ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಗಳಿಗೆ ಕೊಡಲು ಹಣವಿದೆ; ನೆರೆ ಪರಿಹಾರಕ್ಕೆ ಇಲ್ಲ

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ
Last Updated 12 ಸೆಪ್ಟೆಂಬರ್ 2019, 14:40 IST
ಅಕ್ಷರ ಗಾತ್ರ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಬಳಿ ವಿದೇಶಗಳಿಗೆ ನೀಡಲು ಸಾವಿರಾರು ಕೊಟಿ ಹಣ ಇದೆ. ರಾಜ್ಯದ ನೆರೆ ಸಂತ್ರಸ್ತರಿಗೆ ನೀಡಲು ಹಣವಿಲ್ಲ ಕಾಂಗ್ರೆಸ್‌ ಮುಖಂಡ ವಿನಯ್‌ ಕುಮಾರ್ ಸೊರಕೆ ವ್ಯಂಗ್ಯವಾಡಿದರು.

ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯ ಪ್ರವಾಹಕ್ಕೆ ಸಿಲುಕಿ ನಲುಗಿದೆ. ಸಂತ್ರಸ್ತರ ಪುನರ್ವಸತಿಗೆ ಕೇಂದ್ರ ಸರ್ಕಾರ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ಬದಲಾಗಿ ವಿದೇಶಗಳಿಗೆ ನೀಡುತ್ತಿದೆ ಎಂದು ಹರಿಹಾಯ್ದರು.

ಸದನದಲ್ಲಿ ಚರ್ಚೆ ಮಾಡದೆ ಏಕಾಏಕಿಯಾಗಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ದಂಡದ ಮೊತ್ತವನ್ನು ಹೆಚ್ಚಿಸಿರುವುದರಿಂದ ದೇಶದೆಲ್ಲೆಡೆ ತುರ್ತುಪರಿಸ್ಥಿಯ ಅನುಭವವಾಗುತ್ತಿದೆ. ರಿಕ್ಷಾ ಚಾಲಕರು, ವಾಹನ ಮಾಲೀಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಾಲಕರು ದುಬಾರಿ ದಂಡ ಭರಿಸಲಾಗದೆ ಗಾಡಿಗಳನ್ನು ಅಧಿಕಾರಿಗಳ ವಶಕ್ಕೆ ಒಪ್ಪಿಸುತ್ತಿದ್ದಾರೆ ಎಂದರು.

ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕರಾವಳಿಯ ಹೆಮ್ಮೆಯ ಬ್ಯಾಂಕ್‌ಗಳನ್ನು ನಷ್ಟದಲ್ಲಿದ್ದ ಬ್ಯಾಂಕ್‌ಗಳೊಂದಿಗೆ ವಿಲೀನ ಮಾಡಲಾಗಿದೆ. ಆರ್ಥಿಕತೆಗೆ ಪುನಶ್ಚೇತನ ನೀಡುವ ಬದಲು ಮೋಟಾರು ಕಾಯ್ದೆಗೆ ತಿದ್ದುಪಡಿ ತಂದು ದರೋಡೆ ಮಾಡಲಾಗುತ್ತಿದೆ ಎಂದರು.

ರಾಜಕೀಯ ಷಡ್ಯಂತ್ರದಿಂದ ಇಡಿ ಅಧಿಕಾರಿಗಳನ್ನು ಬಳಸಿಕೊಂಡು ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳನ್ನು ನಾಶ ಮಾಡಬೇಕು ಎಂದು ಬಿಜೆಪಿ ಪಣತೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಮರಳು ಸಮಸ್ಯೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಶಾಸಕರು ಗೆಲವು ಸಾಧಿಸಿದರು. ಒಂದು ತಿಂಗಳಲ್ಲಿ ಮರಳು ಕೊಡುವುದಾಗಿ ಶಾಸಕರು ನೀಡಿದ್ದ ಭರವಸೆ ಏನಾಯಿತು ಎಂದು ಪ್ರಶ್ನಿಸಿದ ಸೊರಕೆ, ಮರಳು ಕೊಡದಿದ್ದರೆ ಕಾಂಗ್ರೆಸ್‌ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಯು.ಆರ್.ಸಭಾಪತಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ವಿಶ್ವಾಸ್ ಅಮೀನ್‌, ಪ್ರಖ್ಯಾತ್ ಶೆಟ್ಟಿ, ಪ್ರಶಾಂತ್ ಜತ್ತನ್ನ, ಗೀತಾ ವಾಗ್ಲೆ, ಸುನಿತಾ ಶೆಟ್ಟಿ, ರೋಶನಿ ಒಲಿವೆರಾ, ಉದ್ಯಾವರ ನಾಗೇಶ್‌ ಕುಮಾರ್, ವಿಜಯ್‌ ಪೂಜಾರಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT