ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿಸಿದ ಉತ್ಪನ್ನಗಳಿಗೆ ರಶೀದಿ ಪಡೆಯಿರಿ

ಗ್ರಾಹಕರು ಮೋಸ ಹೋದರೆ ಪ್ರಶ್ನಿಸಿ: ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಶೋಭಾ ಸಲಹೆ
Last Updated 5 ಜನವರಿ 2021, 14:36 IST
ಅಕ್ಷರ ಗಾತ್ರ

ಉಡುಪಿ: ಗ್ರಾಹಕರು ಖರೀದಿಸುವ ವಸ್ತು ಹಾಗೂ ಸೇವೆಗಳಲ್ಲಿ ವ್ಯತ್ಯಯವಾದರೆ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಖರೀದಿ ಸಂದರ್ಭ ರಶೀದಿ ಪಡೆಯುವುದನ್ನು ಮರೆಯಬಾರದು ಎಂದುಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಶೋಭಾ ಸಲಹೆ ನೀಡಿದರು.

ಮಂಗಳವಾರ ವೈಕುಂಠ ಬಾಳಿಗಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ವಾರ್ತಾ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಬಳಕೆದಾರರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯಲ್ಲಿ ಮಾತನಾಡಿದರು.

ಗ್ರಾಹಕರು ಯಾವುದೇ ಸರಕುಗಳನ್ನು ಖರೀದಿಸಿದಾಗ ಅಥವಾ ಸೇವೆಯನ್ನು ಪಡೆಯುವಾಗ ನಿಯಮಗಳನ್ನು ಓದಿ ಅರ್ಥೈಸಿಕೊಂಡರೆ ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದು. ಹೊಸ ಗ್ರಾಹಕರ ಸಂರಕ್ಷಣಾ ಕಾಯ್ದೆಯಲ್ಲಿ ಗ್ರಾಹಕರಿಗೆ ಹೆಚ್ಚು ಅನುಕೂಲಗಳಿವೆ. ಇದನ್ನು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾಧಿಕಾರಿ ಜಿ. ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುಣಮಟ್ಟದ ಸರಕು-ಸೇವೆಯನ್ನು ಪಡೆಯಲು ಪ್ರತಿಯೊಬ್ಬ ಗ್ರಾಹಕರಿಗೂ ಹಕ್ಕುಗಳ ಬಗ್ಗೆ ಅರಿವಿರಬೇಕು. ಪ್ರತಿ ವ್ಯಕ್ತಿಯೂ ಗ್ರಾಹಕನಾಗಿದ್ದು, ಖರೀದಿಸುವ ಸರಕು ಹಾಗೂ ಪಡೆಯುವ ಸೇವೆಗಳಲ್ಲಿ ಸಮಸ್ಯೆಯಾದರೆ ಗ್ರಾಹಕ ವೇದಿಕೆಗಳ ಮೂಲಕ ಪರಿಹಾರ ಪಡೆಯಬಹುದು ಎಂದರು.

ಗ್ರಾಹಕ ಕಾಯ್ದೆ, ಹಕ್ಕುಗಳು ಹಾಗೂ ಕಾನೂನು ನೀಡಿರುವ ಗ್ರಾಹಕ ಅಧಿಕಾರಗಳ ಬಗ್ಗೆ ಅರಿವಿರಬೇಕು. ಪ್ರತಿ ವ್ಯಾಪಾರಿಯೂ ನಿರ್ದಿಷ್ಟ ಮಾನದಂಡಗಳ ಪ್ರಕಾರವಾಗಿಯೇ ಗ್ರಾಹಕರಿಗೆ ಸೇವೆ ನೀಡಬೇಕು. ಗ್ರಾಹಕರು ಖರೀದಿಸುವ ವಸ್ತುಗಳಲ್ಲಿ ಕಲಬೆರಕೆ ಕಂಡುಬಂದರೆ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ವ್ಯಾಪಾರಿಗಳು ಮಾತ್ರವಲ್ಲ ಸರ್ಕಾರಿ ಸೇವೆ ನೀಡುವ ಅಧಿಕಾರಿಗಳೂ ಗ್ರಾಹಕ ಸೇವೆಯ ವ್ಯಾಪ್ತಿಗೆ ಒಳಪಡಲಿದ್ದು, ನಾಗರಿಕರಿಗೆ ಸಕಾಲದಲ್ಲಿ ಸೇವೆಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಮಾತನಾಡಿ, ಆನ್‌ಲೈನ್‌ನಲ್ಲಿ ಸರಕು ಖರೀದಿಸುವಾಗ ಮೋಸ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಂತ್ರಣ ಸವಾಲಾಗಿದೆ. ಮೊಬೈಲ್ ಆ್ಯಪ್‌ ಡೌನ್‌ಲೋಡ್ ಮಾಡುವಾಗ ಎಲ್ಲದಕ್ಕೂ ಒಪ್ಪಿಗೆ ನೀಡುವು ಅಗತ್ಯವಿಲ್ಲ. ಒಪ್ಪಿಗೆ ನೀಡಿದರೆ ಅನಾನುಕೂಲವೇ ಹೆಚ್ಚು. ತೆರಿಗೆ ತಪ್ಪಿಸಲು ಹೋಗಿ ಮೋಸದ ಜಾಲಕ್ಕೆ ಸಿಲುಕಬೇಡಿ. ಖರೀದಿ ಸಂದರ್ಭ ಸೂಕ್ತ ಬಿಲ್‌ಗಳನ್ನು ಪಡೆಯಿರಿ. ಗ್ರಾಹಕ ಸೇವೆಯಲ್ಲಿ ತೊಂದರೆಯಾದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ಪಡೆಯಬಹುದು ಎಂದರು.

ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಎ.ಪಿ.ಕೊಡಂಚ ಉಪನ್ಯಾಸ ನೀಡಿದರು. ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ವಿವಿಧ ತೂಕದ ಯಂತ್ರಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲೆ ನಿರ್ಮಲಾ ಕುಮಾರಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ವಿ.ಎಡಕೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮೊಹಮ್ಮದ್ ಇಸಾಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT