ಜೀವ ವಿಮೆ ಮೇಲಿನ ಜಿಎಸ್‌ಟಿ ರದ್ದುಮಾಡಿ

7
ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಸಂಘಟನೆ ಪ್ರತಿಭಟನೆ

ಜೀವ ವಿಮೆ ಮೇಲಿನ ಜಿಎಸ್‌ಟಿ ರದ್ದುಮಾಡಿ

Published:
Updated:
Deccan Herald

ಉಡುಪಿ: ಜೀವ ವಿಮಾ ಪಾಲಿಸಿಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ವಿಧಿಸುತ್ತಿರುವ ಕ್ರಮ ಖಂಡನೀಯ. ತಕ್ಷಣ ಸರ್ಕಾರ ಅವೈಜ್ಞಾನಿಕ ತೆರಿಗೆ ಪದ್ಧತಿಯನ್ನು ಪಾಪಸ್‌ ಪಡೆದುಕೊಳ್ಳಬೇಕು ಎಂದು ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಸಂಘಟನೆ ಉಪಾಧ್ಯಕ್ಷ ಎಲ್‌.ಮಂಜುನಾಥ್ ಒತ್ತಾಯಿಸಿದರು.

ನಗರದ ಜೀವ ವಿಮಾ ನಿಗಮದ ಕಚೇರಿ ಮುಂದೆ ಎಲ್‌ಐಸಿ ಏಜೆಂಟ್ಸ್‌ ಆರ್ಗನೈಸೆಷನ್‌ ಆಫ್ ಇಂಡಿಯಾ ಸಂಘಟನೆಯು ಸಿಐಟಿಯು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ವಿಮಾ ಕ್ಷೇತ್ರದಲ್ಲಿ ಸರ್ಕಾರ ಜಾರಿಗೆ ತರುವ ನಿಯಮಗಳು ಪಾಲಿಸಿದಾರರಿಗೆ ಮಾರಕವಾಗಬಾರದು. ಮಾರುಕಟ್ಟೆ ಅವಲಂಬಿತ ಪಾಲಿಸಿಗಳ ಬದಲಾಗಿ, ಲಾಭಧಾಯಕ ಪಾಲಿಸಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಎಲ್‌ಐಸಿಯಲ್ಲಿ 60 ವರ್ಷಗಳಿಂದ ದುಡಿಯುತ್ತಿದ್ದರೂ ಉದ್ಯೋಗ ಭದ್ರತೆ ಇಲ್ಲ. ಸರಿಯಾದ ಪಿಂಚಣಿ ವ್ಯವಸ್ಥೆ ಇಲ್ಲ. ವೈದ್ಯಕೀಯ ಸೌಲಭ್ಯಗಳಿಲ್ಲ. ಅಸಂಘಟಿತ ವಲಯದ ಕಾರ್ಮಿಕರಿಗೆ ಸಿಗುತ್ತಿರುವ ಸೌಲಭ್ಯವೂ ನಮಗೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಷ್ಟದಲ್ಲಿರುವ ಖಾಸಗಿ ಐಡಿಬಿಐ ಬ್ಯಾಂಕ್‌ನ ಪುನಶ್ಚೇತನಕ್ಕೆ ಎಲ್‌ಐಸಿಯಲ್ಲಿ ಹೂಡಿಕೆ ಮಾಡಿರುವ ಕೋಟ್ಯಂತರ ಜನರ ಪಾಲಿಸಿ ಹಣವನ್ನು ಬಳಕೆ ಮಾಡುತ್ತಿರುವುದು ಖಂಡನೀಯ. ಖಾಸಗಿ ಬ್ಯಾಂಕ್‌ಗಳ ನಷ್ಟದ ಹೊರೆಯನ್ನು ಎಲ್‌ಐಸಿ ಹೆಗಲ ಮೇಲೆ ಹೊರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಿಐಟಿಯು ರಾಜ್ಯ ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಎಲ್‌ಐಸಿ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರದ ಕ್ರಮ ಖಂಡನೀಯ. ಭಾರತದ ಅಭಿವೃದ್ಧಿ ದರ ಹೆಚ್ಚಳಕ್ಕೆ ಎಲ್‌ಐಸಿಯ ಪಾಲು ದೊಡ್ಡದಿದೆ. ಆದರೆ, ದೇಶದ ಅಭಿವೃದ್ಧಿಯ ಪಾಲು ಅಂಬಾನಿ, ಅದಾನಿಯಂತಹ ಉದ್ಯಮಿಗಳ ಪಾಲಾಗುತ್ತಿದೆ ಎಂದು ಆರೋಪಿಸಿದರು.

ಮಧ್ಯಮ ವರ್ಗದವರು ಆರ್ಥಿಕ ಸಮಸ್ಯೆಗಳ ಕಾರಣಕ್ಕೆ ನಿಯಮಿತವಾಗಿ ಪಾಲಿಸಿಯ ಕಂತು ಕಟ್ಟಲು ಸಾಧ್ಯವಾಗುವುದಿಲ್ಲ. 2 ವರ್ಷ ಕಂತು ಕಟ್ಟದಿದ್ದರೆ, ಅಂತಹ ಪಾಲಿಸಿಗಳನ್ನೇ ರದ್ದು ಮಾಡುವ ನಿಯಮ ಬಡವರ ಪಾಲಿಗೆ ದೊಡ್ಡ ಹೊಡೆತ ಎಂದರು.

ಖಾಸಗಿ ಕಂಪೆನಿಗಳನ್ನು ಉದ್ಧಾರ ಮಾಡಲು ಕೇಂದ್ರ ಸರ್ಕಾರ ನಿಂತಿದೆ. ಸಾರ್ವಜನಿಕ ಉದ್ದಿಮೆಗಳು ಹಂತಹಂತವಾಗಿ ಮುಚ್ಚುತ್ತಿವೆ. ಕಾರ್ಮಿಕ ವರ್ಗ ಬೀದಿಗೆ ಬೀಳುತ್ತಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಎಲ್‌ಐಸಿ ಎಒಐ ಉಡುಪಿ ವಿಭಾಗದ ಅಧ್ಯಕ್ಷ ಎ.ಎಸ್‌.ಲೋಕೇಶ್‌, ರಾಜ್ಯಸಮಿತಿ ಕಾರ್ಯಾಧ್ಯಕ್ಷ ರಮೇಶ್‌ ಕುಮಾರ್, ಎಲ್ಐಸಿ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗುರುದತ್, ಕೋಶಾಧಿಕಾರಿ ರಘುನಾಥ್‌ ಶೆಟ್ಟಿ, ಎಲ್‌ಐಸಿ ಎಒಐ ಬಂಟ್ವಾಳದ ಪ್ರಧಾನ ಕಾರ್ಯದರ್ಶಿ ನವೀನ್ ಕೋಡ್ಯಾಣ್ ಅವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !