ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: 11 ಹೋಮಕುಂಡಗಳಲ್ಲಿ ಅತಿರುದ್ರ ಮಹಾಯಾಗ

ಮಣಿಪಾಲದ ಶಿವಪಾಡಿಯಲ್ಲಿ ಮಹಾಯಾಗಕ್ಕೆ ಚಾಲನೆ; ಮಾರ್ಚ್‌ 5ರಂದು ಪೂರ್ಣಾಹುತಿ
Last Updated 22 ಫೆಬ್ರುವರಿ 2023, 15:47 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲದ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದ ಅತಿರುದ್ರ ಯಾಗ ಮಂಟಪದಲ್ಲಿ ಬುಧವಾರ ಮುಂಜಾನೆ ಅತಿರುದ್ರ ಮಹಾಯಾಗ ಆರಂಭವಾಯಿತು.

121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ ಅತಿರುದ್ರ ಮಹಾಯಾಗಕ್ಕೆ ಚಾಲನೆ ನೀಡಲಾಯಿತು. ಯಾಗದ ಪೂರ್ವಭಾವಿಯಾಗಿ ಮಹಾನ್ಯಾಸ ಪೂರ್ವಕ ರುದ್ರ ಪುರಶ್ಚರಣ ಮತ್ತು ಫಲನ್ಯಾಸಪೂರ್ವಕ ಪ್ರಾರ್ಥನೆ, ಅರಣೀ ಮಥನಪೂರ್ವಕ ಅಗ್ನಿ ಜನನ, ಉಮಾಮಹೇಶ್ವರನಿಗೆ ನವಕ ಪ್ರಧಾನ ಹೋಮ ಪುರಸ್ಸರ ನವಕಲಶ ಅಭಿಷೇಕ, ಪ್ರಸನ್ನಪೂಜೆ, ಮಹಾಪೂಜೆ ನೆರವೇರಿದವರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್‌ ಮಾತನಾಡಿ, ಅಪರೂಪದ ಅತಿರುದ್ರ ಮಹಾಯಾಗದಲ್ಲಿ ಭಾಗವಹಿಸುವ ಸದವಕಾಶ ಉಡುಪಿ ಜಿಲ್ಲೆಯ ಜನರಿಗೆ ಮೊದಲ ಬಾರಿಗೆ ಒದಗಿ ಬಂದಿದೆ. ಶೃಂಗೇರಿ ಮಠದ ಭಾರತೀ ಸ್ವಾಮೀಜಿಗಳ ನೇತೃತ್ವದಲ್ಲಿ 12 ದಿನ ನಡೆಯುವ ಯಾಗದಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಶೃಂಗೇರಿ ಮಠದ ಪ್ರಧಾನ ಅರ್ಚಕ ವಿನಾಯಕ ಉಡುಪ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈದಿಕ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೊಡುಗೆಗೆಳು ದೇಶದ ಸಂಸ್ಕೃತಿ ಪರಂಪರೆಯನ್ನು ಶ್ರೀಮಂತಗೊಳಿಸಿವೆ. ಯಾಗ, ಧಾರ್ಮಿಕ ಸಭೆ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಸರಿದಾರಿಯಲ್ಲಿ ಕೊಂಡೊಯ್ಯತ್ತವೆ ಎಂದರು.

ವಾಗ್ಮಿ ಅಕ್ಷಯ ಗೋಖಲೆ ಧಾರ್ಮಿಕ ಉಪನ್ಯಾಸ ನೀಡಿ, ಸಂಸ್ಕಾರ ಹಾಗೂ ಸಂಸ್ಕೃತಿಯ ಕೊರತೆಯ ಪರಿಣಾಮ ದೇಶದಲ್ಲಿ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಬದಲಾಗುತ್ತಿವೆ. ಹಳ್ಳಿಗಳಲ್ಲಿ ವಲಸೆ ಹೆಚ್ಚಾಗುತ್ತಿದ್ದು ನಗರಗಳು ತುಂಬಿ ತುಳುಕುತ್ತಿವೆ. ಸಂಬಂಧಗಳಲ್ಲಿ ಬಿರುಕುಗಳು ಸೃಷ್ಟಿಯಾಗಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರು.

ಲವ್, ಸೆಕ್ಸ್‌, ಲ್ಯಾಂಡ್ ಜಿಹಾದ್ ನಡೆಯುವಾಗ ಸಮಾಜ ಹೆಚ್ಚು ಜಾಗೃತವಾಗಿರಬೇಕು. ಪೋಷಕರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಬೇಕು. ಧಾರ್ಮಿಕ ವಿಚಾರಗಳನ್ನು ತಿಳಿಸಬೇಕು ಎಂದರು.

ಸಂಸ್ಕೃತಿ, ಪರಂಪರೆ, ಧಾರ್ಮಿಕ ವಿಚಾರಗಳಿಂದ ಯುವಜನತೆ ವಿಮುಖವಾಗುತ್ತಿದ್ದಾರೆ. ಮಕ್ಕಳನ್ನು ದೇವಸ್ಥಾನಗಳಿಗೆ ಹೋಗುವ ಬದಲು ಮಾಲ್‌ಗಳಿಗೆ ಕರೆದೊಯ್ಯವುದು ಹೆಚ್ಚಾಗುತ್ತಿದೆ. ಹಿಂದೂ ಸಮಾಜದಲ್ಲಿ ಗಂಡ–ಹೆಂಡತಿ ನಡುವಿನ ಸಂಬಂಧಗಳು ಸಡಿಲವಾಗುತ್ತಿವೆ. ಸಣ್ಣ ವಿಚಾರಗಳು ವಿಚ್ಚೇಧನಕ್ಕೆ ಕಾರಣವಾಗುತ್ತಿವೆ. ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರದ ಕೊರತೆ ವಿಚ್ಚೇಧನಕ್ಕೆ ಪ್ರಮುಖ ಕಾರಣ ಎಂದರು.

ಚಿತ್ರನಟ ರಕ್ಷಿತ್ ಶೆಟ್ಟಿ, ಶಾಸಕ ಕೆ.ರಘುಪತಿ ಭಟ್ ಕುಟುಂಬ ಸಮೇತವಾಗಿ ಯಾಗದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ವಿವಿಧ ಭಜನಾ ಮಂಡಳಿಗಳಿಂದ ಭಕ್ತಿ ಮಾಧುರ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರು ಯಾಗವನ್ನು ವೀಕ್ಷಿಸಿದರು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.

ಶೃಂಗೇರಿ ಶಾರದಾ ಪೀಠದ ಭಾರತೀ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗ ಮಾರ್ಚ್ 5ರವರೆಗೆ ನಡೆಯಲಿದೆ.

ಸ್ವಯಂಸೇವಕ ಸಂಘದ ಶಂಭು ಶೆಟ್ಟಿ, ಅರ್ಚಕರಾದ ವಾಗೀಶ್‌ ಶಾಸ್ತ್ರಿ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಬೋಳ ಸದಾಶಿವ ಶೆಟ್ಟಿ, ಯಾಗ ಸಮಿತಿ ಸಂಚಾಲಕರಾದ ನಾರಾಯಣ ಶೆಣೈ, ಅಕ್ಷಯ ಗೋಖಲೆ, ಉಡುಪಿ ಬ್ರಾಹ್ಮಣ ಸಮಾಜದ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ಮುಖಂಡರಾದ ಪಾಂಡುರಂಗ, ಮುಕುಂದ ಪ್ರಭು ಇದ್ದರು.

ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT