ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಅಂಕು ಡೊಂಕು ತಿದ್ದುವ ಕಾರ್ಟೂನ್‌: ನಟ ಧನಂಜಯ

ಕಾರ್ಟೂನ್ ಹಬ್ಬ ಉದ್ಘಾಟಿಸಿದ ನಟ ಡಾಲಿ ಧನಂಜಯ
Last Updated 3 ಡಿಸೆಂಬರ್ 2021, 15:11 IST
ಅಕ್ಷರ ಗಾತ್ರ

ಕುಂದಾಪುರ: ಕಾರ್ಟೂನುಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಬಹುದು ಎಂದು ನಟ ಧನಂಜಯ (ಡಾಲಿ) ಹೇಳಿದರು.

ಇಲ್ಲಿನ ಅಥರ್ವ ಕಾಂಪ್ಲೆಕ್ಸ್‌ನ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಕಾರ್ಟೂನು ಹಬ್ಬ', ಕಾರ್ಟೂನ್ ಪ್ರದರ್ಶನ, ತರಬೆತಿ ಕಾರ್ಯಾಗಾರ ಹಾಗೂ ವಿಧ್ಯಾರ್ಥಿಗಳಿಗೆ ಕಾರ್ಟೂನ್ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕಾರಣ ಸಮಾಜವನ್ನು ಒಡೆಯುತ್ತಿದ್ದು, ಪಕ್ಷಗಳ ಕಾರಣಕ್ಕಾಗಿ ಅಣ್ಣ–ತಮ್ಮಂದಿರು ಒಬ್ಬರ ಮುಖ ಒಬ್ಬರು ನೋಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜಾತಿ, ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣದ ದೇಶದ ಭವಿಷ್ಯಕ್ಕೆ ಬಹುದೊಡ್ಡ ಆಪತ್ತು ತಂದೊಡ್ಡಲಿದೆ. ಮೀಸಲಾತಿಯ ಮೂಲಕ ಇಲ್ಲದವರಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸುವುದನ್ನು ಸಮಾಜದ ಒಂದು ವರ್ಗ ವಿರೋಧಿಸುತ್ತಿರುವುದು ‌ಸರಿಯಲ್ಲ. ನಾವೆಲ್ಲ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ನಟ. ದಿ.ಪುನೀತ್ ರಾಜ್‌ಕುಮಾರ್ ಅವರ ಕ್ಯಾರಿಕೇಚರ್ ರಚಿಸಿದ ಕಲಾವಿದ ಬಾದಲ್ ನಂಜುಂಡ ಸ್ವಾಮಿ ಮಾತನಾಡಿ, ದೇಶದ ಇತಿಹಾಸದಲ್ಲಿ ಆಳುವ ಸರ್ಕಾರದ ಜನವಿರೋಧಿ ಕಾರ್ಯಕ್ರಮಗಳ ವಿರುದ್ಧ, ವಿರೋಧ ಪಕ್ಷವಾಗಿ ಕಾಲಕಾಲಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದು ಕಾರ್ಟೂನಿಷ್ಠರು ಮಾತ್ರ ಎಂದರು.

ಜನಪರ ಚಿಂತಕ ಸುಧೀರ್‌ ಕುಮಾರ್‌ ಮುರೊಳ್ಳಿ ಮಾತನಾಡಿ, ಕೇಂದ್ರ ಸರ್ಕಾರದ ಮೂರು ರೈತವಿರೋಧಿ ಕೃಷಿ ಕಾಯ್ದೆಗಳ ವಿರುದ್ದ ದೇಶದಾದ್ಯಂತ ರೈತರು ಪ್ರತಿಭಟನೆಯಲ್ಲಿ ತೊಡಗಿದಾಗ, ಆಳುವ ಸರ್ಕಾರ ರೈತರ ನೋವನ್ನು ಹೃದಯದಿಂದ ಕೇಳಿದ್ದರೆ, ಇಂದು ವಾಪಾಸು ಪಡೆದಿರುವ ಕೃಷಿ ಕಾಯ್ದೆಗಳನ್ನು ವರ್ಷದ ಹಿಂದೆಯೇ ಹಿಂಪಡೆಯಬಹುದಿತ್ತು.

ಪ್ರತಿಭಟನೆಯ ವೇಳೆ ಮೃತಪಟ್ಟ 700ಕ್ಕೂ ಹೆಚ್ಚು ರೈತರ ಪ್ರಾಣ ಉಳಿಸಿದಂತಾಗುತ್ತಿತ್ತು. ಕಠಿಣ ಸಮಯದಿಂದ ಇಂದಿನವರೆಗೂ ರೈತರ ಪರ ಕಾರ್ಟೂನು ರಚಿಸುವ ಮೂಲಕ ರೈತ ಹೋರಾಟಕ್ಕೆ ಬೆಂಬಲ ನೀಡಿದ ವ್ಯಂಗ್ಯ ಚಿತ್ರಕಾರರರು ಅಭಿನಂದನೀಯರು. ರಾಜಕಾರಣದಿಂದಾಗಿ ದೇಶ ಇಂದು ಜಾತಿ ಧರ್ಮಗಳ ಹೆಸರಿನಲ್ಲಿ ವಿಭಜನೆಗೊಂಡಿದೆ. ದೇಶವನ್ನು ಒಗ್ಗೂಡಿಸುವ ಕೆಲಸ ಕಾರ್ಟೂನುಗಳಿಂದ ಹಾಗೂ ಸೃಜನಶೀಲ ಕಲಾವಿದರಿಂದ ಮಾತ್ರ ಸಾಧ್ಯ ಎಂದರು.

ಹಿರಿಯ ವಕೀಲ ಎ.ಎಸ್‌.ಎನ್ ಹೆಬ್ಬಾರ್ ಮಾತನಾಡಿ, ‘ವಿಶ್ವದಾದ್ಯಂತ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿಗಳು ನಡೆಯುತ್ತಿವೆ. ಕಾರ್ಟೂನುಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ರೂಪವಾಗಿದ್ದು, ನೆಹರೂ ಪ್ರಧಾನಿಯಾಗಿದ್ದಾಗ ಕಾರ್ಟೂನಿಷ್ಟರಿಗೆ ತನ್ನ ಮೇಲೆ ಕಾರ್ಟೂನು ರಚಿಸುವಂತೆ ಹೇಳಿದ್ದರು. ನೆಹರೂ ಟೀಕೆ, ವಿಮರ್ಶೆಗಳನ್ನು ಸ್ವಾಗತಿಸುತ್ತಿದ್ದರು’ ಎಂದರು.

ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ, ಪಂಜು ಗಂಗೊಳ್ಳಿ, ಕೇಶವ ಸಸಿಹಿತ್ಲು, ಸಂತೋಷ್ ಸಸಿಹಿತ್ಲು, ಚಂದ್ರ ಗಂಗೊಳ್ಳಿ, ಪ್ರಕಾಶ್ ಶೆಟ್ಟಿ, ಜೀವನ್, ಜೇಮ್ಸ್ ವಾಝ್ ಅವರ ವ್ಯಂಗ್ಯಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕಾರ್ಯಕ್ರಮವು ಡಿ.5ರವರೆಗೆ ನಡೆಯಲಿದೆ.

ಉಪನ್ಯಾಸಕ ಪ್ರದೀಪ್ ಕುಮಾರ್ ಕೆಂಚನೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT