ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ವಲಸೆ ಹಕ್ಕಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ

ರಸ್ತೆ, ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣಹೋಮ
Last Updated 2 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲ ನಗರ ಹಾಗೂ ಸುತ್ತಮುತ್ತಲಿನ ರಸ್ತೆ, ಕಟ್ಟಡ, ಮನೆ ಸೇರಿದಂತೆ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ. ಇದರಿಂದಾಗಿ ಹಕ್ಕಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸ್ಥಳೀಯ ಪ್ರಭೇದಕ್ಕೆ ಸೇರಿದ ಕಾಗೆ ಹಾಗೂ ವಲಸೆ ಹಕ್ಕಿಗಳ ಪ್ರಮಾಣವೂ ಕಡಿಮೆ ಆಗಿದೆ.

11 ವರ್ಷಗಳಿಂದ ಮಣಿಪಾಲ ಪರಿಸರದಲ್ಲಿ ಪಕ್ಷಿಗಳ ವೀಕ್ಷಣೆ, ರಕ್ಷಣೆ ಹಾಗೂ ದಾಖಲಾತಿ ಕಾರ್ಯದಲ್ಲಿ ತೊಡಗಿಕೊಂಡಿರುವ ಮಣಿಪಾಲ ಬರ್ಡ್ಸ್‌ ಕ್ಲಬ್‌ನ ಸದಸ್ಯ ನಾಗೇಂದ್ರ ನಾಯಕ್‌ ಅಮ್ಮುಂಜೆ ಅವರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮಣಿಪಾಲದಿಂದ ತೀರ್ಥಹಳ್ಳಿ ಹೆದ್ದಾರಿ ಅಭಿವೃದ್ಧಿಗಾಗಿ ರಸ್ತೆ ಬದಿಯ ಸಾಕಷ್ಟು ಮರಗಳನ್ನು ಕಡಿಯಲಾಗಿದ್ದು, ಇದು ವಿವಿಧ ಪ್ರಭೇದಗಳಿಗೆ ಸೇರಿದ ಪಕ್ಷಿಗಳ ಜೀವಕ್ಕೆ ಸಂಚಕಾರ ತಂದೊಡ್ಡಿದೆ. ಈ ಹಿಂದೆ ಮಣಿಪಾಲ ಪರಿಸರದಲ್ಲಿ ಕಾಗೆಗಳು ಸಾಕಷ್ಟು ಸಂಖ್ಯೆಯಲ್ಲಿದ್ದವು. ಆದರೆ, ಮರಗಳನ್ನು ಕಡಿದ ಬಳಿಕ ಕಾಗೆಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಅವುಗಳಿಗೆ ಆಹಾರ ಹಾಗೂ ಗೂಡುಕಟ್ಟಲು ಸೂಕ್ತ ಮರಗಳಿಲ್ಲದ ಪರಿಣಾಮ ಬೇರೆಡೆಗೆ ಹೋಗುತ್ತಿವೆ. ಕೆಲವೊಂದು ಕಾಗೆಗಳ ಮರಿ ಹಾಗೂ ಮೊಟ್ಟೆಗಳು ಮರ ಕಡಿಯುವ ಸಂದರ್ಭದಲ್ಲಿ ನೆಲಕ್ಕೆ ಬಿದ್ದು ಸಂಪೂರ್ಣ ನಾಶವಾಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅನಗತ್ಯವಾಗಿ ಮರ ಕಡಿಯಬೇಡಿ

ಸಾರ್ವಜನಿಕರು ತಮ್ಮ ಜಾಗದಲ್ಲಿರುವ ಮರಗಳನ್ನು ಅನಗತ್ಯವಾಗಿ ಕಡಿಯಬಾರದು. ತುಂಬಾ ಸಮಸ್ಯೆ ಆಗುತ್ತಿರುವ ಹಾಗೂ ಅಗತ್ಯವಿರುವ ಮರಗಳನ್ನು ಮಾತ್ರ ಕಡಿಯಬೇಕು. ಬೇಕಾಬಿಟ್ಟಿಯಾಗಿ ಮರ ಕಡಿದರೆ, ಈ ಮರಗಳನ್ನೇ ಆಶ್ರಯಿಸಿಕೊಂಡು ಬದುಕುತ್ತಿರುವ ಪಕ್ಷಿಗಳ ಸಂತತಿ ನಾಶ ಆಗುತ್ತದೆ ಎಂದು ಅವರು ವಿನಂತಿಸಿದ್ದಾರೆ.

320 ವಿವಿಧ ಪ್ರಭೇದಗಳ ಹಕ್ಕಿಗಳ ವೀಕ್ಷಣೆ

11 ವರ್ಷಗಳಲ್ಲಿ ಮಣಿಪಾಲದ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 320 ವಿವಿಧ ಪ್ರಭೇದಗಳ ಹಕ್ಕಿಗಳನ್ನು ವೀಕ್ಷಣೆ ಮಾಡಿದ್ದು, ಅದರಲ್ಲಿ 100ರಿಂದ 120 ಸ್ಥಳೀಯ ಪ್ರಭೇದಕ್ಕೆ ಸೇರಿದ ಹಕ್ಕಿಗಳಿವೆ ಎಂದು ಗುರುತಿಸಲಾಗಿದೆ. ಸರಳೇಬೆಟ್ಟು ಎಂಡ್‌ ಪಾಯಿಂಟ್‌, ಇಂದ್ರಾಳಿ, ಶೆಟ್ಟಿಬೆಟ್ಟು, ಕರ್ವಾಲು ಡಂಪಿಂಗ್‌ಯಾರ್ಡ್‌, ದಶರಥನಗರ, ಶಾಂತಿನಗರ, ಹೆರ್ಗ ಮೊದಲಾದ ಕಡೆಗಳಲ್ಲಿ ಪಕ್ಷಿ ವೀಕ್ಷಣೆ ಮಾಡಲಾಗಿದೆ.

ಇಂಗ್ಲೆಂಡ್‌, ಟಿಬೆಟ್‌, ಮಂಗೋಲಿಯಾ, ಸರ್ಬಿಯಾ ಮೊದಲಾದ ದೇಶಗಳಿಂದ ಹೆಚ್ಚಾಗಿ ವಲಸೆ ಹಕ್ಕಿಗಳು ಬರುತ್ತಿದ್ದು, ಅವುಗಳಲ್ಲಿ ಮೆಗಿನಿಟ್ರಿ, ವೇಡರ್ಸ್‌ (ಸಮುದ್ರ ಹಕ್ಕಿಗಳು), ಗೋಲ್ಡನ್‌ ಒರೆಯರ್‌, ಫ್ಲೈ ಕ್ಯಾಚರ್‌, ಮಾಬ್ಲಸ್‌ ಪ್ರಭೇದಗಳಿಗೆ ಸೇರಿದ ಹಕ್ಕಿಗಳನ್ನು ವೀಕ್ಷಣೆ ಮಾಡಲಾಗಿದೆ ಎಂದು ತಿಳಿಸಿದರು.

ಅಕ್ಟೋಬರ್‌ನಿಂದ ಫೆಬ್ರುವರಿವರೆಗೆ ಪಕ್ಷಿ ವೀಕ್ಷಣೆಗೆ ಪ್ರಸಕ್ತ ಕಾಲವಾಗಿದೆ. ಈ ಮೇಲಿನ ದೇಶಗಳಲ್ಲಿ ಚಳಿಗಾಲ ಆರಂಭವಾಗುತ್ತಿದಂತೆ ವಲಸೆ ಹಕ್ಕಿಗಳು ಸಂತಾನೊತ್ಪತ್ತಿ ಮಾಡಲು ಇಲ್ಲಿಗೆ ಬರುತ್ತವೆ. ಮೂರ್ನಾಲ್ಕು ತಿಂಗಳು ಇಲ್ಲಿದ್ದು, ಮರಿಗಳ ಜತೆಗೆ ತಮ್ಮ ದೇಶಕ್ಕೆ ಮರಳುತ್ತವೆ ಎಂದರು.

15 ತಂಡಗಳ ರಚನೆ

ಪಕ್ಷಿ ವೀಕ್ಷಣೆಗೆ 15 ತಂಡಗಳ ರಚನೆ ಪಕ್ಷಿ ವೀಕ್ಷಣೆಗಾಗಿ 10ರಿಂದ 15 ಜನರನ್ನೊಳಗೊಂಡ 15 ತಂಡಗಳನ್ನು ಮಾಡಲಾಗುತ್ತದೆ. ಪ್ರತಿಯೊಂದು ತಂಡದಲ್ಲಿ ಎರಡರಿಂದ ಮೂರು ಮಂದಿ ಪಕ್ಷಿ ತಜ್ಞರು ಇರುತ್ತಾರೆ. ಪಕ್ಷಿ ವೀಕ್ಷಣೆ ಬಗ್ಗೆ ಆಸಕ್ತಿ ಹೊಂದಿರುವವರು ಬರ್ಡ್ಸ್‌ ಕ್ಲಬ್‌ಗೆ ಸೇರ್ಪಡೆಯಾಗಬಹುದು. ಪ್ರತಿ ಭಾನುವಾರ ಮುಂಜಾನೆ ಪಕ್ಷಿ ವೀಕ್ಷಣೆಗೆ ಚಾರಣ ಹೋಗಲಾಗುತ್ತದೆ ಎಂದು ನಾಗೇಂದ್ರ ನಾಯಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT