ಭುಜಂಗ ಉದ್ಯಾನದಲ್ಲಿ ಪುಂಡರ ಹಾವಳಿ

7
ಶೌಚಾಲಯ ಅವ್ಯವಸ್ಥೆ, ರಂಗಮಂಟಪದಲ್ಲಿ ಅನೈತಿಕ ಚಟುವಟಿಕೆ– ವಾಯುವಿಹಾರಗಳ ಅಸಮಾಧಾನ

ಭುಜಂಗ ಉದ್ಯಾನದಲ್ಲಿ ಪುಂಡರ ಹಾವಳಿ

Published:
Updated:
Deccan Herald

ಉಡುಪಿ: ನಗರದ ಹೃದಯಭಾಗದಲ್ಲಿರುವ ಭುಜಂಗ ಉದ್ಯಾನವು ನಿರ್ವಹಣೆ ಕೊರತೆಯಿಂದ ನಲುಗುತ್ತಿದ್ದು, ಅವ್ಯವಸ್ಥೆಗಳ ಆಗರವಾಗಿದೆ. ಶೌಚಾಲಯ ಗಬ್ಬುನಾರುತ್ತಿದೆ. ಎಲ್ಲೆಂದರಲ್ಲಿ ಮದ್ಯದ ಬಾಟೆಲ್‌ಗಳ ದರ್ಶನವಾಗುತ್ತದೆ. ದೀಪಗಳು ಉರಿಯುತ್ತಿಲ್ಲ. ಇಷ್ಟಾದರೂ ನಗರಾಡಳಿತ ತಲೆಕೆಡಿಸಿಕೊಳ್ಳದಿರುವುದು ವಾಯುವಿಹಾರಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ಅಜ್ಜರಕಾಡಿನಲ್ಲಿ ಸುಮಾರು ಒಂದೂವರೆ ಎಕರೆ ವಿಶಾಲ ಪ್ರದೇಶದಲ್ಲಿ ಭುಜಂಗ ಪಾರ್ಕ್‌ ಹರಡಿಕೊಂಡಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಉದ್ಯಾನದೊಳಗೆ ವಾಕಿಂಗ್ ಟ್ರ್ಯಾಕ್, ರಂಗಮಂದಿರ, ಶೌಚಾಲಯ, ಕೂರಲು ಅಲ್ಲಲ್ಲಿ ಬೆಂಚ್‌ಗಳನ್ನು ಹಾಕಿಸಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ.

ಉದ್ಯಾನದಲ್ಲಿ ವಿದ್ಯುತ್ ದೀಪಗಳು ಕೆಟ್ಟು ನಿಂತಿವೆ. ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ, ರಾತ್ರಿಯಾಗುತ್ತಿದ್ದಂತೆ ಪುಂಡರ ಹಾವಳಿ ಶುರುವಾಗುತ್ತದೆ. ವಾಯುವಿಹಾರಕ್ಕೆ ಬಂದವರು ಮುಸ್ಸಂಜೆಯೇ ಮನೆ ಸೇರಬೇಕಾಗಿದೆ. ಮಹಿಳೆಯರು ಹೆದರಿ ಸಂಜೆಯ ವೇಳೆ ವಾಕಿಂಗ್ ಬರುವುದನ್ನೇ ಕಡಿಮೆ ಮಾಡಿದ್ದಾರೆ ಎನ್ನುತ್ತಾರೆ ವಾಯುವಿಹಾರಿ ಸಂಧ್ಯಾ ಹೆಗಡೆ.

ರಾತ್ರಿಯಾಗುತ್ತಿದ್ದಂತೆ ಕೆಲವರು ಉದ್ಯಾನದೊಳಗೆ ಬಂದು ಮದ್ಯ ಸೇವಿಸುತ್ತಾರೆ. ಇಲ್ಲಿನ ಬಯಲು ರಂಗಮಂದಿರವನ್ನೇ ರಾತ್ರಿಯ ವಾಸ್ತವ್ಯ ಮಾಡಿಕೊಳ್ಳುತ್ತಾರೆ. ಉದ್ಯಾನದೊಳಗೆ ಎಲ್ಲೆಂದರಲ್ಲಿ ಮದ್ಯದ ಬಾಟೆಲ್‌ಗಳು ಬಿದ್ದಿರುತ್ತವೆ. ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಸ್ಥಳೀಯರಾದ ಗಣಪತಿ ಭಟ್‌.

ಉದ್ಯಾನದ ಸುತ್ತ ಅಳವಡಿಸಿರುವ ಕಬ್ಬಿಣದ ಮೆಷ್‌ಗಳು ಅಲ್ಲಲ್ಲಿ ಹಾಳಾಗಿದ್ದು, ಎಲ್ಲೆಂದರಲ್ಲಿ ಪ್ರವೇಶದ್ವಾರಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಉದ್ಯಾನದ ಭದ್ರತೆಗೆ ಕಾವಲುಗಾರರಿಲ್ಲದಿರುವುದರಿಂದ, ಮಹಿಳೆಯರು, ವೃದ್ಧರಿಗೆ ಸಮಸ್ಯೆಯಾಗಿದೆ ಎನ್ನುತ್ತಾರೆ ವಾಯು ವಿಹಾರಿಗಳು.

ಉದ್ಯಾನದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಂಗಮಂದಿರವನ್ನು ನಿರ್ಮಿಸಲಾಗಿದೆ. ರಂಗಮಂದಿರದ ಗೇಟ್‌ಗಳು ಮುರಿದುಬಿದ್ದಿವೆ. ಕಾಲಿಡಲು ಸಾಧ್ಯವಾಗದಷ್ಟು ಕಳೆ ಬೆಳೆದುಕೊಂಡಿದೆ. ಕಾರಂಜಿ ಕೆಟ್ಟಿದೆ. ಮದ್ಯವ್ಯಸನಿಗಳು, ನಿರಾಶ್ರಿತರು, ಬಿಕ್ಷುಕರ ಪಾಲಿಗೆ ರಂಗಮಂದಿರ ಆಶ್ರಯ ತಾಣವಾಗಿ ಬದಲಾಗಿದೆ ಎನ್ನುತ್ತಾರೆ ಸ್ಥಳೀಯರು.

ರಂಗಮಂದಿರದ ಕಿಟಕಿಗಾಜುಗಳನ್ನು ಹೊಡೆದು ಹಾಕಲಾಗಿದೆ. ಬಾಗಿಲುಗಳನ್ನು ಮುರಿದು ಹಾಕಲಾಗಿದೆ. ಕೂಡಲೇ ದುರಸ್ತಿಗೊಳಿಸಿ, ನಿರಂತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎನ್ನುತ್ತಾರೆ ವಾಯುವಿಹಾರಿಗಳು.

ಇನ್ನೂ ಜಲಭಾದೆ ತೀರಿಸಿಕೊಳ್ಳಲು ಶೌಚಾಲಯ ಪ್ರವೇಶಿಸಿದರೆ ಅಲ್ಲಿನ ದುರ್ವಾಸನೆಗೆ ಉಸಿರುಗಟ್ಟುತ್ತದೆ. ನೀರು ಸರಬರಾಜಾಗುವುದಿಲ್ಲ. ಎಲ್ಲೆಂದರಲ್ಲಿ ಗುಟ್ಕಾ ಉಗಿಯಲಾಗಿದೆ. ಕಮೋಡ್‌ ನೋಡಿದರೆ ಶೌಚ ಮಾಡಲು ಸಾಧ್ಯವಾಗುವುದಿಲ್ಲ. ಉದ್ಯಾನಕ್ಕೆ ಬರುವ ವೃದ್ಧರಲ್ಲಿ ಹೆಚ್ಚಿನವರಿಗೆ ಸಕ್ಕರೆ ಕಾಯಿಲೆಯಿದ್ದು, ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ತುಂಬಾ ತೊಂದರೆಯಾಗಿದೆ ಎನ್ನುತ್ತಾರೆ ವೃದ್ಧರಾದ ಶಶಿಧರ ಭಟ್‌.

‘ಮಕ್ಕಳ ಉದ್ಯಾನವೂ ನಿರ್ಲಕ್ಷ್ಯ’

ಭುಜಂಗ ಪಾರ್ಕ್‌ನ ಪಕ್ಕದಲ್ಲಿರುವ ಮಕ್ಕಳ ಉದ್ಯಾನವೂ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮಕ್ಕಳ ಆಟಿಕೆಗಳು ಹಾಳಾಗಿವೆ. ಕಬ್ಬಿಣದ ವಸ್ತುಗಳು ತುಕ್ಕುಹಿಡಿದಿವೆ. ಜಾರುಬಂಡೆ ಬಿರುಕುಬಿಟ್ಟಿದೆ. ಅವಘಡಗಳು ನಡೆಯುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಎನ್ನುತ್ತಾರೆ ಪೋಷಕರಾದ ಸುನೀಲ್‌ ದಂಪತಿ.

ಮತ್ತೊಂದೆಡೆ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಬಳಿ ರಾತ್ರಿಹೊತ್ತು ಪುಂಡರು ಮದ್ಯ ಸೇವಿಸುತ್ತಾರೆ. ಈ ಬಗ್ಗೆ ಯಾರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.

‘ಶೀಘ್ರ ಸಮಸ್ಯೆಗಳಿಂದ ಮುಕ್ತಿ’

ಉದ್ಯಾನದಲ್ಲಿ ಶೌಚಾಲಯ ನಿರ್ವಹಣೆಗೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಸಿಬ್ಬಂದಿಯನ್ನು ನಿಯೋಜಿಸುವಂತೆ ಎಇಇ ಗೆ ಸೂಚನೆ ನೀಡಲಾಗಿದೆ. ಮುರಿದುಬಿದ್ದಿರುವ ರಂಗಮಂದಿರದ ಗೇಟ್‌ ಹಾಗೂ ಕಿಟಿಕಿಗಳನ್ನು ಸರಿಪಡಿಸುವಂತೆ ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚನೆ ನೀಡಲಾಗಿದೆ ಎನ್ನುತ್ತಾರೆ ನಗರಸಭೆ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ.

ಭುಜಂಗ ಪಾರ್ಕ್‌ನ ಅರ್ಧಭಾಗವನ್ನು ಖಾಸಗಿ ಸಂಸ್ಥೆಗೆ ನಿರ್ವಹಣೆ ಮಾಡಲು ಟೆಂಡರ್ ನೀಡಲಾಗಿದೆ. ಉಳಿದ ಭಾಗವನ್ನೂ ಟೆಂಡರ್ ನೀಡಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಉದ್ಯಾನದ ನಿರ್ವಹಣೆ ಮಾಡಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !