ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಗೆ ಸಿಗದ ಉಡುಪಿ ಉಸ್ತುವಾರಿ | ಬಿಜೆಪಿ ಶಾಸಕರ ವಿರುದ್ಧ ಸಿಡಿದ ಬಿಲ್ಲವ ಪರಿಷತ್‌

ಅಸಮಾಧಾನ
Last Updated 17 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರ ಬಿಲ್ಲವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬಾರದು ಎಂದು ಜಿಲ್ಲೆಯ ಐವರು ಶಾಸಕರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ ಎಂಬ ಗುಮಾನಿ ಇದೆ. ಇದು ನಿಜವಾಗಿದ್ದರೆ ಶಾಸಕರ ನಡೆಯನ್ನು ಬಿಲ್ಲವ ಪರಿಷತ್‌ ತೀವ್ರವಾಗಿ ಖಂಡಿಸುತ್ತದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾಭಿಮಾನದ ಪ್ರಶ್ನೆ:

ಕೋಟದವರಾದ ಶ್ರೀನಿವಾಸ ಪೂಜಾರಿ ಅವರನ್ನು ತವರು ಜಿಲ್ಲೆಗೆ ನೇಮಕ ಮಾಡದೆ ದಕ್ಷಿಣ ಕನ್ನಡ ಉಸ್ತುವಾರಿಯನ್ನಾಗಿ ಮಾಡಿರುವುದು ಸಮಾಜಕ್ಕೆ ನೋವು ತಂದಿದೆ. ಇದಕ್ಕಿಂತಲೂ ಹೆಚ್ಚಾಗಿ, ಇಲ್ಲಿನ ಶಾಸಕರೆಲ್ಲ ಸೇರಿ ಪ್ರಾಮಾಣಿಕ ರಾಜಕಾರಣಿ ಕೋಟಗೆ ಉಡುಪಿ ಉಸ್ತುವಾರಿ ಸ್ಥಾನ ಕೈತಪ್ಪುವಂತೆ ಮಾಡಿದ್ದು ಮತ್ತಷ್ಟು ನೋವು ತಂದಿದೆ ಎಂದು ಮುಖಂಡ ಕಿರಣ್‌ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿ:

ಶಾಸಕರ ಮೇಲಿನ ಆರೋಪಗಳು ಸುಳ್ಳಾದರೆ ಕೋಟ ಅವರನ್ನೇ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಬೇಕು. ಇಲ್ಲವಾದರೆ ಕಟಪಾಡಿಯಲ್ಲಿ ಬಿಲ್ಲವರೆಲ್ಲ ಸೆ.19ರಂದು ಸಭೆ ಸೇರಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೋಟ ಹಿಂದೆಯೂ ಉಸ್ತುವಾರಿ ಸಚಿವರಾಗಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಹಣದ ಬಲವಿಲ್ಲವಿಲ್ಲದಿದ್ದರೂ ಕಾರ್ಯಕ್ಷಮತೆಯಿಂದ ಪಂಚಾಯತ್ ಸ್ಥಾನದಿಂದ ಸಚಿವ ಸ್ಥಾನದವರೆಗೆ ಬೆಳೆದಿದ್ದಾರೆ. ಕೋಟ ನೇಮಕಕ್ಕೆ ಅಡ್ಡಿ ಮಾಡಲು ಕಾರಣಗಳು ಏನು ಎಂಬುದು ಬಹಿರಂಗವಾಗಬೇಕು. ಇದು ಬಿಲ್ಲವರ ಸ್ವಾಭಿಮಾನದ ಪ್ರಶ್ನೆ ಎಂದರು.

ಉಡುಪಿ ಜಿಲ್ಲಾ ಉಸ್ತುವಾರಿಯಾಗಿ ನೇಮಕವಾಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮೇಲೆ ರಾಜ್ಯದ ಕಾನೂನು ಸುವ್ಯವಸ್ಥೆಯ ಹೊಣೆಗಾರಿಕೆ ಇದೆ. ಹೀಗಿರುವಾಗ ಜಿಲ್ಲೆಯ ಮೇಲೆ ಗಮನ ಹರಿಸಲು ಸಾದ್ಯವೇ, ಜಿಲ್ಲೆಗೆ ನಿರಂತರವಾಗಿ ಭೇಟಿನೀಡಲು ಸಾಧ್ಯವೇ ಎಂದು ಮುಖಂಡರು ಪ್ರಶ್ನಿಸಿದರು.

ಬಿಲ್ಲವರು ಅನ್ಯಾಯವಾದರೆ ಕೇಳುವುದಿಲ್ಲ, ಪ್ರತಿಭಟಿಸುವುದಿಲ್ಲ ಎಂಬ ಧೋರಣೆ ಇದೆ. ಹಿಂದೆ ವಿನಯಕುಮಾರ ಸೊರಕೆ ಅವರನ್ನೂ ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು. ಈಗ ಬಿಲ್ಲವ ಎಂಬ ಕಾರಣಕ್ಕೆ ಕೋಟ ಅವರಿಗೆ ಅನ್ಯಾಯ ಮಾಡಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮುಖಂಡ ಅಚ್ಯುತ ಅಮೀನ್‌ ಕಲ್ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಉಸ್ತುವಾರಿ ನೇಮಕದಲ್ಲಿ ಆಯಾ ಜಿಲ್ಲೆಯವರಿಗೆ ಆದ್ಯತೆ ನೀಡುವುದು ರೂಢಿ. ಜಿಲ್ಲೆಯಲ್ಲಿ ಮೀನುಗಾರಿಕೆ, ಬಂದರು, ಮಜುರಾಯಿ ಇಲಾಖೆಗೆ ಒಳಪಡುವ ಪ್ರಸಿದ್ಧ ದೇವಸ್ಥಾನಗಳಿದ್ದು, ಕೋಟ ಅವರನ್ನೇ ನೇಮಕ ಮಾಡಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು ಎಂದು ವಾದಿಸಿದರು.

ನನ್ನ ಗಮನಕ್ಕೆ ಬಂದಿಲ್ಲ: ಕೋಟ

ಮುಖ್ಯಮಂತ್ರಿ ಆದೇಶದಂತೆ ದಕ್ಷಿಣ ಕನ್ನಡದ ಉಸ್ತುವಾರಿಯಾಗಿ ಕೆಲಸ ಆರಂಭಿಸಿದ್ದೇನೆ. ಉಡುಪಿ ಉಸ್ತುವಾರಿ ಸ್ಥಾನ ತಪ್ಪಿಸಲು ಜಿಲ್ಲೆಯ ಶಾಸಕರು ಪ್ರಯತ್ನಿಸಿದ್ದಾರೆ ಎಂಬ ವಿಚಾರ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT