ನೌಕರರ ಸೇವಾಭದ್ರತೆಗೆ ಎದುರಾಗಲಿದೆ ಆತಂಕ

7
ವಿಮಾ ನೌಕರರ ವಾರ್ಷಿಕ ಮಹಾಧಿವೇಶನದಲ್ಲಿ ವಿಶ್ವನಾಥ್‌ ಅಭಿಮತ

ನೌಕರರ ಸೇವಾಭದ್ರತೆಗೆ ಎದುರಾಗಲಿದೆ ಆತಂಕ

Published:
Updated:
Prajavani

ಉಡುಪಿ: ಸರ್ಕಾರ ಜಾರಿಗೆ ತಂದಿರುವ ನಿಶ್ಚಿತ ಅವಧಿಯ ಉದ್ಯೋಗ ಕಾಯ್ದೆಯಿಂದ ಮುಂದೆ ನೌಕರರಿಗೆ ಸೇವಾಭದ್ರತೆ ಇಲ್ಲದಂತಾಗುತ್ತದೆ ಎಂದು ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಅಧ್ಯಕ್ಷ ವಿಶ್ವನಾಥ್‌ ಆತಂಕ ವ್ಯಕ್ತಪಡಿಸಿದರು.

ಮಂಗಳವಾರ ಉಡುಪಿ ವಿಮಾ ನೌಕರರ ಸಂಘದ ಆವರಣದಲ್ಲಿ ನಡೆದ ವಿಮಾ ಪಿಂಚಣಿದಾರರ ಸಂಘದ ಉಡುಪಿ ವಿಭಾಗದ 21ನೇ ವಾರ್ಷಿಕ ಮಹಾಧಿವೇಶನದಲ್ಲಿ ಮಾತನಾಡಿದರು.

ನಿಶ್ಚಿತ ಅವಧಿಯ ಉದ್ಯೋಗ ಕಾಯ್ದೆ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ. ಇದೊಂದು ಕಾರ್ಮಿಕ ವಿರೋಧಿ ನೀತಿಯಾಗಿದ್ದು, ಇದರ ವಿರುದ್ಧ ನೌಕರರು ಈಗಿನಿಂದಲೇ ಎಚ್ಚುತ್ತುಕೊಳ್ಳಬೇಕಿದೆ ಎಂದರು.

ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಕುಂದರ್‌ ಮಾತನಾಡಿ, 2010ರ ಏಪ್ರಿಲ್‌ ತಿಂಗಳಿನಿಂದೀಚೆಗೆ ನೇಮಕವಾದ ಉದ್ಯೋಗಿಗಳಿಗೂ ಹೊಸ ಪಿಂಚಣಿ ಯೋಜನೆಯ ಬದಲು ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಮುಂದುವರಿಸಬೇಕು. ಈ ಬಗ್ಗೆ ಎಲ್‌ಐಸಿಯನ್ನು ಒತ್ತಾಯಿಸುವ ವಿಮಾ ನೌಕರರ ಹೋರಾಟದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ವಾರ್ಷಿಕ ವರದಿ ಮಂಡಿಸಿದ ಸಂಘದ ನಿಯೋಜಿತ ಪ್ರಧಾನ ಕಾರ್ಯದರ್ಶಿ ಎ.ಮಧ್ವರಾಜ ಬಲ್ಲಾಳ್‌ ಮಾತನಾಡಿ, ವಿಮಾ ನೌಕರರಿಗೆ ವೈದ್ಯಕೀಯ ಭತ್ಯೆ ಸೌಲಭ್ಯ ಇದ್ದರೂ ಹೆಚ್ಚಿನ ನೌಕರರಿಗೆ ಅನುಕೂಲವಾಗುತ್ತಿಲ್ಲ. ಹಾಗಾಗಿ, ಹೊರ ರೋಗಿಗಳಾಗಿ ದಾಖಲಾಗುವ ನೌಕರರಿಗೂ ವೈದ್ಯಕೀಯ ಭತ್ಯೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ನಿಯೋಜಿತ ಅಧ್ಯಕ್ಷ ಕೆ.ರಾಘವೇಂದ್ರ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ತಿಮ್ಮಪ್ಪ, ರಮೇಶ್‌ ಸುವರ್ಣ, ಜಂಟಿ ಕಾರ್ಯದರ್ಶಿ ಶ್ರೀಪತಿ ಉಪಾಧ್ಯ, ಕೋಶಾಧಿಕಾರಿ ಎ. ರಮೇಶ್‌ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !