ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆಗೆ ಬಡತನವಿಲ್ಲ

ನಮ್ ಕ್ಯಾಂಪಸ್
Last Updated 22 ಆಗಸ್ಟ್ 2013, 11:18 IST
ಅಕ್ಷರ ಗಾತ್ರ

`ನನಗೆ ರಷ್ಯಾ ಮಾದರಿಯ ಪೀಪಲ್ಸ್ ಪಾರ್ಲಿಮೆಂಟರಿ ಸ್ಟ್ರಕ್ಚರ್ ಬೆಸ್ಟ್ ಅನ್ಸುತ್ತೆ. ಅದರಲ್ಲಿ ಜನರ ಜವಾಬ್ದಾರಿ ಸರ್ಕಾರದ್ದು, ಸರ್ಕಾರದ ಜವಾಬ್ದಾರಿ ಜನರದ್ದು. ಭಾರತದ ಸಂಸದೀಯ ಮಾದರಿ ಸರ್ಕಾರದಲ್ಲಿ ಮತ ಮಾರಿಕೊಳ್ಳುವ ಮೂಲಕ ಜನ 5 ವರ್ಷಗಳವರೆಗೆ ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೆ ಎನಿಸುತ್ತೆ...'

ಹೀಗೆ ಅನುಭವಿ ರಾಜಶಾಸ್ತ್ರಜ್ಞನಂತೆ ವಾದ ಮಂಡಿಸುವ ಆರ್.ಮಧುಸೂದನ್‌ಗೆ ಈಗಿನ್ನೂ 16 ವರ್ಷ.

ಭಾರತದ ಸಂಸದೀಯ ವ್ಯವಸ್ಥೆಯ ಶತಮಾನೋತ್ಸವದ ಅಂಗವಾಗಿ `ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೊಸಿಯೇಷನ್'ನ ಭಾರತೀಯ ವಿಭಾಗ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ್ದ `ಪಾರ್ಲಿಮೆಂಟರಿ ಫಾರ್ಮ್ ಆಫ್ ಗೌರ್ನಮೆಂಟ್; ಗೇಟ್ ವೇ ಟು ಗುಡ್ ಗೌರ್ನೆನ್ಸ್' ವಿಷಯ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಮಧುಸೂಧನ್ ತೃತೀಯ ಬಹುಮಾನ ಪಡೆದಿದ್ದಾರೆ.

ತಂದೆ ಸಿ.ಎನ್.ರವಿಕುಮಾರ್ ಆಟೊ ಚಾಲಕ, ತಾಯಿ ಸರಸ್ವತಿ ಪದವಿಧರರು. ತಮ್ಮ ಆರ್.ಪವನ್‌ಕುಮಾರ್ 2ನೇ ತರಗತಿ ಓದುತ್ತಿದ್ದಾನೆ. ಜೋಪಡಿಯಂಥ ಪುಟ್ಟ ಮನೆಯಲ್ಲಿ ಮಧುಸೂಧನ್ ಅಧ್ಯಯನ ನಡೆಯುತ್ತಿದೆ. ಈಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 590 (ಶೇ 94.40) ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದರು. ಯಾವುದೇ ಮನೆ ಪಾಠಕ್ಕೆ ಹೋಗದೆ ಸರ್ಕಾರಿ ಶಾಲೆಯಲ್ಲಿ ಓದಿ ತಾಲ್ಲೂಕಿಗೆ ಮೊದಲಿಗನಾಗಿ ಹೊಮ್ಮಿದ್ದು ಈತನ ಹೆಗ್ಗಳಿಕೆ.

ಮೊದಲಿನಿಂದಲೂ ಮಧುಸೂಧನ್‌ಗೆ ವಿಜ್ಞಾನ- ಗಣಿತ ಅಚ್ಚುಮೆಚ್ಚು. ಭಾವಗೀತೆ, ಪ್ರಬಂಧ, ರಸಪ್ರಶ್ನೆ, ಸ್ಥಳದಲ್ಲಿಯೇ ವಿಜ್ಞಾನ ಮಾದರಿ ತಯಾರಿ, ಇತ್ಯಾದಿ ಸ್ಪರ್ಧೆಗಳಲ್ಲಿ ಬಂದ ಬಹುಮಾನ ಮತ್ತು ಪಾರಿತೋಷಕಗಳಿಗೆ ಲೆಕ್ಕವಿಲ್ಲ. ಚೆಸ್ ಮತ್ತು ಕೇರಮ್ ಇಷ್ಟದ ಆಟಗಳು. ಮಧುಸೂಧನ್ ಸಾಧನೆ ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಹಲವರು ಓದಿಗೆ ಸಹಾಯ ಹಸ್ತ ಚಾಚಿದ್ದಾರೆ.

`ನಮಗೆ ಆಸ್ತಿ ಇಲ್ಲ, ಕಷ್ಟಪಟ್ಟು ಓದಿ ಪಡೆದ ಡಿಗ್ರಿ ಕೆಲಸ ಕೊಡಿಸಲಿಲ್ಲ. ಸರ್ಕಾರಿ ಕೆಲಸಕ್ಕೆ ಸೇರೋಕೆ ಲಂಚ ಕೇಳಿದ್ರು. ಏನೂ ಇಲ್ದೋರ್ಗೆ ವಿದ್ಯೆನೇ ಆಸ್ತಿ. ಮಗನ ಸಾಧನೆ ಖುಷಿ ತಂದಿದೆ. ಇವನ ಕನಸು ನನಸು ಮಡೋಕೆ ನಮ್ಮ ಕೈಲಾಗುತ್ತಾ ಅನ್ನೋ ಆತಂಕಾನೂ ಇದೆ' ಎನ್ನುತ್ತಾರೆ ತಾಯಿ ಸರಸ್ವತಿ.

ಪ್ರಸ್ತುತ ತುಮಕೂರಿನ ಸರ್ವೋದಯ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಆರ್.ಮಧುಸೂದನ್ ಐಎಎಸ್ ಮಾಡಿ ರೈತರು ಮತ್ತು ಗ್ರಾಮೀಣ ಜನರ ಬದುಕು ಮೇಲೆತ್ತುವ ಕನಸು ಹೊತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT