ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ದುಬೈನಿಂದ ಉಡುಪಿಗೆ ಬಂದ 49 ಮಂದಿ

ಬಹುತೇಕರು ಹೋಟೆಲ್‌ಗಳಲ್ಲಿ ವಾಸ್ತವ್ಯ; ಅವ್ಯವಸ್ಥೆ ವಿರುದ್ಧ ಅಸಮಾಧಾನ
Last Updated 13 ಮೇ 2020, 16:14 IST
ಅಕ್ಷರ ಗಾತ್ರ

ಉಡುಪಿ: ದುಬೈನಿಂದ ಮಂಗಳವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನದಲ್ಲಿ 49 ಮಂದಿ ಉಡುಪಿ ಜಿಲ್ಲೆಗೆ ಸೇರಿದವರಾಗಿದ್ದು, ಅವರನೆಲ್ಲ ಜಿಲ್ಲೆಗೆ ಕರೆತಂದು ಹೋಟೆಲ್‌ ಹಾಗೂ ಸರ್ಕಾರಿ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾತ್ರಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೂಡಲೇ ಎಲ್ಲರಿಗೂ ಆರೋಗ್ಯ ತಪಾಸಣೆ ನಡೆಸಿ ಮಂಗಳೂರಿನಿಂದ ಪಡುಬಿದ್ರಿ ಚೆಕ್‌ಪೋಸ್ಟ್‌ ಮಾರ್ಗವಾಗಿ ಉಡುಪಿಗೆ ಕರೆತರಲಾಯಿತು. ಉಡುಪಿ 10, ಕುಂದಾಪುರದ 11 ಪ್ರಯಾಣಿಕರು, ಕಾಪು 15, ಬೈಂದೂರು 7, ಕಾರ್ಕಳ, ಬ್ರಹ್ಮಾವರದ ತಲಾ 3 ಇದ್ದಾರೆ.

ವಿಮಾನ ರಾತ್ರಿ 10.15ಕ್ಕೆ ಬಂದಿಳಿದ ಬಳಿಕ ಅಲ್ಲಿಂದ 2 ಬಸ್‌ಗಳಲ್ಲಿ ಉಡುಪಿ ಜಿಲ್ಲೆಯವರನ್ನು ಹೆಜಮಾಡಿ ಚೆಕ್‌ಪೋಸ್ಟ್‌ಗಳಿಗೆ ಕರೆತರಲಾಯಿತು. ಅಲ್ಲಿಂದ ಪ್ರಯಾಣಿಕರನ್ನು ವಿಂಗಡಿಸಿ ಉಡುಪಿಯ ವಿವಿಧ ಹೋಟೆಲ್‌ಗಳು ಹಾಗೂ ಸರ್ಕಾರಿ ಕ್ವಾರಂಟೈನ್‌ ಕೇಂದ್ರಗಳಿಗೆ ತಲುಪಿಸುವಷ್ಟರಲ್ಲಿ ಬೆಳಗಿನ ಜಾವ 3.30 ಆಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ದುಬೈನಿಂದ ಬಂದವರಲ್ಲಿ ಐವರು ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದು ಉಳಿದ 44 ಜನ ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿಸಿದರು.

ಸೌಲಭ್ಯಗಳ ಕೊರತೆ:‘ಜಿಲ್ಲಾಡಳಿತ ಅಗತ್ಯ ಮೂಲಸೌಲಭ್ಯಗಳನ್ನೊಳಗೊಂಡ ಸರ್ಕಾರಿ ಕ್ವಾರಂಟೈನ್‌ ವ್ಯವಸ್ಥೆ ಮಾಡಿರುತ್ತದೆ ಎಂದು ಇಲ್ಲಿಗೆ ಬಂದೆವು. ಆದರೆ, ಇಲ್ಲಿಗೆ ಬಂದ ಬಳಿಕ ಸಮಸ್ಯೆಗಳಿರುವುದು ತಿಳಿಯಿತು. ಅಧಿಕಾರಿಗಳಿಗೆ ಪ್ರಶ್ನಿಸಿದರೆ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಿ, ಯಾವ ಸಮಸ್ಯೆಗಳೂ ಇರುವುದಿಲ್ಲ ಎಂದರು. ಮಕ್ಕಳು, ಗರ್ಭಿಣಿಯರು ಇದ್ದಿದ್ದರಿಂದ ಬಹುತೇಕ ಮಂದಿ ಲಾಡ್ಜ್‌ಗಳಲ್ಲಿ ಉಳಿದಿದ್ದೇವೆ’ ಎಂದು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದರು.

ವಸತಿಗೃಹದಲ್ಲಿ ಉಳಿಯಲು ದಿನಕ್ಕೆ ₹1,200 ಎಂದು ಅಧಿಕಾರಿಗಳು ಹೇಳಿದ್ದರು. ಇಲ್ಲಿಗೆ ಬಂದ ಬಳಿಕ ₹ 1,500 ಕೇಳುತ್ತಿದ್ದಾರೆ. ಊಟ, ತಿಂಡಿಯ ಖರ್ಚು ಪ್ರತ್ಯೇಕವಾಗಿ ಭರಿಸಬೇಕು ಎಂದು ಸೂಚನೆ ನೀಡಿದ್ದಾರೆ. ದುಬೈನಲ್ಲಿ 2 ತಿಂಗಳು ಕೆಲಸವಿಲ್ಲದೆ ಕೂಡಿಟ್ಟ ಹಣವೆಲ್ಲ ಖರ್ಚಾಗಿದೆ. ಈಗ 14 ದಿನಕ್ಕೆ ಸುಮಾರು ₹20,000 ಭರಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT