ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಹೇಮೆ’ಗಾಗಿ ವಿಧಾನಸೌಧ ಚಲೋ

Published 2 ಜೂನ್ 2024, 6:08 IST
Last Updated 2 ಜೂನ್ 2024, 6:08 IST
ಅಕ್ಷರ ಗಾತ್ರ

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಸ್ಥಗಿತಗೊಳಿಸದಿದ್ದರೆ ಮುಂದಿನ ವಿಧಾನಸಭೆ ಅಧಿವೇಶನದ ಸಮಯದಲ್ಲಿ ವಿಧಾನಸೌಧ ಚಲೋ ನಡೆಸುವುದು, ಜೂನ್ 10ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲು ಶನಿವಾರ ನಗರದಲ್ಲಿ ನಡೆದ ಹೋರಾಟಗಾರರ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮುಂದಿನ ಹೋರಾಟದ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದು, ಅದರ ಭಾಗವಾಗಿ ವಿಧಾನಸೌಧ ಚಲೋ ನಡೆಸಲು ಒಮ್ಮತಕ್ಕೆ ಬರಲಾಯಿತು ಎಂದು ಹೋರಾಟ ಸಮಿತಿ ನೇತೃತ್ವ ವಹಿಸಿರುವ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.

ಶಾಸಕ ಬಿ.ಸುರೇಶ್‌ಗೌಡ, ‘ಲಿಂಕ್ ಕೆನಾಲ್ ಹಾದು ಹೋಗುವ ಎಲ್ಲಾ ಗ್ರಾಮ, ಪ್ರದೇಶದಲ್ಲಿನ ಜನರಿಗೆ ಅರಿವು ಮೂಡಿಸಿ ಹೋರಾಟ ತೀವ್ರಗೊಳಿಸಲಾಗುವುದು. ಹೋರಾಟ ಹತ್ತಿಕ್ಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಈಚೆಗೆ ನಡೆದ ಪ್ರತಿಭಟನೆಗೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಜನಪ್ರತಿನಿಧಿಗಳು, ರೈತರು, ವಿವಿಧ ಪಕ್ಷಗಳ ಪ್ರಮುಖರು, ಸಂಘಟನೆ ಮುಖಂಡರನ್ನು ಬಂಧಿಸಿ ಜಿಲ್ಲೆಗೆ ಅಪಮಾನ ಮಾಡಲಾಗಿದೆ’ ಎಂದು ಹೇಳಿದರು.

ಹೇಮಾವತಿ ಪರವಾಗಿ ನಡೆಯುತ್ತಿದ್ದ ಹೋರಾಟಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಮಾಡಿದ್ದಾರೆ. ಜಿಲ್ಲೆಯ ಜನರ ಹಿತ ರಕ್ಷಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ಜಿಲ್ಲೆಯ ಕಾಂಗ್ರೆಸ್ ಶಾಸಕರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಲಿಂಕ್ ಕೆನಾಲ್ ಹಾದು ಹೋಗುವ 34.5 ಕಿ.ಮೀ ಉದ್ದಕ್ಕೂ ಹಳ್ಳಿ, ರಸ್ತೆಯಲ್ಲಿ ಮಾನವ ಸರಪಣಿ ನಿರ್ಮಿಸಿ ಹೋರಾಟ ಮಾಡಲಾಗುವುದು. ಯೋಜನೆ ಬಗ್ಗೆ ಮಾಹಿತಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಹೋಗಲಾಗುವುದು ಎಂದರು.

ಗುಬ್ಬಿ ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ‘ಗುಬ್ಬಿಯಲ್ಲಿ ದೊಡ್ಡ ಮಟ್ಟದ ಸಮಾವೇಶ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಿ.ಪರಮೇಶ್ವರ ಅವರು ಹಿಟ್ಲರ್ ರೀತಿ ನಡೆದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ಕೊರಟಗೆರೆ ಮುಖಂಡ ಬಿ.ಎಚ್.ಅನಿಲ್ ಕುಮಾರ್, ‘ಎಲ್ಲಾ ಹೋರಾಟಗಾರರು ಒಟ್ಟಾಗಿ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು’ ಎಂದು ಹೇಳಿದರು.

ಮಾಜಿ ಶಾಸಕ ಎಚ್.ನಿಂಗಪ್ಪ, ಮುಖಂಡರಾದ ಸಂಪಿಗೆ ಜಗದೀಶ್, ನಿಟ್ಟೂರು ಪ್ರಕಾಶ್, ವಕೀಲ ತುರುವೇಕೆರೆ ಜಗದೀಶ್, ಧನಿಯಾಕುಮಾರ್, ಧನಂಜಯ ಆರಾಧ್ಯ, ದ್ಯಾಮೇಗೌಡ, ಸಾಗರನಹಳ್ಳಿ ನಂಜೇಗೌಡ, ಹೊಸಕೋಟೆ ನಟರಾಜು, ನರಸಿಂಹಯ್ಯ, ವೆಂಕಟಾಚಲಯ್ಯ, ಪಂಚಾಕ್ಷರಯ್ಯ, ಕೆ.ಪಿ.ಮಹೇಶ, ಬೆಳಗುಂಬ ಪ್ರಭಾಕರ್, ಪುರವರ ಮೂರ್ತಿ, ಕೊರಟಗೆರೆ ದರ್ಶನ್, ಸೊಗಡು ಕುಮಾರಸ್ವಾಮಿ, ಎಸ್.ಶಿವಪ್ರಸಾದ್, ಆಟೊ ನವೀನ್, ತರಕಾರಿ ಮಹೇಶ್, ಗೋವಿಂದರಾಜು, ಶಬ್ಬೀರ್ ಅಹಮ್ಮದ್, ರಾಮಚಂದ್ರರಾವ್, ಕೆ.ಹರೀಶ್, ಮದನ್ ಸಿಂಗ್, ಎನ್.ಗಣೇಶ್, ಇಮ್ರಾನ್, ವಿವೇಕ್, ರವಿಕುಮಾರ್ ಯಾದವ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT