ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ವಿಕೃತಿಯಿಂದ ಹೊರತನ್ನಿ: ಪಲಿಮಾರು ಶ್ರೀ

ಕಿಶೋರ ಯಕ್ಷ ಸಂಭ್ರಮಕ್ಕೆ ಚಾಲನೆ ನೀಡಿ ಪಲಿಮಾರು ಶ್ರೀ
Last Updated 25 ನವೆಂಬರ್ 2019, 14:38 IST
ಅಕ್ಷರ ಗಾತ್ರ

ಉಡುಪಿ: ಪಾಶ್ಚಿಮಾತ್ಯ ಸಂಸ್ಕೃತಿಯ ವಿಕೃತಿ ಮಕ್ಕಳನ್ನು ಬೇರೆಡೆಗೆ ಸೆಳೆಯುತ್ತಿದೆ. ಇದರಿಂದ ನಮ್ಮ ಮಕ್ಕಳನ್ನು ಹೊರತರಬೇಕಾದರೆ, ಅವರಿಗೆ ನಮ್ಮ ದೇಶೀಯ ಸಾಂಸ್ಕೃತಿಕ ಕಲೆಯಾದ ಯಕ್ಷಗಾನದ ಮೂಲಕ ಶಿಕ್ಷಣ ನೀಡಬೇಕು ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.

ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಕ್ಷ ಶಿಕ್ಷಣ ಟ್ರಸ್ಟ್‌ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಿದ್ದ ‘ಕಿಶೋರ ಯಕ್ಷ ಸಂಭ್ರಮ–2019’ಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಇಂದಿನ ಮಕ್ಕಳು ಶಿಕ್ಷಣದ ಒತ್ತಡದಲ್ಲಿದ್ದರೂ ಮೊಬೈಲ್‌ ನೋಡಲು ಸಮಯಾವಕಾಶ ಇರುತ್ತದೆ. ಆದರೆ ಯಕ್ಷ ಶಿಕ್ಷಣದಲ್ಲಿ ಭಾಗವಹಿಸುವ ಮಕ್ಕಳು ಶಾಲೆಯ ಪಾಠದ ಜತೆಗೆ ಯಕ್ಷಗಾನ ಚಟುವಟಿಕೆಯಲ್ಲಿ ಸದಾ ನಿರತರಾಗಿರುತ್ತಾರೆ. ಅವರಿಗೆ ಮೊಬೈಲ್‌ ನೋಡುವಷ್ಟು ಬಿಡುವು ಇರುವುದಿಲ್ಲ ಎಂದರು.

ಮಕ್ಕಳಿಗೆ ಎಷ್ಟು ವಿದ್ಯೆಯನ್ನು ಕೊಟ್ಟರೂ ಅದನ್ನು ಪಡೆದುಕೊಳ್ಳುವ ಸಾಮರ್ಥ್ಯ ಅವರಲ್ಲಿರುತ್ತದೆ. ಹಾಗಾಗಿ ಮಕ್ಕಳಿಗೆ ಎಳವೆಯಲ್ಲಿಯೇ ಯಕ್ಷಗಾನವನ್ನು ಕಲಿಸಿಕೊಟ್ಟರೆ, ಅದು ಕೊನೆಯವರೆಗೂ ಉಳಿಯುತ್ತದೆ. ಯಕ್ಷಗಾನದಲ್ಲಿ ಕುಣಿಯುವುದೇ ಒಂದು ಯೋಗಾಭ್ಯಾಸ. ಆದ್ದರಿಂದ ಯಕ್ಷಗಾನದ ವಿದ್ಯಾರ್ಥಿಗಳು ಬೇರೆ ಯೋಗಾಭ್ಯಾಸ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಯಕ್ಷಗಾನ ಸರ್ವಕಾಲಿಕವಾಗಿದ್ದು, ಅದಕ್ಕೆ ಯಾವತ್ತೂ ಪ್ರೇಕ್ಷಕರ ಕೊರತೆ ಎದುರಾಗುವುದಿಲ್ಲ. ಆದರೆ ಈ ಕಲೆಯನ್ನು ಇನ್ನಷ್ಟು ಪಸರಿಸಲು ಸಮಾಜದ ಸಹಕಾರ ಬೇಕು ಎಂದು ಹೇಳಿದರು.

ಅಂಬಲಪಾಡಿ ದೇಗುಲದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್‌, ಉದ್ಯಮಿ ವಿಶ್ವನಾಥ ಶೆಣೈ, ಮಠದ ದಿವಾನ ವೇದವ್ಯಾಸ ತಂತ್ರಿ, ಯಕ್ಷ ಶಿಕ್ಷಣ ಟ್ರಸ್ಟ್‌ನ ಟ್ರಸ್ಟಿ ನಾರಾಯಣ ಹೆಗಡೆ ಉಪಸ್ಥಿತರಿದ್ದರು.

ಯಕ್ಷ ಶಿಕ್ಷಣ ಟ್ರಸ್ಟ್‌ನ ಟ್ರಸ್ಟಿಗಳಾದ ಎಸ್‌.ವಿ. ಭಟ್‌ ಸ್ವಾಗತಿಸಿದರು. ಎಂ. ಗಂಗಾಧರ ರಾವ್‌ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT