ಸೋಮವಾರ, ಆಗಸ್ಟ್ 26, 2019
27 °C
ಜಿಎಸ್‌ಬಿ ಸಮಾಜದಿಂದ ಆಚರಣೆ

ಉಡುಪಿ: ಚೂಡಿ ಪೂಜೆ ಸಂಭ್ರಮ

Published:
Updated:
Prajavani

ಉಡುಪಿ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಿಂದ ಶ್ರಾವಣ ಮಾಸದ ಚೂಡಿ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ತೆಂಕನಿಡಿಯೂರಿನ ಪ್ರಕಾಶ್ ಕಾಮತ್ ಅವರ ನಿವಾಸದಲ್ಲಿ ನಡೆದ ಮಹಿಳೆಯರು ಚೂಡಿ ಪೂಜೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಪೂಜಾ ವಿಧಾನ: ಶ್ರಾವಣ ಮಾಸದಲ್ಲಿ ಪ್ರಕೃತಿಯಲ್ಲಿ ಸಿಗುವ ಪುಷ್ಪಗಳಾದ ರಥಪುಷ್ಪ, ಗರಿಕೆ, ಶಂಖಪುಷ್ಪ, ರತ್ನಗಂಧಿ, ಸುಗಂಧರಾಜ, ಆರತಿ, ಅನ್ವಾಲಿ, ಕಣಗಿಲೆ, ಕರವೀರ, ಗೌರಿಹೂ, ಸಣ್ಣ ಗುಲಾಬಿ ಹೂಗಳನ್ನು ಬಾಳೆ ನಾರಿನಿಂದ ಕಟ್ಟಿ ಚೂಡಿಯನ್ನು ತಯಾರಿಸಲಾಯಿತು.

ಬಳಿಕ ಚೂಡಿಯನ್ನು ತುಳಸಿಯ ಸನ್ನಿಧಾನದಲ್ಲಿಟ್ಟು, ಮುತೈದೆಯರೆಲ್ಲ ಸೇರಿ ತುಳಸಿ ಕಟ್ಟೆಗೆ ಚೂಡಿಯನ್ನು ಸಮರ್ಪಿಸಿ ನೀರೆರೆದು ಪೂಜೆ ಸಲ್ಲಿಸಲಾಯಿತು. ನಂತರ ತುಳಸಿಕಟ್ಟೆಗೆ ಪ್ರದಕ್ಷಿಣೆ ಹಾಕಿ ದೇವರ ಸಂಕೀರ್ತನೆ ಪಠಿಸಿ, ಆರತಿ ನೈವೇದ್ಯ ಮಾಡಿ ಚೂಡಿ ಸಮರ್ಪಿಸಲಾಯಿತು.

ಜಿಎಸ್‌ಪಿ ಸಮುದಾಯದ ಮಹಿಳೆಯರು ಶ್ರಾವಣ ಮಾಸದ ಪ್ರತಿ ಶುಕ್ರವಾರ ಹಾಗೂ ಭಾನುವಾರ ಚೂಡಿ ಪೂಜೆಯನ್ನು ಮನೆಗಳಲ್ಲಿ ಮಾಡುವುದು ಸಂಪ್ರದಾಯ. ಮಹಿಳಾ ಮಂಡಳಿಗಳ ಮಾರ್ಗದರ್ಶನದಲ್ಲಿ ದೇವಸ್ಥಾನ ಮತ್ತು ಮಂದಿರಗಳಲ್ಲೂ ಸಾಮೂಹಿಕವಾಗಿ ನಡೆಯುತ್ತದೆ.

ಚೂಡಿ ಪೂಜೆ ಪ್ರಕೃತಿಯ ಪೂಜೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಹಾಗಾಗಿ, ತುಳಸಿ ಹಾಗೂ ಸೂರ್ಯ ದೇವರಿಗೆ ಪೂಜೆಯಲ್ಲಿ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತದೆ. ಶ್ರಾವಣ ಮಾಸ ಮಹಿಳೆಯರಿಗೆ ಸಂಭ್ರಮದ ಮಾಸ. ಸಾಲು ಸಾಲು ಹಬ್ಬಗಳು ಬರುವ ಕಾಲ. ಇದೇ ಅವಧಿಯಲ್ಲಿ ಬರುವ ಚೂಡಿ ಪೂಜೆ ವಿಶೇಷವಾಗಿ ಆಚರಿಸಲಾಗುತ್ತದೆ ಎನ್ನುತ್ತಾರೆ ಯೋಗಿನಿ ಕಾಮತ್‌.

ಮದುವೆಯಾದ ಮೊದಲ ವರ್ಷದ ಗಂಡನಮನೆ ಹಾಗೂ ತವರುಮನೆ ಎರಡೂ ಕಡೆ ಚೂಡಿ ಪೂಜೆ ಮಾಡುವ ಅವಕಾಶ ನವ ವಿವಾಹಿತೆ ಸಿಗುತ್ತದೆ ಎನ್ನುತ್ತಾರೆ ಸಾಕ್ಷಿ ಮಲ್ಯ.

ಹಿಂದಿನ ಕಾಲದಲ್ಲಿ ದೂರದೂರಿನಲ್ಲಿರುವ ಹಿರಿಯರಿಗೆ, ನೆಂಟರಿಗೆ ಅಂಚೆಯ ಮೂಲಕ ಚೂಡಿ ಕಳುಹಿಸಿ ಕೊಟ್ಟು ಆಶೀರ್ವಾದ ಪಡೆಯುತಿದ್ದೆವು. ಇಂದಿನ ತಂತ್ರಜ್ಞಾನದ ಯುಗದಲ್ಲಿ ವಾಟ್ಸ್‌ ಆ್ಯಪ್‌ನಲ್ಲಿ ಚೂಡಿಯ ಭಾವಚಿತ್ರ ಕಳುಹಿಸುವುದನ್ನು ಕಾಣುತ್ತಿದ್ದೇವೆ ಎನ್ನುತ್ತಾರೆ ಕೃಪಾ ಮಲ್ಯ.

ಚೂಡಿ ಪೂಜೆಯಲ್ಲಿ ಶ್ರೇಯಸ್ ಮಲ್ಯ, ಸುಧೀರ್ ಮಲ್ಯ, ರಾಧಿಕಾ ನಾಯಕ್ ಇದ್ದರು.

Post Comments (+)