ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟವಿಲ್ಲದ ಕಾಮಗಾರಿ: ಆರೋಪ

ಕಾಲುವೆಯಲ್ಲಿ ಮಳೆ ನೀರಿಗೆ ಕಿತ್ತು ಹೋಗುತ್ತಿರುವ ಲೈನಿಂಗ್ ಕಾಮಗಾರಿ; ನಿವೃತ್ತ ಎಂಜಿನಿಯರ್‌ ದೂರು
Last Updated 1 ಜೂನ್ 2017, 8:34 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಸುವ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲದೆ ಕಳಪೆಯಾಗಿದೆ ಎಂದು ನಿವೃತ್ತ ಎಂಜಿನಿಯರ್ ಆರ್.ಜಯರಾಮಯ್ಯ ಆರೋಪಿಸಿದ್ದಾರೆ.

‘ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆ ಸೇರಿದಂತೆ 11 ಕೆರೆಗಳಿಗೆ ನೀರು ಹಾಯಿಸುವ ಮೂಲಕ ಅಂತರ್ ಜಲ ಮಟ್ಟದ ಸುಧಾರಣೆ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದಿಂದ ₹ 59.88 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದರು.

‘ಹೇಮಾವತಿಯಿಂದ ಕಳ್ಳಂಬೆಳ್ಳ ಮತ್ತು ಶಿರಾ ಕೆರೆಗೆ 0.9 ಟಿಎಂಸಿ ಅಡಿ ನೀರು ನಿಗದಿಯಾಗಿದ್ದು ಇದರಲ್ಲಿ ಶಿರಾ ಮತ್ತು ಕಳ್ಳಂಬೆಳ್ಳ ಕೆರೆಗೆ 0.5  ಟಿಎಂಸಿ ಅಡಿ ನೀರನ್ನು ಬಳಸಿಕೊಂಡು ಉಳಿಕೆ 0.4 ಟಿಎಂಸಿ ಅಡಿ ಮತ್ತು ಮಳೆಯ ನೀರಿನಿಂದ  11 ಕೆರೆಗಳಿಗೆ ಶೇ 50 ರಷ್ಟು ನೀರು ತುಂಬಿಸುವ ಉದ್ದೇಶದಿಂದ ಯೋಜನೆ ಅನುಷ್ಠಾನಗೊಳಿಸಲಾಗಿದೆ’ ಎಂದು ಹೇಳಿದರು.

‘ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿದು ಬರಲು 32 ಕಿ.ಮೀ ಚಾನಲ್ ಕಾಮಗಾರಿ ನಡೆಸಿದ್ದು ನೀರು ವ್ಯರ್ಥವಾಗದಂತೆ ಮತ್ತು ಸರಾಗವಾಗಿ ಹರಿದುಹೋಗಲು ಚಾನಲ್‌ನಲ್ಲಿ ಲೈನಿಂಗ್ ಕಾಮಗಾರಿ ನಡೆಸಲಾಗಿದೆ.

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರು ಗಮನ ನೀಡದೆ ಕಳಪೆ ಕಾಮಗಾರಿ ನಡೆಸಿದ್ದು ಇತ್ತೀಚೆಗೆ ಬಂದ ಮಳೆಯಿಂದಾಗಿ ಮೂಗನಹಳ್ಳಿ, ಚಿಕ್ಕಗೂಳ ಸೇರಿದಂತೆ ಕೆಲವು ಕಡೆ ಚಾನಲ್‌ನಲ್ಲಿ ನಡೆಸಿರುವ ಲೈನಿಂಗ್ ಕಾಮಗಾರಿ ಕಿತ್ತುಹೋಗಿದೆ’ ಎಂದು ದೂರಿದರು.

‘ಸಾಮಾನ್ಯ ಮಳೆಗೆ ಲೈನಿಂಗ್ ಕಾಮಗಾರಿ ಕಿತ್ತು ಹೋಗಿರುವುದನ್ನು ಗಮನಿಸಿದರೆ ಮುಂದೆ ಜೋರಾಗಿ ಮಳೆ ಬಂದರೆ ಅಥವಾ ಕಳ್ಳಂಬೆಳ್ಳ ಕೆರೆಯಿಂದ ವೇಗವಾಗಿ ನೀರು ಹರಿಸಿದರೆ ನಾಲೆಗೆ ಮಾಡಿರುವ ಲೈನಿಂಗ್ ಸಂಪೂರ್ಣವಾಗಿ ಕಿತ್ತು ಹೋಗಲಿದೆ.

ನಾಲೆಯಲ್ಲಿ ಇನ್ನೂ ಸಹ ಪ್ರಾಯೋಗಿಕವಾಗಿ ಸಹ ನೀರು ಹರಿಸಿಲ್ಲ ಕೇವಲ ಮಳೆ ನೀರಿಗೆ ಕಿತ್ತು ಹೋಗುತ್ತಿರುವುದನ್ನು ನೋಡಿದರೆ ಕಾಮಗಾರಿಯ ಗುಣಮಟ್ಟ ಯಾವ ರೀತಿ ಇದೆ ಎನ್ನುವ ಅನುಮಾನ ಮೂಡುತ್ತದೆ’ ಎಂದು ಹೇಳಿದರು.

‘ಗುತ್ತಿಗೆದಾರರು ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿಯೇ ಕಳಪೆ ಕಾಮಗಾರಿಗೆ ಕಾರಣವಾಗಿದೆ. ಕಳಪೆ ಕಾಮಗಾರಿಯನ್ನು ಗಮನಿಸಿದರೂ ಸಹ ಸಚಿವ ಟಿ.ಬಿ.ಜಯಚಂದ್ರ  ಏಕೆ ಮೌನವಾಗಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ತಾವು ಯಾರ ವಿರುದ್ಧ ಸಹ ಟೀಕೆ ಮಾಡುತ್ತಿಲ್ಲ. ಆದರೆ ಕಾಮಗಾರಿ ಗುಣ ಮಟ್ಟ ಕಾಪಾಡಲು ಅಧಿಕಾರಿಗಳು ಹಾಗೂ ಸಚಿವ ಟಿ.ಬಿ.ಜಯಚಂದ್ರ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.

‘ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಸುವ ಯೋಜನೆಗೆ ಮೊದಲು ಸರ್ವೆ ಕಾರ್ಯ ನಡೆಸಿ ಯೋಜನೆ ಸಾಧ್ಯ ಎಂದು ತೋರಿಸಿದೆ. ಆದರೆ ಸಚಿವ ಟಿ.ಬಿ.ಜಯಚಂದ್ರ ಖಾಸಗಿ ಕಂಪನಿಯಿಂದ ಸರ್ವೆ ನಡೆಸಿ ಕಾಮಗಾರಿ ಪ್ರಾರಂಭಿಸಿದ್ದಾರೆ. ಇದರಿಂದಾಗಿ 8 ಕೆರೆಗಳು ನೀರಿನಿಂದ ವಂಚಿತವಾಗುವಂತಾಗಿದೆ’ ಎಂದರು.

‘ಚಾನಲ್ ಬಳಿ ರಸ್ತೆ ಕಾಮಗಾರಿಯನ್ನು ಸಹ ಮಾಡಿಲ್ಲ. ಈ ಬಗ್ಗೆ ಅಧಿಕಾರಿಗಳು ತಕ್ಷಣ ಗಮನ ಹರಿಸಬೇಕು’ ಎಂದು ನಿವೃತ್ತ ಎಂಜಿನಿಯರ್ ಆರ್.ಜಯರಾಮಯ್ಯ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT