ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿಭೆ, ಜ್ಞಾನದಿಂದ ಜಗತ್ತು ಬೆಳೆಯುತ್ತದೆ’

ಕುಂದಾಪುರದಲ್ಲಿ ಉದ್ಯೋಗ ಮೇಳ ಉದ್ಘಾಟಿಸಿದ ಸಚಿವ ಅಶ್ವತ್ಥ ನಾರಾಯಣ
Last Updated 30 ಜೂನ್ 2022, 4:55 IST
ಅಕ್ಷರ ಗಾತ್ರ

ಕುಂದಾಪುರ: ಪ್ರತಿಭೆ ಹಾಗೂ ಜ್ಞಾನದಿಂದ ಜಗತ್ತು ಬೆಳೆಯುತ್ತಿದೆ. ಕೌಶಲಾಧಾರಿತ ಶಿಕ್ಷಣ ಹಾಗೂ ಜ್ಞಾನವನ್ನು ಪಡೆದುಕೊಳ್ಳುವುದರಿಂದ ಸಮಾಜವನ್ನು ಎದುರಿಸುವ ಹಾಗೂ ಸಮಸ್ಯೆಯನ್ನು ಬಗೆಹರಿಸುವ ಶಕ್ತಿ ಯುವ ಸಮುದಾಯದಲ್ಲಿ ಅನಾವರಣಗೊಳ್ಳುತ್ತದೆ ಎಂದು ಉನ್ನತ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದರು.

ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬುಧವಾರ ಕರ್ನಾಟಕ ಕೌಶಲಾಭಿವೃದ್ಧಿ ನಿಗಮ, ಕೌಶಾಲಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉದ್ಯೋಗ ವಿನಿಮಯ ಕಚೇರಿ ಹಾಗೂ ಭಂಡಾರ್ಕಾರ್ಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಉದ್ಯೋಗಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಉದ್ಯೋಗಕ್ಕೆ ಕೊರತೆ ಇಲ್ಲ. ಅವಕಾಶ ಹೆಚ್ಚಾಗಿದ್ದು, ಅಕಾಂಕ್ಷಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ದೇಶದ ಬೇರೆ ಬೇರೆ ಕಡೆಗಳಿಂದ ರಾಜ್ಯಕ್ಕೆ ವಲಸೆ ಬರುತ್ತಿದ್ದಾರೆ. ಯುವ ಸಮುದಾಯಕ್ಕೆ ಅವರ ಕನಸಿನ ಉದ್ಯೋಗಕ್ಕೆ ಅವಕಾಶ ನೀಡಬೇಕು ಎನ್ನುವ ಉದ್ದೇಶದಿಂದ ಉದ್ಯೋಗ ಮೇಳದಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಲಾಗುತ್ತಿದೆ. ಬಿಟಿ ಇಲಾಖೆಯ ಮೂಲಕ ನ್ಯಾಸಂ ಅಡಿಯಲ್ಲಿ ಅಲ್ಪಾವಧಿಯ ಕೋರ್ಸ್‌ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಸಾಫ್ಟ್‌ವೇರ್ ಕಂಪನಿಗಳ ನೆರವಿನಿಂದ 27 ಸಾವಿರ ಕಂಪ್ಯೂಟರ್‌ಗಳನ್ನು ನೀಡಲಾಗಿದೆ. ರಾಜ್ಯದಲ್ಲಿನ 1,200 ಐಟಿಐ ಕಾಲೇಜುಗಳಲ್ಲಿ 2.5 ಲಕ್ಷ ವಿದ್ಯಾರ್ಥಿಗಳು ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ವಿದೇಶಕ್ಕೆ ತೆರಳುವವರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರದ ನೆರವಿನೊಂದಿಗೆ ಉಡುಪಿ ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿ ‘ಇಂಟರ್‌ನ್ಯಾಶನಲ್ ಮೈಗ್ರೇಶನ್ ಸೆಂಟರ್ (ಅಂತರರಾಷ್ಟ್ರೀಯ ವಲಸೆ ಕೇಂದ್ರ) ಪ್ರಾರಂಭಿಸಲಾಗುವುದು. ಜೂನ್‌.15 ರ ಕೌಶಲ ದಿನಾಚರಣೆಯಂದು ಉದ್ಯೋಗಾಕಾಂಕ್ಷಿಗಳ ಹಾಗೂ ಉದ್ಯೋಗದಾತರ ನಡುವೆ ಸಂಪರ್ಕ-ಸಮನ್ವಯ ಸಾಧಿಸಲು ‘ಸ್ಕೀಲ್ ಕನೆಕ್ಟ್’ ವೆಬ್‌ಪೋರ್ಟಲ್ ಲೋಕಾರ್ಪಣೆ ಮಾಡಲಾಗುವುದು ಎಂದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ರಾಜ್ಯದ ಶೇ 1ರಷ್ಟು ಜನರಿಗೆ ಮಾತ್ರ ಸರ್ಕಾರಿ ಉದ್ಯೋಗ ಪಡೆಯಲು ಆರ್ಥಿಕ ಇಲಾಖೆ ಅವಕಾಶ ಮಾಡಿಕೊಡುತ್ತದೆ. ಅದರಲ್ಲಿಯೂ ಖಾಲಿ ಹುದ್ದೆಯ ಕಾರಣದಿಂದಾಗಿ ಅಂದಾಜು 3.5 ಲಕ್ಷ ಮಂದಿ ಸರ್ಕಾರಿ ನೌಕರರು ಸೇವೆಯಲ್ಲಿ ಇದ್ದಾರೆ. ಉಳಿದ ಶೇ.99 ರಷ್ಟು ಮಂದಿ ಖಾಸಗಿ ಹಾಗೂ ಇತರ ಉದ್ಯೋಗಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದೆ. ಉದ್ಯೋಗ ಮೇಳಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೂಡಲೇ ಉದ್ಯೋಗಕ್ಕಾಗಿ ನೇಮಕಾತಿ ಪತ್ರವನ್ನು ನೀಡಲು ಕ್ರಮ ಕೈಗೊಳ್ಳಬೇಕು. ಕುಂದಾಪುರದ ಉದ್ಯೋಗ ಮೇಳ ಮಾದರಿ ಮೇಳವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಉದ್ಯೋಗದಾತರು ಕ್ರಮ ವಹಿಸಬೇಕು ಎಂದರು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಎ.ಕಿರಣಕುಮಾರ ಕೊಡ್ಗಿ, ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಕೆ.ಶಾಂತಾರಾಮ ಪ್ರಭು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡ, ಪುರಸಭೆಯ ಉಪಾಧ್ಯಕ್ಷ ಕೆ.ಸಂದೀಪ್ ಖಾರ್ವಿ ಇದ್ದರು.

ಜಿಲ್ಲಾ ಕೌಶಲಾಭಿವೃಧ್ಧಿ ಹಾಗೂ ಉದ್ಯಮಶೀಲತೆ ಇಲಾಖೆಯ ಅಧಿಕಾರಿ ಜಗದೀಶ್ ಸ್ವಾಗತಿಸಿದರು, ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಎನ್‌.ಪಿ.ನಾರಾಯಣ ಶೆಟ್ಟಿ ವಂದಿಸಿದರು, ಅಕ್ಷಯ್ ಶೆಟ್ಟಿ ಮೊಳಹಳ್ಳಿ ನಿರೂಪಿಸಿದರು.

‘ಕೌಶಲಾಧಾರಿತ ಶಿಕ್ಷಣ ಪಡೆಯಿರಿ’

ಕರ್ನಾಟಕ ಅವಿಷ್ಕಾರ, ತಂತ್ರಜ್ಞಾನ ಹಾಗೂ ಸೇವಾ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ಭಾರತಕ್ಕೆ ಕಲಶಪ್ರಾಯವಾಗಿದೆ. ಇಲ್ಲಿನ ಪ್ರತಿಭಾವಂತರೇ ನಮ್ಮ ವರದಾತರಾಗಿದ್ದಾರೆ. 6.5 ಕೋಟಿ ರಾಜ್ಯ ಜನತೆಯಲ್ಲಿ ಎಲ್ಲರೂ ಪ್ರತಿಭಾವಂತರಾಗಲು ಸಾಧ್ಯವಿಲ್ಲ. ಕಲಿಕೆ ಹಾಗೂ ಶಿಕ್ಷಣದಿಂದ ಸವಾಲನ್ನು ಎದುರಿಸುವ ಮನೋಭೂಮಿಕೆಯನ್ನು ರೂಢಿಸಿಕೊಳ್ಳಬೇಕು. ಯುವ ಸಮುದಾಯ ಒಂದು ಹೆಜ್ಜೆ ಮುಂದೆ ಇಟ್ಟರೆ, ಸರ್ಕಾರ ಐದು ಹೆಜ್ಜೆ ಮುಂದಿಡುತ್ತದೆ. ಪದವಿ ಶಿಕ್ಷಣದ ಜತೆ ಇತರ ಕೌಶಲಾಧಾರಿತ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಅಶ್ವತ್ಥ ನಾರಾಯಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT