ಶುಕ್ರವಾರ, ಡಿಸೆಂಬರ್ 3, 2021
26 °C

ವಾಲ್ಮೀಕಿ ಆದರ್ಶ ಸಮಾಜಕ್ಕೆ ಅಡಿಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ಸಾವಿರಾರು ವರ್ಷಗಳ ಹಿಂದೆಯೇ ರಾಮಾಯಣದಂತಹ ಮಹಾಕಾವ್ಯ ರಚಿಸಿ ಆದರ್ಶ ಸಮಾಜಕ್ಕೆ ಅಡಿಪಾಯ ಹಾಕಿಕೊಟ್ಟ ಮಹಾನ್ ವ್ಯಕ್ತಿ ಮಹರ್ಷಿ ವಾಲ್ಮೀಕಿ ಎಂದು ನಗರಸಭೆ ಅಧ್ಯಕ್ಷ ಪಿ.ಜೆ.ರಾಮಮೋಹನ್ ತಿಳಿಸಿದರು.

ನಗರದ ಮಿನಿ ವಿಧಾನಸೌಧದಲ್ಲಿ ಬುಧವಾರ ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಅಕ್ಷರ ಜ್ಞಾನ ಇಲ್ಲದ ವಾಲ್ಮೀಕಿ ತಪಸ್ಸು ಮಾಡಿ ಅಕ್ಷರ ಜ್ಞಾನ ಪಡೆದು ರಾಮಾಯಣದಂತಹ ಮಹಾಕಾವ್ಯ ಬರೆದರು. ರಾಮಾಯಣವನ್ನು ಎಲ್ಲ ಭಾಷೆಗೂ ತರ್ಜುಮೆ ಮಾಡಿ ಎಲ್ಲರೂ ಓದಿ, ತಿಳಿದುಕೊಳ್ಳುವ ಅವಕಾಶ ಇದೀಗ ಸಿಕ್ಕಿದೆ. ವಾಲ್ಮೀಕಿ ತನ್ನ ಜೀವನವನ್ನು ಪರಿವರ್ತನೆ ಮಾಡಿಕೊಂಡು ಸಮಾಜಕ್ಕೆ ತನ್ನನ್ನು ತಾನು  ಅರ್ಪಿಸಿಕೊಂಡು ಧೀಮಂತ ವ್ಯಕ್ತಿಯಾದರು ಎಂದರು.

ತಹಶೀಲ್ದಾರ್ ಆರ್.ಜಿ. ಚಂದ್ರಶೇಖರ್ ಮಾತನಾಡಿ, ಜಾತಿಯ ನೆಪವೊಡ್ಡಿ ಅಂಧಶ್ರದ್ಧೆಯಿಂದ ಸಾಹಿತ್ಯವನ್ನು ತೆಗಳುತ್ತಾ, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಮುಂದಾಗುವವರು ಒಮ್ಮೆ ರಾಮಾಯಣ, ಮಹಾಭಾರತದಂತಹ ಮಹಾನ್ ಕಾವ್ಯಗಳನ್ನು ಓದಬೇಕಿದೆ. ಸಮಾಜದಲ್ಲಿ ಇಂದು ನಡೆಯುತ್ತಿರುವ ವಿಚಲಿತ ಘಟನೆಗಳನ್ನು ತಡೆಯಲು ರಾಮಾಯಣದಂತಹ ಮಹಾನ್ ಕಾವ್ಯಗಳ ತಾತ್ಪರ್ಯ ಅರಿಯಬೇಕಿದೆ ಎಂದರು.

ವಾಲ್ಮೀಕಿ ಸಮುದಾಯದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಮಣಕೀಕೆರೆ ಭುವನೇಶ್ವರಿ ಶಾಲೆಯ ಲಾವಣ್ಯ, ಗಂಗನಘಟ್ಟದ ಸರ್ಕಾರಿ ಪ್ರೌಢಶಾಲೆಯ ರಂಗನಾಥ ಅವರನ್ನು ಗೌರವಿಸಿದರು.

ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ರವೀಶ್ ಉಪನ್ಯಾಸ ನೀಡಿದರು. ಡಿವೈಎಸ್‍ಪಿ ಸಿದ್ದಾರ್ಥ ಗೋಯಲ್, ವಾಲ್ಮೀಕಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ಜಯಸಿಂಹ, ಮುಖಂಡರಾದ ಬಳ್ಳೇಕಟ್ಟೆ ಸುರೇಶ್, ಸೂಗೂರು ದಿಲೀಪ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ದಿನೇಶ್, ಪೌರಾಯುಕ್ತ ಉಮಾಕಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಇದ್ದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.