ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆ ಕೊಲೆ: ಗಂಡ, ಮೈದುನಗೆ ಜೀವಾವಧಿ ಶಿಕ್ಷೆ

Published : 9 ಆಗಸ್ಟ್ 2024, 16:01 IST
Last Updated : 9 ಆಗಸ್ಟ್ 2024, 16:01 IST
ಫಾಲೋ ಮಾಡಿ
Comments

ತುಮಕೂರು: ಕಳ್ಳತನದ ಸಂಚು ರೂಪಿಸಿ ಪತ್ನಿಯನ್ನೇ ಕೊಲೆ ಮಾಡಿದ್ದ ಎಂ.ಎಸ್‌.ಮಹೇಶ್‌, ಈತನ ಸಹೋದರ ರವೀಶ್‌ ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ನಗರದ ಚಿಕ್ಕಪೇಟೆಯ ಪಾಂಡುರಂಗ ನಗರದ ನಿವಾಸಿ ದೇವಿಕಾ ಕೊಲೆಯಾದ ಮಹಿಳೆ. 2013ರಲ್ಲಿ ಮಹೇಶ್‌ ಮತ್ತು ದೇವಿಕಾ ಮದುವೆಯಾಗಿತ್ತು. ವರದಕ್ಷಿಣೆ ವಿಚಾರದಲ್ಲಿ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದರ ಮಧ್ಯೆ ಮಹೇಶ್‌ ಮತ್ತೊಬ್ಬ ಯುವತಿಯನ್ನು ಪ್ರೀತಿಸಿದ್ದು, ಆಕೆಯ ಜತೆ ವಿವಾಹಕ್ಕೆ ಒಪ್ಪಿಕೊಳ್ಳುವಂತೆ ದೇವಿಕಾಗೆ ಒತ್ತಾಯಿಸುತ್ತಿದ್ದ. ಇದಕ್ಕೆ ಒಪ್ಪದಿದ್ದಾಗ ಸಹೋದರನ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ.

2019ರ ಏ. 6ರಂದು ಸಂಜೆ ಮಾರುತಿ ವ್ಯಾನ್‌ನಲ್ಲಿ ಶಿರಾ ಬಳಿಯ ಮೂಗನಹಳ್ಳಿ ದೇವಸ್ಥಾನಕ್ಕೆ ಹೋಗಿ ವಾಪಸ್‌ ಬರುವಾಗ ರವೀಶ್‌ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೈಕ್‌ನಲ್ಲಿ ಬಂದು ವ್ಯಾನ್‌ ತಡೆದು ನಿಲ್ಲಿಸಿದ್ದ. ಚಾಕುವಿನಿಂದ ದೇವಿಕಾ ಕುತ್ತಿಗೆ ಸೀಳಿದ್ದ. ಆಕೆ ಮೈಮೇಲಿದ್ದ ಚಿನ್ನಾಭರಣವನ್ನು ಮಹೇಶ್ ಕಿತ್ತುಕೊಂಡಿದ್ದ. ಯಾರಿಗೂ ಅನುಮಾನ ಬಾರದಿರಲೆಂದು ದೇವಿಕಾ ಮೈಮೇಲೆ, ವ್ಯಾನ್‌ನಲ್ಲಿ ಖಾರದ ಪುಡಿ ಚೆಲ್ಲಿದ್ದ.

‘ಯಾರೋ ಕಳ್ಳರು ವ್ಯಾನ್‌ ಅಡ್ಡಗಟ್ಟಿ ದೇವಿಕಾಗೆ ಚಾಕುವಿನಿಂದ ಇರಿದು, ಚಿನ್ನದ ಒಡವೆ ಕದ್ದು ಪರಾರಿಯಾಗಿದ್ದಾರೆ’ ಎಂದು ಮಹೇಶ್‌ ಸುದ್ದಿ ಹಬ್ಬಿಸಿದ್ದ. ಹಲ್ಲೆ ಮಾಡಿದ ಸಮಯದಲ್ಲಿ ಧರಿಸಿದ್ದ ಬಟ್ಟೆಯನ್ನು ರವೀಶ್ ಸುಟ್ಟು ಹಾಕಿದ್ದ.

ಈ ಕುರಿತು ಕಳ್ಳಂಬೆಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ವಿ.ಎಸ್‌.ಶಿವಕುಮಾರ್‌ ಪ್ರಕರಣದ ತನಿಖೆ ನಡೆಸಿದ್ದರು. ಕಿರಣ್‌ಕುಮಾರ್‌ ತನಿಖಾ ಸಹಾಯಕರಾಗಿದ್ದರು. ತನಿಖೆ ಸಮಯದಲ್ಲಿ ಕೊಲೆಗೆ ಸಂಚು ರೂಪಿಸಿದ ವಿಷಯ ಗೊತ್ತಾಗಿದೆ. ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗಿತ್ತು.

ವಿಚಾರಣೆ ಸಮಯದಲ್ಲಿ ಕೊಲೆ ಮಾಡಿದ್ದು ದೃಢಪಟ್ಟಿದ್ದು, ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಧೀಶ ಎಚ್‌.ಅನಂತ್‌ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಬಿ.ಎ.ಕವಿತಾ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT