ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.1ರಂದು ಕಾರ್ಮಿಕರ ಕಲ್ಯಾಣ ಮಂಡಳಿಗೆ ಮುತ್ತಿಗೆ

ಅಂಚೆಕಾರ್ಡ್‌, ಇಮೇಲ್‌ ಚಳವಳಿ: ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್
Last Updated 3 ಆಗಸ್ಟ್ 2021, 14:05 IST
ಅಕ್ಷರ ಗಾತ್ರ

ಉಡುಪಿ: ಕಟ್ಟಡ ಕಾರ್ಮಿಕ ಮಂಡಳಿಯ ಆಹಾರದ ಕಿಟ್‌ಗಳನ್ನು ಶಾಸಕರಿಗೆ ಒಪ್ಪಿಸಿರುವ ಕ್ರಮ ಖಂಡಿಸಿ ಹಾಗೂ ಮಂಡಳಿಯ ಎಲ್ಲ ಖರೀದಿಗಳ ತನಿಖೆಗೆ ಒತ್ತಾಯಿಸಿ ರಾಜ್ಯದಾದ್ಯಂತ ಅಂಚೆ ಕಾರ್ಡ್‌ ಹಾಗೂ ಇಮೇಲ್ ಚಳವಳಿ ನಡೆಸಲಾಗುತ್ತಿದೆ ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯ ಮುಂದುವರಿದ ಭಾಗವಾಗಿ ಸೆ.1ರಂದು 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕಟ್ಟಡ ಕಾರ್ಮಿಕ ಮಂಡಳಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದರು.

ಆಹಾರ ಕಿಟ್‌ಗಳ ವಿತರಣೆ, ಸೆಫ್ಟಿ ಕಿಟ್‌ಗಳ ವಿತರಣೆ ಹಾಗೂ ತಂತ್ರಾಂಶ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ₹ 250 ಮೌಲ್ಯದ ಸೇಫ್ಟಿಕಿಟ್‌ಗೆ ₹ 600 ಹಾಗೂ ₹ 667 ಮೌಲ್ಯದ ಆಹಾರದ ಕಿಟ್‌ಗಳಿಗೆ ₹ 978 ಬಿಲ್‌ ಮಾಡಲಾಗಿದೆ. 5 ಲಕ್ಷ ಕಿಟ್‌ಗಳನ್ನು ವಿತರಿಸುವುದಾಗಿ ಹೇಳಿ, ಜಾಹೀರಾತಿನಲ್ಲಿ ₹ 21 ಲಕ್ಷ ಕಿಟ್‌ ವಿತರಣೆ ಮಾಡಿರುವುದಾಗಿ ಸರ್ಕಾರ ಹೇಳಿದೆ. ಸುಮಾರು ₹ 50 ರಿಂದ 60 ಕೋಟಿ ಅವ್ಯವಹಾರ ನಡೆದಿರುವ ಶಂಕೆ ಇದೆ ಎಂದರು.

ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ₹ 10,200 ಕೋಟಿ ಹಣ ಸಂಗ್ರಹವಾಗಿದ್ದು, ಇದು ಸರ್ಕಾರದ ಹಣವಲ್ಲ; ಕಟ್ಟಡ ನಿರ್ಮಾಣ ಮಾಲೀಕರು ಪಾವತಿಸಿರುವ ತೆರಿಗೆಯಾಗಿದ್ದು ಇದರ ಮೇಲೂ ಸರ್ಕಾರ ಕಣ್ಣು ಹಾಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2021–22ನೇ ಸಾಲಿನಲ್ಲಿ ಮಂಡಳಿಯು 2,668 ಕೋಟಿ ಹಣವನ್ನು ಖರ್ಚು ಮಾಡಲು ನಿರ್ಧರಿಸಿದ್ದು, ಸಾಮಗ್ರಿಗಳ ಖರೀದಿ ಹಾಗೂ ಕಟ್ಟಡ ನಿರ್ಮಾಣ ಕಾಮಾರಿಗೆ ಹೆಚ್ಚು ವ್ಯಯಿಸಲು ನಿರ್ಧರಿಸಿದೆ. ಇದರಿಂದ ಅವ್ಯವಹಾರ ನಡೆಯುವ ಸಾಧ್ಯತೆಗಳಿದ್ದು ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶೇಖರ ಬಂಗೇರ, ಖಜಾಂಚಿ ಶಶಿಧರ ಗೊಲ್ಲ, ಉಪಾಧ್ಯಕ್ಷ ಸುಭಾಶ್ ನಾಯ್ಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT