ಗುರುವಾರ , ಜನವರಿ 23, 2020
22 °C
ಜಿಲ್ಲಾ ಪಂಚಾಯಿತಿ ಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ

ನೀರಿನ ಘಟಕ ದುರಸ್ತಿಗೆ ಕ್ರಮವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ದುರಸ್ತಿಗೆ ಬಂದಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮೊದಲು ದುರಸ್ತಿಗೊಳಿಸಬೇಕು ಎಂದು ಬುಧವಾರ ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ) ಸಭೆಯಲ್ಲಿ  ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ (ಸಿಇಒ) ಶುಭಾ ಕಲ್ಯಾಣ್ ಸೂಚಿಸಿದರು.

ಸಭೆ ಆರಂಭದಲ್ಲಿಯೇ ಗ್ರಾಮೀಣ ಕುಡಿಯುವ ನೀರು ಮತ್ತು ಶುದ್ಧ ನೀರಿನ ಘಟಕಗಳ ಬಗ್ಗೆ ಪ್ರಸ್ತಾಪವಾಯಿತು. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನವ್ಯಬಾಬು ಮತ್ತು ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅವರು ಈ ವಿಚಾರಕ್ಕೆ ಧ್ವನಿಗೂಡಿಸಿದರು.

ಆಗ ಜಿಲ್ಲೆಯಲ್ಲಿ 1,587 ಶುದ್ಧ ನೀರಿನ ಘಟಕಗಳಿವೆ. ಇವುಗಳಲ್ಲಿ 138 ದುರಸ್ತಿಯಲ್ಲಿವೆ. 30 ಘಟಕಗಳು ಪೂರ್ಣವಾಗಿ ಸ್ಥಗಿತವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸ್ಥಗಿತವಾಗಿರುವ ಘಟಕಗಳ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಂದ ತಾಲ್ಲೂಕುವಾರು ಮಾಹಿತಿ ಪಡೆಯಲಾಯಿತು.

ಆಗ ಸಿಇಒ, ಗ್ರಾಮ ಪಂಚಾಯಿತಿ ಅನುದಾನದಲ್ಲಿ ಘಟಕಗಳನ್ನು ದುರಸ್ತಿಗೊಳಿಸಿ. ಘಟಕಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವ ಏಜೆನ್ಸಿಯವರನ್ನು ಕಪ್ಪು ಪಟ್ಟಿಗೆ ಸೇರಿಸಿ. ನೀರಿನ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ವರದಿ ಆಧರಿಸಿ ಘಟಕಗಳನ್ನು ಆರಂಭಿಸಬೇಕು ಎಂದು ಹೇಳಿದರು.

ಜನರಿಗೆ ಕುಡಿಯುವ ನೀರಿನ ಅವಶ್ಯಕತೆ ತೀರಾ ಇದೆ. ಅಧಿಕಾರಿಗಳು ಸಬೂಬು ಹೇಳುತ್ತೀರಿ. ಮೊದಲು ದುರಸ್ತಿಗೆ ಕ್ರಮವಹಿಸಿ ಎಂದು ಲತಾ ರವಿಕುಮಾರ್ ನಿರ್ದೇಶನ ನೀಡಿದರು.‌

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ವಿಮಾ ಹಣ 84 ರೈತರಿಗೆ ಪೂರ್ಣವಾಗಿ ಜಮೆ ಆಗಿದೆ. ಹಮಾವಾನ ಆಧಾರಿತ ವಿಮೆಯಲ್ಲಿ 17,340 ರೈತರಿಗೆ ₹ 36.85 ಕೋಟಿ ವಿಮಾ ಪರಿಹಾರ ನೀಡಲಾಗಿದೆ. ಬಾಕಿ ಉಳಿದಿರುವ 395 ರೈತರಿಗೆ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‌ಬುಕ್‌ನಲ್ಲಿನ ಕೆಲವು ತಪ್ಪುಗಳಿಂದ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಸಮಸ್ಯೆ ಸರಿಪಡಿಸಲಾಗುವುದು ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ರಘು ತಿಳಿಸಿದರು.

ಇಲಾಖೆ ಕಾರ್ಯಕ್ರಮಗಳ ಅನುಷ್ಠಾನ ತಡವಾಗುತ್ತಿದೆ ಎಂದು ಸಿಇಒ ನುಡಿದಾಗ, ‘ತುರುವೇಕೆರೆ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ನರೇಗಾ ಯೋಜನೆಯಡಿ ರೈತರು ಕೆಲಸ ಮಾಡಲು ವರ್ಕ್ ಆರ್ಡರ್ ಪಡೆಯುತ್ತಾರೆ. ಆದರೆ ಆ ನಂತರ ಕೆಲವನ್ನು ಮಾಡುವುದಕ್ಕೆ ತಡ ಮಾಡುತ್ತಿದ್ದಾರೆ’ ಎಂದು ರಘು ಹೇಳಿದರು.

ಜಿಲ್ಲೆಯಲ್ಲಿ ಹೇಮಾವತಿ ನೀರಿನಿಂದ 202 ಕೆರೆಗಳು ತುಂಬಿವೆ. 29 ಕೆರೆಗಳು ಶೇ 50, 18 ಕೆರೆಗಳು ಶೇ 25ರಷ್ಟು ತುಂಬಿವೆ. ಈಗಾಗಲೇ 14 ಟಿಎಂಸಿ ಅಡಿ ನೀರು ಬಂದಿದೆ ಎಂದು ಹೇಮಾವತಿ ಮುಖ್ಯ ಎಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ, ಜಿಲ್ಲೆಯಲ್ಲಿ ನಕಲಿ ವೈದ್ಯರ ವಿರುದ್ಧ ಕೈಗೊಂಡಿರುವ ಕ್ರಮಗಳು ಮತ್ತು ಸಾಂಕ್ರಾಮಿಕ ರೋಗ ತಡೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಲೀಡ್ ಬ್ಯಾಂಕ್ ಮುಖ್ಯವ್ಯವಸ್ಥಾಪಕ ಜ್ಯೋತಿಗಣೇಶ್, ಡಿಡಿಪಿಐ ಕಾಮಾಕ್ಷ್ಮಿ, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಸುಬ್ರಾ ನಾಯಕ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆ ಮತ್ತು ಪ್ರಗತಿಯ ಮಾಹಿತಿ ನೀಡಿದರು.

***

ಪಂಚಾಯಿತಿ ಕೆಲಸ ಅರಣ್ಯ ಇಲಾಖೆಗೆ!

ಕಣಕುಪ್ಪೆ ಗ್ರಾಮದಲ್ಲಿ ಚಿರತೆ ದಾಳಿಗೆ ಬಲಿಯಾದ ಮಹಿಳೆಯರ ಕುಟುಂಬಕ್ಕೆ ಪರಿಹಾರ ನೀಡಿದ್ದೀರಾ? ಎಂದು ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಂದ ಮಾಹಿತಿ ಬಯಸಿದರು.

ಆಗ ಡಿಎಫ್‌ಒ ಗಿರೀಶ್, ‘ಈಗಾಗಲೇ ಆ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಧನ ನೀಡಲಾಗಿದೆ. ಮಾಸಿಕ ₹ 2 ಸಾವಿರದಂತೆ 5 ವರ್ಷ ಮಾಸಾಶನ ನೀಡಲಾಗುವುದು. ಬನ್ನಿಕುಪ್ಪೆಯಲ್ಲಿ ಚಿರತೆ ದಾಳಿಗೆ ಮೃತಪಟ್ಟ ಮಹಿಳೆ ಕುಟುಂಬಕ್ಕೆ ಶೀಘ್ರದಲ್ಲಿ ಪರಿಹಾರ ಧನ ದೊರೆಯಲಿದೆ ಎಂದರು.

ಗ್ರಾಮಗಳಲ್ಲಿ ಪೊದೆಗಳು ಹೆಚ್ಚುತ್ತಿವೆ. ಇಲ್ಲಿ ಚಿರತೆಗಳು ಸೇರುತ್ತಿವೆ. ಆದ್ದರಿಂದ ಗ್ರಾಮ ಪಂಚಾಯಿತಿಗೆ ಈ ಪೊದೆಗಳ ತೆರವಿಗೆ ಕ್ರಮಕೈಗೊಳ್ಳಲು ಸೂಚಿಸಬೇಕು ಎಂದು ಮನವಿ ಮಾಡಿದರು.

ಆಗ, ಸಿಇಒ, ‘ನಿಮ್ಮ ಗಾರ್ಡ್‌ಗಳನ್ನೇ ಪೊದೆ ತೆರವುಗೊಳಿಸಲು ಬಳಸಿ’ ಎಂದರು.

***

ನನ್ನ ಫೋನ್‌ಗೆ ಪ್ರತಿಕ್ರಿಯಿಸಲ್ಲವಾ?

ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಪ್ರಕಾಶ್ ಮಾಹಿತಿ ನೀಡುವಾಗ, ‘ನಾನು ಫೋನ್ ಮಾಡಿದ್ದೆ. ನೀವು ಆಸ್ಪತ್ರೆಯಲ್ಲಿ ಇದ್ದೀನಿ ಎಂದಿದ್ದಿರಿ. ಆ ನಂತರ ಬಂದ ಮೇಲಾದರೂ ನನ್ನ ಭೇಟಿ ಮಾಡಬೇಕಿತ್ತು ಅಲ್ಲವಾ. ಫೋನ್ ಮಾಡಬೇಕಿತ್ತು ಅಲ್ಲವಾ. ನನ್ನ ಮಾತಿಗೆ ಗೌರವ ಇಲ್ಲವಾ’ ಎಂದು ಲತಾ ರವಿಕುಮಾರ್ ಸಿಡಿಮಿಡಿಗೊಂಡರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು