ಸೋಮವಾರ, ಡಿಸೆಂಬರ್ 5, 2022
19 °C

ಅಂಬೇಡ್ಕರ್ ಭವನ ಶಿಲಾನ್ಯಾಸಕ್ಕೆ ಬಹಿಷ್ಕಾರ- ಕರ್ನಾಟಕ ದಲಿತ ಸಂಘರ್ಷ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಕಳ: ನಗರದ ಕಾಬೆಟ್ಟು ಎಂಬಲ್ಲಿ ಅಂದಾಜು ₹ 6 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನದ ಶಿಲಾನ್ಯಾಸ ಸಮಾರಂಭವನ್ನು ಪರಿಶಿಷ್ಟ ಸಂಘಟನೆಗಳು ಬಹಿಷ್ಕರಿಸಲಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಅಣ್ಣಪ್ಪ ನಕ್ರೆ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘20 ಸದಸ್ಯರನ್ನು ಒಳಗೊಂಡ ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯನ್ನು ಶಾಸಕರ ಶಿಫಾರಸಿನಂತೆ ಮಾಡಲಾಗಿತ್ತು. 2014ರಿಂದ ಅಂಬೇಡ್ಕರ್ ಭವನ ನಿರ್ಮಾಣದ ಕುರಿತು ಕಾನೂನಾತ್ಮಕ ರೀತಿಯ ಹೋರಾಟಗಳನ್ನು ಕೂಡ ನಡೆಸುತ್ತ ಬರಲಾಗಿತ್ತು. ಆದರೆ ಪ್ರಸ್ತುತ ಸಭಾಭವನ ನಿರ್ಮಾಣಕ್ಕೆ ಅನುದಾನವನ್ನು ಮಂಜೂರು ಸರ್ಕಾರ ಆದೇಶಿಸಿದೆ. ಆದರೆ ಈ ಸಭಾಭವನ ನಿರ್ಮಾಣದಲ್ಲಿ ಪರಿಶಿಷ್ಟ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಕೈಗೊಂಡ ನಿರ್ಣಯಗಳಿಗೆ ವಿರೋಧವಿದೆ. ಸಚಿವ ವಿ.ಸುನಿಲ್ ಕುಮಾರ್ ಹಾಗೂ ತಾಲ್ಲೂಕು ಆಡಳಿತ ನಮ್ಮನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಇದು ರಾಜಕೀಯಕ್ಕಾಗಿ ಮಾಡುವ ಆರೋಪ ಅಲ್ಲ, ಇದು ಪರಿಶಿಷ್ಟ ಸಮುದಾಯದ ನಿವೇದನೆಯಾಗಿದೆ’ ಎಂದು ಅವರು ಹೇಳಿದರು.

ಆಮಂತ್ರಣ ಪತ್ರಿಕೆಗಳಲ್ಲಿ ಕಾನೂನಾತ್ಮಕ ಹೋರಾಟ ನಡೆಸಿದ ದಲಿತ ಸಂಘರ್ಷ ಸಮಿತಿ ಅಥವಾ ಅದರ ಸದಸ್ಯರನ್ನು ಕಡೆಗಣಿಸಲಾಗಿದೆ. ಪುರಸಭಾ ಚುನಾಯಿತ ಪರಿಶಿಷ್ಟ ಸದಸ್ಯರನ್ನು ಕೂಡ ನಿರ್ಲಕ್ಷಿಸಲಾಗಿದೆ. ಶಿಲಾನ್ಯಾಸ ಕಾರ್ಯಕ್ರಮದ ಕುರಿತು ಚರ್ಚಿಸಲು ಸಚಿವರ ಸ್ವಗೃಹದಲ್ಲಿ ಬಿಜೆಪಿ ಕಾರ್ಯಕರ್ತರ ಸಮಿತಿ ಸಭೆಯನ್ನು ಕರೆಯಲಾಗಿತ್ತು. ಆದರೆ ಪರಿಶಿಷ್ಟ ಸಂಘಟನೆಗಳನ್ನು ಆಮಂತ್ರಿಸಿಲ್ಲ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಎಸ್‌ಸಿ, ಎಸ್‌ಟಿ ವಸತಿ ಯೋಜನೆಯಡಿ ಪ್ರತಿ ಫಲಾನುಭವಿಗಳಿಗೆ ಉಚಿತ ₹5ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದ್ದರು. ಆದರೆ ವರ್ಷ ಕಳೆದರೂ ಅನುಷ್ಠಾನವಾಗಿಲ್ಲ. ಇದು ಸರ್ಕಾರದ ಪರಿಶಿಷ್ಟ ವಿರೋಧಿ ಧೋರಣೆಗೆ ಸಾಕ್ಷಿ ಎಂದರು.

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಹೂವಪ್ಪ ಮಾಸ್ತರ್, ಸಂಚಾಲಕ ರಾಘವ ಕಡ್ತಲ, ಖಜಾಂಚಿ ಸೋಮನಾಥ್ ನಾಯ್ಕ್, ಅಂಬೇಡ್ಕರ್ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಗೋವರ್ಧನ್, ಸಮತಾ ಸೈನಿಕ ದಳದ ಅಧ್ಯಕ್ಷ ಗಜೇಂದ್ರ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.