ಶನಿವಾರ, ಮೇ 8, 2021
17 °C
ಶಿರ್ವ: ಭಕ್ತಿ ಮೆರೆದ ಗ್ಯಾಬ್ರಿಯಲ್ ಫೇಬಿಯನ್ ನಜರತ್

ಶಿರ್ವ| ₹2 ಕೋಟಿ ವೆಚ್ಚದಲ್ಲಿ ವಿನಾಯಕ ದೇವಸ್ಥಾನ ನಿರ್ಮಿಸಿದ ಕ್ರಿಶ್ಚಿಯನ್ ಉದ್ಯಮಿ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

ಶಿರ್ವ: ಕ್ರಿಶ್ಚಿಯನ್ ಧರ್ಮದ ಗ್ಯಾಬ್ರಿಯಲ್ ಫೇಬಿಯನ್ ನಜರತ್ ಅವರು ಇಲ್ಲಿನ ಮಟ್ಟಾರು ಅಟ್ಟಿಂಜ ಕ್ರಾಸ್ ಬಳಿ ₹ 2 ಕೋಟಿ ವೆಚ್ಚದಲ್ಲಿ ಸಿದ್ಧಿ ವಿನಾಯಕ ದೇವಸ್ಥಾನ ನಿರ್ಮಿಸಿಕೊಟ್ಟಿದ್ದು, ಈ ದೇವಸ್ಥಾನವು ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿದೆ.

ಶಿರ್ವ ನ್ಯಾರ್ಮ ಬಳಿಯ ಹಳೆಹಿತ್ಲು ನಿವಾಸಿ 77 ವರ್ಷದ ಗ್ಯಾಬ್ರಿಯಲ್ ಫೇಬಿಯನ್ ನಜರತ್ ನಿರ್ಮಿಸಿರುವ ದೇವಾಲಯವು ಎಲ್ಲರ ಗಮನ ಸೆಳೆಯುತ್ತಿದೆ. ಈ ದೇವಸ್ಥಾನವು ಶಿರ್ವ ಪರಿಸರದ ಭಕ್ತರ ಆಕರ್ಷಣೀಯ ಸ್ಥಳವಾಗಿದೆ. ಗ್ಯಾಬ್ರಿಯಲ್ ಫೇಬಿಯನ್ ನಜರತ್ ಅವರು ಕ್ರಿಶ್ಚಿಯನ್‌ ಧರ್ಮದವರಾಗಿದ್ದರೂ, ಸಿದ್ಧಿ ವಿನಾಯಕನ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ.

1959 ರಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ 14 ನೇ ವಯಸ್ಸಿಗೆ ಉದ್ಯೋಗ ಹುಡುಕಿ ಮುಂಬೈ ಸೇರಿದ್ದರು. ಮುಂಬೈ ಪ್ರಭಾದೇವಿ ಸಿದ್ಧಿ ವಿನಾಯಕ ದೇವಸ್ಥಾನದ ಬಳಿ ವಾಸ್ತವ್ಯವಿದ್ದ ಅವರು, ನಿತ್ಯವು ಸಿದ್ಧಿ ವಿನಾಯಕನ ಸ್ಮರಣೆ, ಪೂಜೆಯಿಂದಲೇ ದುಡಿಮೆ ಆರಂಭಿಸುತ್ತಿದ್ದರು. ಮುಂಬೈಯಿಂದಲೇ ಅವರು ಸಿದ್ಧಿ ವಿನಾಯಕನ ಭಕ್ತರಾಗಿದ್ದರು. ಮುಂಬೈಯಲ್ಲಿ ಸ್ವಪ್ರಯತ್ನದಿಂದ ದೇವಸ್ಥಾನದ ಬಳಿ ಪ್ಲಾಸ್ಟಿಕ್ ಮತ್ತು ಮೆಟಲ್ ಡೈ ಮೇಕಿಂಗ್ ವರ್ಕ್‍ಶಾಪ್ ಸ್ಥಾಪಿಸಿ ಯಶಸ್ಸು ಗಳಿಸಿದ ಅವರು, 3 ಕಡೆಗಳಲ್ಲಿ ಉದ್ಯಮ ವಿಸ್ತರಣೆ ಮಾಡಿದ್ದಾರೆ.

ನಂತರದ ದಿನಗಳಲ್ಲಿ ಮುಂಬೈ ಉದ್ಯಮ ಬಿಟ್ಟು ಊರಲ್ಲಿ ನೆಲೆಸಿದ್ದಾರೆ. 12 ವರ್ಷಗಳ ಬಳಿಕ ತಮ್ಮ ತಂದೆಯಿಂದ ಬಳುವಳಿಯಾಗಿ ಬಂದಿರುವ 15 ಸೆಂಟ್ಸ್ ಜಾಗದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಪಾಲಕರ ನೆನಪಿಗಾಗಿ ಸಿದ್ಧಿ ವಿನಾಯಕ ದೇಗುಲ ನಿರ್ಮಿಸಿದ್ದಾರೆ. 8 ವರ್ಷದ ಹಿಂದೆ ಬಂಟಕಲ್ಲು ಹೇರೂರು ಕಲ್ಲುಗುಡ್ಡೆ ಬಳಿ ನಾಗಬನ ಕೂಡ ಜೀರ್ಣೋದ್ಧಾರಗೊಳಿಸಿದ್ದ ಅವರು, ಹಿಂದೂ ಧರ್ಮದ ಮೇಲೆ ಪ್ರೀತಿ ಮೆರೆದಿದ್ದಾರೆ.

ಗ್ಯಾಬ್ರಿಯಲ್ ಫೇಬಿಯನ್ ನಜರತ್ ಬೇರೆ ಬೇರೆ ಧರ್ಮದವರ 60 ಮಂದಿ ಮದುವೆಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯ ಸೇವೆಯನ್ನು ಮಾಡುತ್ತಿದ್ದಾರೆ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಬಡ ಜನರಿಗೆ ಮನೆ ನಿರ್ಮಾಣ ಸೇರಿದಂತೆ, ಪ್ರತಿ ವರ್ಷ ₹5 ಲಕ್ಷ ನೀಡುವ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.

‘ಅಪಾರ ಭಕ್ತಿ ಹೊಂದಿರುವೆ‘

ಮುಂಬೈಯಲ್ಲಿ ಉದ್ಯಮ ನಡೆಸುತ್ತಿದಾಗಲೇ ಸಿದ್ಧಿವಿನಾಯಕನನ್ನು ಆರಾಧಿಸುತ್ತಾ ಬಂದಿದ್ದೇನೆ. ವಿನಾಯಕ ನನಗೆ ಸಕಲವನ್ನೂ ನೀಡಿದ್ದಾನೆ. ಉದ್ಯಮದಲ್ಲೂ ಯಶಸ್ಸು ಕಂಡಿದ್ದೇನೆ. 50 ವರ್ಷದ ಹಿಂದೆ ನಾನೇ ತಯಾರಿಸಿರುವ ಸಿದ್ಧಿವಿನಾಯಕನ ಮೂರ್ತಿ ಈಗಲೂ ನನ್ನ ಬಳಿ ಇದೆ. ಉಳಿದಂತೆ ಮುಂಬೈಯ ಉದ್ಯಮವನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಸಿಬ್ಬಂದಿಗೆ ದಾನ ನೀಡಿ ನನ್ನೂರಿಗೆ ವಾಪಸ್‌ ಬಂದಿದ್ದೇನೆ. ಯಾರಿಂದಲೂ ನೈಯಾಪೈಸೆ ಪಡೆಯದೆ ಸ್ವಂತ ಖರ್ಚಿನಲ್ಲಿ ಸಿದ್ಧಿವಿನಾಯಕ ದೇವಸ್ಥಾನವನ್ನು ನಿರ್ಮಿಸಿದ್ದು, ಹೆಮ್ಮೆ ತಂದಿದೆ  ಎನ್ನುತ್ತಾರೆ ಗ್ಯಾಬ್ರಿಯಲ್ ಫೇಬಿಯನ್ ನಜರತ್ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು