12ರಂದು ಚೌಕಿದಾರ್ ಸೈಕ್ಲಥಾನ್‌

ಶನಿವಾರ, ಏಪ್ರಿಲ್ 20, 2019
28 °C
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸೈಕಲ್ ಜಾಥಾ: ಶಾಸಕ ರಘುಪತಿ ಭಟ್‌

12ರಂದು ಚೌಕಿದಾರ್ ಸೈಕ್ಲಥಾನ್‌

Published:
Updated:
Prajavani

ಉಡುಪಿ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಏ.12ರಂದು ಸಂಜೆ 4 ಮಲ್ಪೆಯ ಕಡಲತೀರದಿಂದ ‘ಚೌಕಿದಾರ್ ಸೈಕ್ಲಥಾನ್’ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ರಘುಪತಿ ಭಟ್‌ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಪೆಯ ಗಾಂಧಿ ಪುತ್ಥಳಿ ಬಳಿಯಿಂದ ಆರಂಭವಾಗುವ ಸೈಕಲ್ ಜಾಥಾ ಬನ್ನಂಜೆ ನಾರಾಯಣ ಗುರು ಸರ್ಕಲ್‌ನಿಂದ ಬ್ರಹ್ಮಗಿರಿ ಮಾರ್ಗವಾಗಿ, ಜೋಡುಕಟ್ಟೆ ವೃತ್ತ, ಕೆ.ಎಂ.ಮಾರ್ಗದ ಮೂಲಕ ಬಿಜೆಪಿ ಕಚೇರಿ ತಲುಪಲಿದೆ ಎಂದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಆಶಯ ಹೊಂದಿರುವವರು ಹಾಗೂ ಮೋದಿ ಅಭಿಮಾನಿಗಳು ಜಾಥಾದಲ್ಲಿ ಭಾಗವಹಿಸಲಿದ್ದಾರೆ. 1000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ನೋಂದಣಿಗೆ ಆ್ಯಪ್‌ ರೂಪಿಸಲಾಗಿದ್ದು, ಆನ್‌ಲೈನ್ ಮೂಲಕ ಅಥವಾ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ನೋಂದಣಿ ಮಾಡಿಕೊಳ್ಳಬಹುದು. ಭಾಗವಹಿಸಿದವರಿಗೆ ಚೌಕಿದಾರ್ ಪ್ರಮಾಣಪತ್ರ ನೀಡಲಾಗುವುದು ಎಂದರು.

‘ನಾನು ಚೌಕೀದಾರ್ ಎಂಬ ಸ್ಟಿಕ್ಕರ್‌ಗಳನ್ನು ವಾಹನಗಳ ಮೇಲೆ ಹಾಕಿಸಿಕೊಳ್ಳಲು ಚುನಾವಣಾ ಆಯೋಗ ಏಕೆ ಆಕ್ಷೇಪ ಮಾಡುತ್ತಿದೆ ತಿಳಿಯುತ್ತಿಲ್ಲ. ನಾನು ಚೌಕಿದಾರ್ ಎಂಬ ಪದ ಆಕ್ಷೇಪಾರ್ಹ ಅಲ್ಲ’ ಎಂದರು.

ಮೋದಿ ಹೆಸರು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಶಾಸಕರು, ‘ಮೋದಿ ಅವರಿಗೆ ಮತ ಕೊಡಿ ಎಂದು ಕೇಳುತ್ತಿಲ್ಲ. ಬದಲಾಗಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಶೋಭಾ ಕರಂದ್ಲಾಜೆ ಅವರಿಗೆ ಮತಕೊಡಿ ಎಂದು ಕೇಳುತ್ತಿದ್ದೇವೆ. ಇದರಲ್ಲಿ ತಪ್ಪಿಲ್ಲ ಎಂದರು.

ವಿರೋಧ ಪಕ್ಷಗಳ ಒಮ್ಮತ ಪ್ರಧಾನಿ ಅಭ್ಯರ್ಥಿ ಯಾರು ಎಂದೇ ನಿಶ್ಚಯವಾಗದಿರುವುದರಿಂದ ರಾಹುಲ್ ಗಾಂಧಿ ಹೆಸರನ್ನು ಮುಂದಿಟ್ಟುಕೊಂಡು ಮತಕೇಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಜೆಡಿಎಸ್ ಅಭ್ಯರ್ಥಿ ಮಧ್ವರಾಜ್ ಅವರು ರಾಹುಲ್ ಗಾಂಧಿ ಹೆಸರು ಹೇಳಿಕೊಂಡು ಮತ ಕೇಳುವ ಧೈರ್ಯ ಇಲ್ಲ ಎಂದು ತಿರುಗೇಟು ನೀಡಿದರು.

ಕರಾವಳಿಗರಿಗೆ ತಿಳಿವಳಿಕೆ ಇಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಈಗ ಉಲ್ಟಾ ಹೊಡೆದಿದ್ದು, ಬುದ್ಧಿವಂತರು ಎನ್ನುತ್ತಿದ್ದಾರೆ. ಚುನಾವಣೆಗೂ ಮುನ್ನ ಕರಾವಳಿಯನ್ನು ನಿರ್ಲಕ್ಷ್ಯ ಮಾಡಿದ ಮುಖ್ಯಮಂತ್ರಿ ಕಾರ್ಕಳದಲ್ಲಿ ಎಲ್ಲ ಜಾತಿ, ಸಮುದಾಯಗಳ ಮುಖಂಡರನ್ನು ಕರೆಸಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಟೀಕಿಸಿದರು.

ಲೋಕಸಭೆ ಚುನಾವಣೆ ಮುಗಿಯುವವರೆಗೂ ಸುಮ್ಮನಿರುವಂತೆ ರಾಹುಲ್ ಗಾಂಧಿ ಕಾಂಗ್ರೆಸ್‌ ನಾಯಕರಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲರೂ ಸುಮ್ಮನಿದ್ದಾರೆ. ಫಲಿತಾಂಶ ಬಂದ 24 ತಿಂಗಳಲ್ಲಿ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ರಘುಪತಿ ಭಟ್ ಭವಿಷ್ಯ ನುಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಪ್ರಭಾಕರ್ ಪೂಜಾರಿ, ಮುಖಂಡ ಮಹೇಶ್ ಠಾಕೂರ್, ಕಪ್ಪೆಟ್ಟು ಪ್ರವೀಣ್‌ ಕುಮಾರ್ ಶೆಟ್ಟಿ, ಪ್ರದೀಪ್ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !