ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದು ಭಿಕ್ಷೆಯಲ್ಲ: ಟಿ.ಬಿ.ಜಯಚಂದ್ರ

Last Updated 10 ಸೆಪ್ಟೆಂಬರ್ 2020, 3:07 IST
ಅಕ್ಷರ ಗಾತ್ರ

ಶಿರಾ: ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದು ಭಿಕ್ಷೆಯಲ್ಲ, ಅದು ನಮ್ಮ ಹಕ್ಕು. ಯಾರೇ ಅಧಿಕಾರದಲ್ಲಿ ‌ಇದ್ದರೂ ಮದಲೂರು ಕೆರೆಗೆ ನೀರು ಹರಿಸಲೇಬೇಕು ಎಂದು ಕಾಂಗ್ರೆಸ್‌ ಮುಖಂಡ ಟಿ.ಬಿ. ಜಯಚಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೆಆರ್‌ಎಸ್ ಅಣೆಕಟ್ಟೆ ಕಟ್ಟಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಸರ್‌ ಎಂ. ವಿಶ್ವೇಶ್ವರಯ್ಯ. ಪ್ರತಿಬಾರಿ ನೀರು ತುಂಬಿದಾಗ ಮುಖ್ಯಮಂತ್ರಿ ಹಾಗೂ ಸಚಿವರು ಅಣೆಕಟ್ಟೆಗೆ ಬಾಗಿನ ಅರ್ಪಿಸುತ್ತಾರೆ. ಅಂದ ಮಾತ್ರಕ್ಕೆ ಮುಖ್ಯಮಂತ್ರಿ ಹಾಗೂ ಸಚಿವರು ನೀರು ಹರಿಸಿದ್ದಾರೆ ಎಂದು ಆರ್ಥವಲ್ಲ. ಅದರ ಗೌರವ ಮೈಸೂರು ಮಹಾರಾಜರು ಹಾಗೂ ವಿಶ್ವೇಶ್ವರಯ್ಯ ಅವರಿಗೆ ಸಲ್ಲಬೇಕು. ಅದೇ ರೀತಿ ಮದಲೂರು ಯೋಜನೆ ನನ್ನ ಕನಸಿನ ಕೂಸು. ಅದನ್ನು ರೂಪಿಸಿ ಅನುಷ್ಠಾನಗೊಳಿಸಿದ್ದು ನಾನು. ಒಂದು ರೀತಿಯಲ್ಲಿ ನಾನೇ ಆ ಯೋಜನೆಗೆ ಅಪ್ಪ, ಅಮ್ಮ’
ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಿರಾ ಕ್ಷೇತ್ರದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಅವರ ಕ್ಷೇತ್ರದ ಸಾಸಲು ಕೆರೆಗೆ 6 ತಿಂಗಳಲ್ಲಿ ಹೇಮೆ ಹರಿಸುವುದಾಗಿ ಹೇಳಿದ್ದರು. ಎರಡೂವರೆ ವರ್ಷವಾದರೂ ಅವರಿಂದ ನೀರು ಹರಿಸಲು ಸಾಧ್ಯವಾಗಿಲ್ಲ. ‘ಮದಲೂರು ಕೆರೆಗೆ ನೀರು ನಿಗದಿ ಮಾಡಿಲ್ಲ, ಯೋಜನೆ ಅವೈಜ್ಞಾನಿಕ ಹಾಗಾಗಿ ನೀರು ಹರಿಸಲು ಸಾಧ್ಯವಿಲ್ಲ’ ಎನ್ನುತ್ತಾರೆ ಇಂತಹವರಿಗೆ ಶಿರಾ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ನುಡಿದರು.

‘ಉಪಚುನಾವಣೆ ನಿರೀಕ್ಷೆಯಲ್ಲಿ ಬಿಜೆಪಿಯ ಡ್ರಾಮ ಕಂಪನಿ ಶಿರಾಕ್ಕೆ ಬಂದಿದೆ. ಚುನಾವಣೆ ನಂತರ ಗಂಟು ಮೂಟೆ ಕಟ್ಟಿಕೊಂಡು ಹೋಗುತ್ತಾರೆ. ಈಗ ಬಂದಿರುವವರು ಪ್ರಚಾರ ಮಾಡಿಕೊಂಡು ಹೋಗಲಿ. ಶಿರಾ ಜನರು 16 ವರ್ಷದಿಂದ ಹೇಮೆ ನೀರು ಕುಡಿಯುತ್ತಿದ್ದಾರೆ ಈಗ ಇವರು ನೀರಿನ ವಿಚಾರದಲ್ಲಿ ರಾಜಕೀಯ ಬೆರೆಸಿ ಶಿರಾದ ಸ್ವಾಭಿಮಾನ ಕೆಣಕುತ್ತಿದ್ದಾರೆ’ ಎಂದರು.

ಈಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರ ಮನವೊಲಿಸಿ ಮೇಕೆದಾಟು ಯೋಜನೆ ಪ್ರಾರಂಭಿಸಲಿ ಅದನ್ನು ಬಿಟ್ಟು ಮದಲೂರು ಕೆರೆಯ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಬರಗೂರು ನಟರಾಜು, ಕಾನೂನು ಘಟಕದ ಅಧ್ಯಕ್ಷ ಎಚ್. ಗುರುಮೂರ್ತಿ, ಡಿ.ಸಿ. ಆಶೋಕ್, ಎಂ.ಎನ್. ರಾಜು ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT