ಬುಧವಾರ, ಮೇ 12, 2021
18 °C
'ಕಸ್ತೂರಿ ರಂಗನ್ ವರದಿ ಅನುಷ್ಠಾನದಲ್ಲಿ ಸರ್ಕಾರದ ಬೇಜವಾಬ್ದಾರಿ'

ಕೇರಳಕ್ಕಿರುವ ಕಾಳಜಿ ಕರ್ನಾಟಕಕ್ಕೆ ಏಕಿಲ್ಲ?: ಭಾರತೀಯ ಕಿಸಾನ್ ಸಂಘ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಉಡುಪಿ: ಕಸ್ತೂರಿ ರಂಗನ್‌ ವರದಿ ಅನುಷ್ಠಾನ ವಿಚಾರದಲ್ಲಿ ಕೇರಳಕ್ಕಿರುವ ಜನಪರ ಕಾಳಜಿ ಕರ್ನಾಟಕಕ್ಕಿಲ್ಲ ಎಂದು ಭಾರತೀಯ ಕಿಸಾನ್‌ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯ ನಾರಾಯಣ ಉಡುಪಿ ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ಕಚೇರಿಯಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿಚಾರದಲ್ಲಿ ಹಸಿರು ನ್ಯಾಯಾಧೀಕರಣ ಪೀಠ ಆದೇಶ ನೀಡುವ ಮುನ್ನವೇ, ಕೇರಳ ಸರ್ಕಾರ ಪಶ್ಚಿಮಘಟ್ಟ ವ್ಯಾಪ್ತಿಯ ಗ್ರಾಮವಾರು ಸಮೀಕ್ಷೆ ನಡೆಸಿ, ಅಲ್ಲಿನ ಜನವಸತಿ, ಅರಣ್ಯ ಪ್ರದೇಶ, ಕೃಷಿ ಪ್ರದೇಶಗಳನ್ನು ಸಚಿತ್ರ ನಕ್ಷೆ ಸಹಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಪರಿಣಾಮ, 13,108 ಚ.ಕಿ.ಮೀ ಪೈಕಿ 3000ಕ್ಕೂ ಹೆಚ್ಚು ಪ್ರದೇಶವನ್ನು ನ್ಯಾಯಾಲಯ ಕೈಬಿಟ್ಟಿದ್ದು, 9,983 ಚ.ಕಿ.ಮೀ ವಿಸ್ತೀರ್ಣ ಮಾತ್ರ ಕಸ್ತೂರಿ ರಂಗನ್‌ ವರದಿಯ ವ್ಯಾಪ್ತಿಗೊಳಪಡಲಿದೆ. ಇದರಲ್ಲಿ 9107 ಚ.ಕಿ.ಮೀ ಸಂರಕ್ಷಿತ ಅರಣ್ಯವಾಗಿದ್ದು, 886 ಚ.ಕಿ.ಮೀ ಮಾತ್ರ ಜನವಸತಿಯಲ್ಲದ ಕಂದಾಯ ಭೂಮಿಯಾಗಿದೆ.

ಆದರೆ, ಕರ್ನಾಟಕ ಸರ್ಕಾರ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಯಾವ ಸಮೀಕ್ಷೆ ನಡೆಸದೆ ಕೈಕಟ್ಟಿ ಕುಳಿತಿದೆ. ಪರಿಣಾಮ ದಶಕಗಳಿಂದ ಪಶ್ಚಿಮಘಟ್ಟದಲ್ಲಿ ಬದುಕು ಕಟ್ಟಿಕೊಂಡಿರುವ ಜನರು ತೊಂದರೆ ಎದುರಿಸುವಂತಾಗಿದೆ ಎಂದರು.

ಕೇರಳಕ್ಕಿಂತ ಭಿನ್ನವಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ರಾಜ್ಯದ ಕಂದಾಯ ಗ್ರಾಮಗಳನ್ನು ವರದಿಯಿಂದ ಹೊರಗಿಡುತ್ತೇವೆ ಎಂದು ರಾಜಕಾರಣಿಗಳು ನಾಟಕ ಮಾಡುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯನ್ನು 6 ತಿಂಗಳೊಳಗೆ ಅನುಷ್ಠಾನ ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠವು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ವರದಿಯ ವ್ಯಾಪ್ತಿಯ ಯಾವ ಗ್ರಾಮಗಳನ್ನೂ ಕೈಬಿಡದಂತೆ ನ್ಯಾಯಾಲಯ ಸ್ಪಷ್ಟವಾಗಿ ಸೂಚನೆ ನೀಡಿದೆ. ಇನ್ನಾದರೂ ರಾಜಕಾರಣಿಗಳು ಜನರಿಗೆ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

6 ರಾಜ್ಯಗಳ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಪರಿಸರ ಅನುಮತಿ ನೀಡಬಾರದು ಎಂದು ನ್ಯಾಯಾಲಯ ಸೂಚನೆ ನೀಡಿದೆ. ಇದರಿಂದಾಗಿ ಈ ಭಾಗದ ರೈತರು ಖಾತೆಯ ಹೆಸರು ತಿದ್ದುಪಡಿಗೂ ಅಲೆದಾಡಬೇಕಾಗುತ್ತದೆ. ಭೂಪರಿವರ್ತನೆಗೆ ಕೇಂದ್ರ ಸಮಿತಿಯಿಂದ ಕಡ್ಡಾಯ ಅನುಮತಿ ಪಡೆಯಬೇಕಾಗುತ್ತದೆ. 94 ‘ಸಿ’ ಅಡಿ ಮನೆ ಪಡೆದುಕೊಂಡವರಿಗೆ ಮುಂದೆ ತೊಂದರೆಯಾಗಲಿದೆ.

ಕಸ್ತೂರಿ ರಂಗನ್‌ ವರದಿ ಅನುಷ್ಠಾನಕ್ಕೆ ಭಾರತೀಯ ಕಿಸಾನ್‌ ಸಂಘದ ವಿರೋಧವಿಲ್ಲ. ಆದರೆ, ಈ ಭಾಗದ ಜನರಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಉಡುಪ ಒತ್ತಾಯಿಸಿದರು.

ಅಧಿಕಾರಿಗಳ ಬಳಿ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿರುವ ಗ್ರಾಮಗಳ ಸಮರ್ಪಕ ಮಾಹಿತಿಯೇ ಇಲ್ಲ. ಪ್ರತಿ ಬಾರಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದಾಗಲೂ ಪರಿಸರ ಸೂಕ್ಷ್ಮ ಗ್ರಾಮಗಳನ್ನು ಕೈಬಿಡಬೇಕು ಎಂದಷ್ಟೇ ವರದಿ ಸಲ್ಲಿಸಲಾಗುತ್ತಿದೆ. ಯಾವ ಕಾರಣಕ್ಕೆ ಗ್ರಾಮಗಳನ್ನು ಕೈಬಿಡಬೇಕು ಎಂಬ ವಿವರಗಳನ್ನು ಸಲ್ಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2017ರಲ್ಲಿ ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಹಾಗೂ ಗ್ರಾಮಮಟ್ಟದ ಸಮಿತಿಯನ್ನು ರಚಿಸಿ ಪರಿಸರ ಸೂಕ್ಷ್ಮ ಪ್ರದೇಶಗಳ ಗ್ರಾಮಗಳನ್ನು ಗುರುತಿಸಿ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಆದರೂ, ರಾಜ್ಯ ಸಮರ್ಪಕವಾದ ವರದಿ ಸಲ್ಲಿಸಿಲ್ಲ ಎಂದರು.

ಕರ್ನಾಟಕದಲ್ಲಿ ಮೀಸಲು ಅರಣ್ಯ ವ್ಯಾಪ್ತಿಯ ಅಂಚಿನಲ್ಲಿ ಬರುವ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ. ಜಿಲ್ಲೆಯ 45ಕ್ಕೂ ಹೆಚ್ಚು ಗ್ರಾಮಗಳು ಈ ವ್ಯಾಪ್ತಿಗೊಳಪಡಲಿದೆ. ಈ ಭಾಗದ ಜನರ ಕಾಳಜಿ ಜನಪ್ರತಿನಿಧಿಗಳ ಮೇಲಿದ್ದು, ಪಕ್ಷಭೇದ ಮರೆತು ಹೋರಾಟ ಮಾಡಬೇಕು ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು