ನಿಂತು ಕೈ ಮುಗಿಯುವವರನ್ನು ದೇವಾಲಯಗಳಿಗೆ ಕರೆದು ಪೂಜೆಗೆ ಅವಕಾಶ ನೀಡುವ ಮೂಲಕ ಬದಲಾವಣೆಗೆ ಪ್ರೇರಣಾಕರ್ತರಾಗಬೇಕು ಎಂದರು.

ದಲಿತ ಸಮನ್ವಯ ಸಮಿತಿಯ ರಾಮಚಂದ್ರಯ್ಯ, ದೇವಾಲಯಗಳಿಗೆ ಮುಕ್ತ ಪ್ರವೇಶ ನೀಡುವ ಜತೆಗೆ ಪರಿಶಿಷ್ಟ ವರ್ಗದವರಿಗೆ ತರಬೇತಿ ನೀಡಿ ಅರ್ಚಕ ವೃತ್ತಿಯಲ್ಲಿ ತೊಡಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಿಪಿಐ ಗುರುಪ್ರಸಾದ್‌, ಡಿ.ಎಲ್.ರಾಜು ಮತ್ತು ತಾಲ್ಲೂಕಿನ ಮುಜರಾಯಿ ದೇವಾಲಯಗಳ ಅರ್ಚಕರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು