ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ: ತ್ರಿಶಂಕು ಸ್ಥಿತಿಯಲ್ಲಿ ನೈಕಂಬ್ಳಿ ಗ್ರಾಮಸ್ಥರು

ಮಳೆಯಲ್ಲಿ ಕೊಚ್ಚಿ ಹೋದ ತಾತ್ಕಾಲಿಕ ಮರದ ಸೇತುವೆ: ಜನರ ಪರದಾಟ
Last Updated 2 ಜುಲೈ 2022, 4:20 IST
ಅಕ್ಷರ ಗಾತ್ರ

ಕುಂದಾಪುರ: ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಚಿತ್ತೂರು ಗ್ರಾಮ ಪಂಚಾಯಿತಿಯ ಹಳೆಯಮ್ಮ ದೇವಸ್ಥಾನದ ಸಮೀಪ ನೈಕಂಬ್ಳಿಯ ಹೊಳೆಗೆ ನಿರ್ಮಿಸಿದ್ದ ತಾತ್ಕಾಲಿಕ ಮರದ ಸೇತುವೆ ಮುರಿದು ಬಿದ್ದಿದೆ. ಇದರಿಂದಾಗಿ ನೈಕಂಬ್ಳಿ ಗ್ರಾಮದ ಅರ್ಧದಷ್ಟು ಜನರು ಪರ್ಯಾಯ ಸಂಚಾರ ವ್ಯವಸ್ಥೆ ಇಲ್ಲದೇ ತ್ರಿಶಂಕು ಸ್ಥಿತಿ ಎದುರಿಸುತ್ತಿದ್ದಾರೆ.

1,900 ರಷ್ಟು ಜನಸಂಖ್ಯೆ ಹೊಂದಿರುವ ನೈಕಂಬ್ಳಿ ಗ್ರಾಮದಲ್ಲಿ 135 ಮನೆಗಳಿವೆ. ಹಳೆಯಮ್ಮ ದೇವಸ್ಥಾನದ ಬದಿ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ಬದಿ ಎಂದು ಗ್ರಾಮವನ್ನು ಎರಡು ಭಾಗವಾಗಿ ವಿಗಂಡಿಸಲಾಗಿದೆ. ಮಹಾಲಿಂಗೇಶ್ವರ ದೇವಸ್ಥಾನ ಭಾಗದಲ್ಲಿ ಕನಿಷ್ಠ 75 ಮನೆಗಳಿವೆ. ಚಿತ್ತೇರಿ ಗಣಪತಿ ದೇವಸ್ಥಾನವೂ ಇದೆ. ಈ ಭಾಗದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಕುಂದಾಪುರ, ಕೊಲ್ಲೂರು ಮುಂತಾದ ಕಡೆಗಳಿಗೆ ತೆರಳಲು ಈ ಸೇತುವೆಯನ್ನೆ ಅವಲಂಬಿಸಬೇಕಾಗಿದೆ.

ಹೆಮ್ಮಾಡಿ-ಕೊಲ್ಲೂರು ರಾಜ್ಯ ಹೆದ್ದಾರಿಯಿಂದ ನೈಕಂಬ್ಳಿಗೆ ತೆರಳುವ ರಸ್ತೆಯನ್ನು ಇತ್ತೀಚೆಗೆ ಅಭಿವೃದ್ಧಿಗೊಳಿಸಲಾಗಿತ್ತು. ಹಳೆಯಮ್ಮ ದೇವಸ್ಥಾನದವರೆಗೂ ಬಂದಿದ್ದ ರಸ್ತೆಯ ಮುಂದುವರೆದ ಭಾಗವಾಗಿ ನೈಕಂಬ್ಳಿ ಹೊಳೆಗೆ ಸ್ಥಳೀಯರಾದ ಕರುಣಾಕರ ಶೆಟ್ಟಿಯವರ ನೇತೃತ್ವದಲ್ಲಿ ಮರದ ಹಲಗೆಗಳನ್ನು ಜೋಡಿಸಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಕೆಲ ವರ್ಷಗಳಿಂದ ಈ ಭಾಗದ ಜನರು ತಮ್ಮ ದೈನಂದಿನ ಓಡಾಟಕ್ಕಾಗಿ ಈ ಸೇತುವೆಯನ್ನೆ ಅವಲಂಬಿಸಿದ್ದರು.

ಮುರಿದು ಬಿದ್ದ ಸೇತುವೆ: ಕಳೆದ 2-3 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸೇತುವೆಯ ಇಕ್ಕೆಲಗಳಲ್ಲಿನ ಮಣ್ಣು ಕೊಚ್ಚಿ ಹೋಗಿ, ಸೇತುವೆ ಮುರಿದು ಹರಿಯುವ ನೀರಿಗೆ ಬಿದ್ದಿದೆ. ಸೇತುವೆಗಾಗಿ ಜೋಡಿಸಿದ ಕಂಬಗಳು ಹಾಗೂ ಹಲಗೆಗಳು ನೀರು ಪಾಲಾಗಿವೆ. ಶಾಲೆ, ದೇವಸ್ಥಾನ, ಪಡಿತರ, ಸಾರಿಗೆ ವ್ಯವಸ್ಥೆಗಾಗಿ ಬರುವವರು ಈಗ ಕಿಲೋಮೀಟರ್‌ಗಟ್ಟಲೆ ಸುತ್ತಿಕೊಂಡು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸೇತುವೆ ನಿರ್ಮಾಣದ ಭರವಸೆ: ಸ್ಥಳೀಯರ ಬೇಡಿಕೆಯನ್ನು ಪರಿಗಣಿಸಿದ್ದ ಶಾಸಕರು ಈ ಹಿಂದೆಯೇ ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣದ ಪ್ರಸ್ತಾವನೆ ಮಾಡಿದ್ದರು. ಆದರೆ ಕಿಂಡಿ ಅಣೆಕಟ್ಟೆಯ ಬದಲು ಜನ ಹಾಗೂ ವಾಹನ ಸಂಚಾರಕ್ಕೆ ಅನೂಕೂಲವಾಗುವ ಸೇತುವೆ ನಿರ್ಮಾಣ ಮಾಡಿ ಎರಡು ಬದಿಯ ರಸ್ತೆಯನ್ನು ಅಭಿವೃದ್ಧಿ ಮಾಡಬೇಕು ಎನ್ನುವ ಬೇಡಿಕೆ ಬಂದಿದ್ದರಿಂದ ಹೊಸ ಪ್ರಸ್ತಾಪನೆ ಸಲ್ಲಿಸಲಾಗಿತ್ತು.

ರಾಜ್ಯದ ಸಣ್ಣ ನೀರಾವರಿ ಇಲಾಖೆಯ ಮೂಲಕ ಇಲ್ಲಿನ ಸಮಸ್ಯೆಗೆ ಕಾಯಕಲ್ಪ ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇಲ್ಲಿ ಸೇತುವೆ
ನಿರ್ಮಾಣ ಮಾಡುವ ಕುರಿತು ಪ್ರಾಸ್ತಾವನೆ ಸಲ್ಲಿಸಿ, ಸಂಬಂಧಿಸಿದ ಸಚಿವರೊಂದಿಗೂ ಮಾತುಕತೆ ನಡೆಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಯಾವ ಇಲಾಖೆಯಿಂದಾದರೂ ಅಡ್ಡಿಯಿಲ್ಲ, ಇಲ್ಲಿ ಸೇತುವೆ ನಿರ್ಮಾಣ ಮಾಡುವ ಮೂಲಕ ನಮ್ಮ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ದೊರಕಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT