ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದ ವ್ಯಾಖ್ಯಾನ ನೀಡಿದ ಬಸವಣ್ಣ

‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ವೈಎಸ್‌ವಿ ದತ್ತಾ
Last Updated 2 ಆಗಸ್ಟ್ 2019, 14:50 IST
ಅಕ್ಷರ ಗಾತ್ರ

ಉಡುಪಿ: 13ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಪ್ರಜಾಪ್ರಭುತ್ವ ಉದಯವಾಯಿತು ಎಂದು ಇತಿಹಾಸ ಹೇಳುತ್ತದೆ. ಆದರೆ, ಅದಕ್ಕಿಂತ 100 ವರ್ಷ ಮುಂಚಿತವಾಗಿ 12ನೇ ಶತಮಾನದಲ್ಲೇ ಬಸವಣ್ಣ ಪ್ರಜಾಪ್ರಭುತ್ವದ ವ್ಯಾಖ್ಯಾನವನ್ನು ವಚನಗಳ ಮೂಲಕ ನೀಡಿದರು ಎಂದು ಜೆಡಿಎಸ್‌ ಮುಖಂಡ ವೈಎಸ್‌ವಿ ದತ್ತಾ ಹೇಳಿದರು.

ನಗರದ ಪುರಭವನದಲ್ಲಿ ನಡೆದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯಾ ಕಾಲಘಟ್ಟಕ್ಕೆ ಪ್ರಜಾಪ್ರಭುತ್ವ ಮೇಲುಗೈ ಸಾಧಿಸಿದೆ. 18ನೇ ಶತಮಾನದಲ್ಲಿ ಬಡವರು ಹಾಗೂ ಶ್ರೀಮಂತರ ನಡುವಿನ ಸಂಘರ್ಷವಾದ ಫ್ರಾನ್ಸ್‌ ಮಹಾಕ್ರಾಂತಿ ನಡೆಯಿತು.20ನೇ ಶತಮಾನದಲ್ಲಿ ರಷ್ಯಾ ಕ್ರಾಂತಿ ನಡೆಯಿತು. ಇವೆಲ್ಲಕ್ಕಿಂತಲೂ ಮಿಗಿಲಾದುದು ಬಸವಣ್ಣನವರ ಜನತಂತ್ರದ ಕ್ರಾಂತಿ ಎಂದರು.

ಜನತಂತ್ರ ವ್ಯವಸ್ಥೆಗೆ ಇಂಬುಕೊಟ್ಟವರು ಬಸವಣ್ಣ. ಮತದಾರರು ಯೋಗ್ಯ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸದಿದ್ದರೆ, ಜನತಂತ್ರ ವ್ಯವಸ್ಥೆ ವಿಫಲವಾಗುತ್ತದೆ ಎಂದರು.

ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ, ‘12ನೇ ಶತಮಾನದಲ್ಲೂ ಸಮಾಜ ದಿಕ್ಕು ತಪ್ಪಿತ್ತು. ಆದರೆ, ಜನರಿಗೆ ತಿಳಿವಳಿಕೆ ನೀಡಿದರೆ ಬದಲಾವಣೆ ಸಾಧ್ಯ ಎಂದು ಬಸವಣ್ಣ ನಂಬಿದ್ದರು. ಅದರಂತೆ ಕಾಯಕಜೀವಿಗಳ ನೆರವಿನಿಂದ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದರು.

ಪ್ರಸ್ತುತ ನಾಡಿನ ಹಲವು ಮಠಾಧಿಪತಿಗಳಿಗೆ, ರಾಜಕಾರಣಿಗಳಿಗೆ ಸಿರಿ ಎಂಬ ಗರ ಬಡಿದಿದೆ. ನಾಗರಿಕ ಹಾಗೂ ಮತದಾರ ಜಾಗೃತನಾದರೆ ಮಠಾಧಿಪತಿಗಳು ರಾಜಕಾರಣಿಗಳಿಗೆ ಹಿಡಿದ ಗರ ಬಿಟ್ಟು, ಜಾಗೃತರಾಗುತ್ತಾರೆ ಎಂದು ಕಿವಿಮಾತು ಹೇಳಿದರು.

ಮತದಾರರು ಆಮಿಷದ ಸೆಳೆತಕ್ಕೆ ಸಿಕ್ಕಿರುವುದು ದುರಂತ. ಮೊದಲು ಮತದಾರ ಬದಲಾದರೆ, ನೇತಾರ ತಾನಾಗೇ ಬದಲಾಗುತ್ತಾನೆ. ಬಸವತತ್ವವನ್ನು ಅರಿತು ಆಚರಣೆಗೆ ತರುವ ಮನಸ್ಸು ಮತದಾರ ಹಾಗೂ ನೇತಾರರಿಗೆ ಇದ್ದಿದ್ದರೆ ರಾಜ್ಯ ಹೊನ್ನಿನ ನಾಡಾಗುತ್ತಿತ್ತು ಎಂದರು.

ತಾತ್ವಿಕ ಬದ್ಧತೆ ಇಲ್ಲದಿದ್ದರೆ ಬದುಕು ನರಕವಾಗುತ್ತದೆ. ಜನ ಮೆಚ್ಚುವುದಕ್ಕಿಂತ ಮನ ಮೆಚ್ಚುವಂತೆ ನಡೆದುಕೊಳ್ಳಬೇಕು. ಖಾದಿ ಖಾಕಿ, ಖಾವಿ ಕೇವಲ ಬಟ್ಟೆಯಲ್ಲ; ತ್ಯಾಗ, ಪ್ರಾಮಾಣಿಕತೆ ಹಾಗೂ ಸತ್ಯದ ಸಂಕೇತ. ಇಂಥವುಗಳನ್ನು ಧರಿಸಿ ದಾರಿತಪ್ಪಿ ನಡೆದುಕೊಂಡರೆ ಭಗವಂತ ಒಲಿಯುವುದಿಲ್ಲ ಎಂದು ಟೀಕಿಸಿದರು.

ವ್ಯಕ್ತಿ ಆತ್ಮಶುದ್ಧಿ ಮಾಡಿಕೊಂಡರೆ, ತಾನಾಗಿಯೇ ಲೋಕಶುದ್ಧಿಯಾಗುತ್ತದೆ. ಇದರ ಅರಿವನ್ನು ಮೂಡಿಸಲು ನಾಡಿನಾದ್ಯಂತ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಉಡುಪಿ ಕನಕದಾಸ ಸೇವಾಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ, ಬಸವ ಸಮಿತಿ ಅಧ್ಯಕ್ಷ ಜಿ.ಎಂ.ಪಾಟೀಲ, ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ವೇದಿಕೆಯಲ್ಲಿ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT