ಉಡುಪಿ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪ್ರೌಢಿಮೆ ಹೊಂದಿರುವ, ಪಕ್ಷದ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡಿರುವ ಪ್ರಬುದ್ಧರನ್ನು ಬಿಜೆಪಿ ಪ್ರಕೋಷ್ಠಗಳ ಜಿಲ್ಲಾ ಸಂಯೋಜಕರು ಮತ್ತು ವಿವಿಧ ಪ್ರಕೋಷ್ಠಗಳ ಜಿಲ್ಲಾ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಪ್ರಕೋಷ್ಠಗಳ ಕ್ರಿಯಾಶೀಲತೆ ಪಕ್ಷದ ಬೆಳವಣಿಗೆಗೆ ಪೂರಕ ಶಕ್ತಿಯಾಗಿ ಪರಿಣಮಿಸಲಿದೆ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ನಡೆದ ಪ್ರಕೋಷ್ಠಗಳ ಜಿಲ್ಲಾ ಸಂಯೋಜಕರು ಮತ್ತು ವಿವಿಧ ಪ್ರಕೋಷ್ಠಗಳ ಜಿಲ್ಲಾ ಸಂಚಾಲಕರು ಮತ್ತು ಸಹ ಸಂಚಾಲಕರ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆ ಮತ್ತು ಮಂಡಲಗಳಲ್ಲಿ ಪ್ರತೀ ಪ್ರಕೋಷ್ಠಗಳ ಸಮಿತಿಗಳನ್ನು ರಚಿಸಿ, ಅಂತಹ ಸಮಿತಿಗಳು ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗುವ ಮೂಲಕ ಪಕ್ಷ ಸಂಘಟನೆಗೆ ವಿಶೇಷ ಕೊಡುಗೆ ನೀಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ ಮಾತನಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಪ್ರಕೋಷ್ಠಗಳ ಜಿಲ್ಲಾ ಸಂಯೋಜಕರಾದ ದಿಲೇಶ್ ಶೆಟ್ಟಿ, ಶಂಕರ ಅಂಕದಕಟ್ಟೆ, ಕಾರ್ಮಿಕರ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯ ಶೈಲೇಂದ್ರ ಶೆಟ್ಟಿ, ಪ್ರಬುದ್ಧರ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯ ರಾಧಾಕೃಷ್ಣ ಶೆಟ್ಟಿ, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಮನೋಹರ್ ಎಸ್. ಕಲ್ಮಾಡಿ, ನಿಕಟಪೂರ್ವ ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ದೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.