ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ಲವ ಮುಸ್ಲಿಂ ಸ್ನೇಹ ಸಮಾವೇಶ ಮುಂದೂಡಿಕೆ

ಮುಂದಿನ ಸಮಿತಿ ಸಭೆಯಲ್ಲಿ ಕಾರ್ಯಕ್ರಮದ ದಿನಾಂಕ ನಿಗದಿ
Last Updated 9 ಜನವರಿ 2020, 10:24 IST
ಅಕ್ಷರ ಗಾತ್ರ

ಉಡುಪಿ: ಅನಿವಾರ್ಯ ಕಾರಣಗಳಿಂದ ಜ.11ರಂದು ಉಡುಪಿಯ ಪುರಭವನದಲ್ಲಿ ನಡೆಯಬೇಕಿದ್ದ ಬಿಲ್ಲವ ಮುಸ್ಲಿಂ ಸ್ನೇಹ ಸಮಾವೇಶವನ್ನು ಮುಂದೂಡಲಾಗಿದೆ. ಮುಂದಿನ ಕಾರ್ಯಕ್ರಮದ ದಿನಾಂಕವನ್ನು ಸಮಿತಿ ಸಭೆಯಲ್ಲಿ ನಿಗದಿ ಮಾಡಲಾಗುವುದು ಎಂದು ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ವಿನಯ ಕುಮಾರ ಸೊರಕೆ ತಿಳಿಸಿದರು.

ಪುರಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಮಾವೇಶದ ಬಗ್ಗೆ ಕೆಲವರು ಗೊಂದಲ ಸೃಷ್ಟಿಸಿ, ಸ್ವಾರ್ಥ ಹಾಗೂ ಸ್ವಹಿತಾಸಕ್ತಿಗಾಗಿ ಕುತಂತ್ರ ನಡೆಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಸಳ್ಳುಗಳನ್ನು ಹಬ್ಬಿಸಿದರು. ಸಮಿತಿ ಸದಸ್ಯರ ವಿರುದ್ಧ ಕೀಳುಮಟ್ಟದ ಭಾಷೆ ಪ್ರಯೋಗಿಸಿ ಸಮಾವೇಶದಿಂದ ಹಿಂದೆ ಸರಿಯುವಂತೆಮಾನಸಿಕ ಒತ್ತಡ ಹೇರಿ ಬೆದರಿಕೆ ಹಾಕಿದರು ಎಂದು ಸೊರಕೆ ಅಸಮಾಧಾನ ಹೊರಹಾಕಿದರು.

ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತು ಸ್ವಾಗತ ಸಮಿತಿಯ ಕೆಲವರು ಸಮಾವೇಶದಿಂದ ಹಿಂದೆ ಸರಿದಿದ್ದಾರೆ. ಇಂತಹ ಗೊಂದಲದ ಪರಿಸ್ಥಿತಿಯಲ್ಲಿ ಸಮಾವೇಶ ಮಾಡುವುದು ಸರಿಯಲ್ಲ. ಪರ್ಯಾಯ ಮಹೋತ್ಸವ ನಡೆಯುತ್ತಿದ್ದು ಸೌಹಾರ್ದಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಸಮಾವೇಶ ಮುಂದೂಡಲಾಗಿದೆ ಎಂದರು.

ಕೋಟ ಒಪ್ಪಿಗೆ ಇತ್ತು

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಒಪ್ಪಿಗೆ ಪಡೆದೇಸ್ನೇಹ ಸಮಾವೇಶದ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಿಸಲಾಗಿತ್ತು. ಆದರೂ, ಒಪ್ಪಿಗೆ ಪಡೆದಿರಲಿಲ್ಲ ಎಂಬವದಂತಿಗಳನ್ನು ಹರಿಯಬಿಡಲಾಯಿತು. ಕೋಟ ಅವರನ್ನು ಮೂರು ಬಾರಿ ಸಂಪರ್ಕಿಸಿ, ಒಪ್ಪಿಗೆ ಪಡೆದಿದ್ದೇವೆ ಎಂದು ಸೊರಕೆ ಹೇಳಿದರು.

ಸುನೀಲ್ ಕುಮಾರ್ ಅವರಿಗೂ ಆಹ್ವಾನ

ಶಾಸಕ ಸುನಿಲ್‌ ಕುಮಾರ್‌ ಅವರಿಗೆ ಖುದ್ದು ದೂರವಾಣಿ ಮೂಲಕ ಸಮಾವೇಶದಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದೆ. ಆದರೆ, ಅವರು ನಂತರ ತಿಳಿಸುವುದಾಗಿ ಹೇಳಿದ್ದರು. ಬಳಿಕ ಸಂಪರ್ಕ ಮಾಡದ ಕಾರಣಕ್ಕೆ ಅವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ, ಜಿಲ್ಲಾ ಪಂಚಾಯ್ತಿ ಸದಸ್ಯ ಜನಾರ್ದನ ತೋನ್ಸೆ, ಬಿಲ್ಲವ ಮುಖಂಡರಾದ ನವೀನ್ ಚಂದ್ರ ಸುವರ್ಣ ಅಡ್ವೆ, ರಾಜರಾಮ್ ಸಾಸ್ತಾನ, ಸುಧೀರ್ ಕುಮಾರ್, ಶ್ರೀಕರ ಅಂಚನ್, ಸುಧಾಕರ ಕಲ್ಮಾಡಿ, ಸುಭೀತ್ ಕಾರ್ಕಳ, ತಿಮ್ಮ ಪೂಜಾರಿ, ಆನಂದ ಪೂಜಾರಿ ಬನ್ನಂಜೆ, ದಿನಕರ ಹೇರೂರು, ಇದ್ರೀಸ್ ಹೂಡೆ, ಮುಹಮ್ಮದ್ ಮೌಲಾ, ಶಬಿ ಅಹ್ಮದ್ ಖಾಝಿ, ಇಬ್ರಾಹಿಂ ಕೋಟ, ರಫೀಕ್ ಬಿಎಸ್ಎಫ್, ಮುಹಮ್ಮದ್ ಗೌಸ್, ಜಫರುಲ್ಲಾ ಹೂಡೆ, ಇಕ್ಬಾಲ್ ಕಟಪಾಡಿ ಇದ್ದರು.

ಕಾಲವೇ ಉತ್ತರ ಕೊಡಲಿದೆ: ಕೋಟ

ರಾಜಕಾರಣದ ಸೈದ್ದಾಂತಿಕ ವಿಚಾರಗಳೇನೆ ಇದ್ದರೂ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಅವರ ಸತ್ಯಕ್ಕೆ ದೂರವಾದ ಮಾತುಗಳಿಂದ ಮನಸ್ಸಿಗೆ ನೋವಾಗಿದೆ. ಅವರ ಆರೋಪಗಳಿಗೆ ಕಾಲವೇ ಉತ್ತರ ಕೊಡಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT