ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾ’ ಹೊಡೆತಕ್ಕೆ ತತ್ತರಿಸಿದ ಉಡುಪಿ

400ರ ಗಡಿ ದಾಟಿದ ಸೋಂಕಿತರ ಸಂಖ್ಯೆ, ಒಂದೇ ದಿನ 150 ಜನರಲ್ಲಿ ಸೋಂಕು
Last Updated 2 ಜೂನ್ 2020, 15:59 IST
ಅಕ್ಷರ ಗಾತ್ರ

ಉಡುಪಿ: ಕೃಷ್ಣನೂರಿಗೆ ಮಂಗಳವಾರ ಕೊರೊನಾ ‘ಮಹಾ’ ಆಘಾತ ನೀಡಿದೆ. ರಾಜ್ಯದಲ್ಲೇ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳು ಉಡುಪಿ ಜಿಲ್ಲೆಯಲ್ಲಿ ದೃಢಪಟ್ಟಿವೆ. ಒಂದೇದಿನ 150 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 410ಕ್ಕೇರಿಕೆಯಾಗಿದೆ.

ಮಹಾರಾಷ್ಟ್ರ ಸಂಪರ್ಕ:

150 ಪ್ರಕರಣಗಳೂ ಮಹಾರಾಷ್ಟ್ರ ಸಂಪರ್ಕ ಹೊಂದಿದ್ದು, ಸೋಂಕಿತರಲ್ಲಿ 10 ವರ್ಷದೊಳಗಿನ ಮಕ್ಕಳು 9, 60 ವರ್ಷ ಮೇಲ್ಪಟ್ಟವರು 3, 120 ಪುರುಷರು ಹಾಗೂ 30 ಮಹಿಳೆಯರು ಇದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.

ಆತಂಕ ಬೇಡ; ಡಿಸಿ:

ಜಿಲ್ಲೆಯಲ್ಲಿ ಒಂದೇ ದಿನ 150 ಮಂದಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಪ್ರತಿದಿನ 200ರಿಂದ 300 ಪರೀಕ್ಷಾ ವರದಿ ಬರುತ್ತಿದ್ದರಿಂದ ಸೋಂಕಿತರ ಸಂಖ್ಯೆ ಕಡಿಮೆ ಇರುತ್ತಿತ್ತು. ಆದರೆ, ಮಂಗಳವಾರ ಒಂದೇ ದಿನ 2,000 ಮಾದರಿಗಳ ವರದಿ ಪ್ರಯೋಗಾಲಯಗಳಿಂದ ಬಂದಿರುವುದರಿಂದ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿರುವವರ ಪೈಕಿ ಶೇ 10ರಷ್ಟು ಜನರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗುತ್ತಿರುವುದು ಕಂಡುಬಂದಿದೆ. ಸೋಂಕಿತರಿಗೆ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 1,120 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಸದ್ಯವಿರುವ ಸೋಂಕಿತರಿಗೆ ಹೋಲಿಸಿದರೆ ಇನ್ನೂ 800ಕ್ಕಿಂತ ಹೆಚ್ಚು ಬೆಡ್‌ಗಳು ಲಭ್ಯವಿದೆ. ಜನರು ಭೀತಿಗೊಳ್ಳುವ ಅಗತ್ಯವಿಲ್ಲ ಎಂದರು.

‌ಇಬ್ಬರು ಸೋಂಕಿತರ ಸ್ಥಿತಿ ಗಂಭೀರ:

ಜಿಲ್ಲೆಯ 410 ಸೋಂಕಿತರಲ್ಲಿ ಇಬ್ಬರ ಸ್ಥಿತಿ ಮಾತ್ರ ಗಂಭೀರವಾಗಿದೆ. ಒಬ್ಬರಿಗೆ ಹೈಫ್ಲೋ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದ್ದು, ಮತ್ತೊಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸೋಂಕಿನ ಲಕ್ಷಣಗಳಿರುವವರಿಗೆ ಆಯಾ ತಾಲ್ಲೂಕಿನ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕಿನ ಲಕ್ಷಣ ಇರುವವರು ಹಾಗೂ ಗರ್ಭಿಣಿಯರು, ವೃದ್ಧರು, ಮಕ್ಕಳಿಗೆ ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಬೆಡ್‌ಗಳ ಕೊರತೆ ಆತಂಕ:

ಸದ್ಯ ಉಡುಪಿಯ ಡಾ.ಟಿಎಂಎ ಪೈ ಹಾಗೂ ಕುಂದಾಪುರ ಹಾಗೂ ಕಾರ್ಕಳದ ಕೋವಿಡ್‌ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಿಂದ ರವಾನೆಯಾಗಿರುವ 5846 ಮಂದಿಯ ಗಂಟಲ ದ್ರವದ ಮಾದರಿಯ ವರದಿ ಬರಬೇಕಿದ್ದು, ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

ನಿರೀಕ್ಷೆಗೂ ಮೀರಿ ಸೋಂಕಿತರ ಸಂಖ್ಯೆ ಹೆಚ್ಚಾದರೆ ಚಿಕಿತ್ಸೆ ನೀಡಲು ಬೆಡ್‌ಗಳ ಸಮಸ್ಯೆ ಎದುರಾಗಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಿನಿಂದಲೇ ಕಾರ್ಯಪ್ರವೃತ್ತರಾಗುವ ಮೂಲಕ ಖಾಸಗಿ ಆಸ್ಪತ್ರೆಗಳನ್ನು ಮೊದಲೇ ಗುರುತಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬುದು ವೈದ್ಯಕೀಯ ಕ್ಷೇತ್ರದ ತಜ್ಞರ ಅಭಿಪ್ರಾಯ.

ಉದ್ಯಾವರದಲ್ಲಿರುವ ಎಸ್‌ಡಿಎಂ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಂಖ್ಯೆ ಹೆಚ್ಚಿಸುವಿಕೆ ಹಾಗೂ ಉಡುಪಿಯ ಗ್ರಂಥಾಲಯ ಕಟ್ಟಡ ಹಾಗೂ ಇತರೆ ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳನ್ನು ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

15ರಿಂದ ಸೋಂಕಿನ ಸರಣಿ ಆರಂಭ:

ಮೇ 14ರವರೆಗೂ ಜಿಲ್ಲೆಯಲ್ಲಿ ಒಂದೂ ಸಕ್ರಿಯ ಕೋವಿಡ್ ಸೋಂಕು ಪ್ರಕರಣಗಳು ಇರಲಿಲ್ಲ. 15ರಂದು ದುಬೈನಿಂದ ಬಂದಿದ್ದ ಐವರಲ್ಲಿ ಸೋಂಕು ಕಾಣಿಸಿಕೊಂಡಿತು. ಬಳಿಕ ‘ಮುಂಬೈ’ ಸರಣಿ ಸೋಂಕು ಆರಂಭವಾಯಿತು. ಮೇ 19ರಂದು 6 ಪ್ರಕರಣ, 20ರಂದು 6, 21ರಂದು 27, 22ರಂದು 5, 24ರಂದು 23, 25ರಂದು 32, 26ರಂದು 3, 27ರಂದು 9, 28ರಂದು 29, 29ರಂದು 15, 30ರಂದು 13, 31ರಂದು 10, ಜೂನ್‌ 1ರಂದು 73 ಹಾಗೂ ಜೂನ್‌ 2ರಂದು 150 ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ದೃಢಪಟ್ಟಿವೆ. ಸದ್ಯ ಜಿಲ್ಲೆಯಲ್ಲಿ 410 ಸೋಂಕಿತರಿದ್ದಾರೆ. ಈ ಪೈಕಿ 346 ಸಕ್ರಿಯ ಪ್ರಕರಣಗಳಿದ್ದು, 63 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಬ್ಬರು ಸೋಕಿನಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT