ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಮೀನುಗಾರಿಕೆಗೆ ಕಡಿವಾಣ ಹಾಕಿ: ಅಧಿಕಾರಿಗಳಿಗೆ ಮಣಿವಣ್ಣನ್ ಸೂಚನೆ

ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಅವರಿಂದ ಸಭೆ
Last Updated 1 ಏಪ್ರಿಲ್ 2021, 14:18 IST
ಅಕ್ಷರ ಗಾತ್ರ

ಉಡುಪಿ: ಸಮುದ್ರದಲ್ಲಿ ಅನಧಿಕೃತ ಹಾಗೂ ನಿಷೇಧಿತ ಮೀನುಗಾರಿಕಾ ಚಟುವಟಿಕೆಗಳನ್ನು ನಡೆಸದಂತೆ ಎಚ್ಚರವಹಿಸಬೇಕು ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುರುವಾರ ಜಿಲ್ಲಾ ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಂಭಾಂಗಣದಲ್ಲಿ ನಡೆದ ಪಶುಪಾಲನೆ ಮತ್ತು ಮೀನುಗಾರಿಕಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಂದರುಗಳಲ್ಲಿ ಮೀನುಗಾರರು ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ತಪ್ಪಿದ್ದಲ್ಲಿ ಕ್ರಮ ತೆಗೆದುಕೊಳ್ಳಬೇಕು. ಸಮುದ್ರದಲ್ಲಿ ಅಪಘಾತಕ್ಕೀಡಾದವರನ್ನು ರಕ್ಷಿಸಿ ಚಿಕಿತ್ಸೆ ನೀಡಲು ಅನುಕೂಲವಾಗಲು ಸಿ-ಆಂಬುಲೆನ್ಸ್ ಬೋಟ್‌ಗಳನ್ನು ಶೀಘ್ರ ಕಡಲಿನಲ್ಲಿ ನಿಯೋಜಿಸಲಾಗುವುದು ಎಂದರು.

ಬಂದರುಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಹೆಚ್ಚುವರಿಯಾಗಿ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿದಿನ ಮಲ್ಪೆ ಬಂದರಿಗೆ 8 ರಿಂದ 10 ಸಾವಿರ ಜನ ಬಂದು ಹೋಗುತ್ತಿದ್ದಾರೆ. ಸ್ಥಳೀಯರು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದು ಹೋಗುವವರ ಸಂಖ್ಯೆ ಹೆಚ್ಚಿದ್ದು, ಮೀನುಗಾರಿಕಾ ಚಟುವಟಿಕೆಗಳಲ್ಲಿ ಭಾಗವಹಿಸುವವರು ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಕರಾವಳಿ ಕಾವಲುಪಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ನೋಂದಣಿಯಾಗದಿರುವ ಪಾತಿ ದೋಣಿಗಳನ್ನು ಮೂರು ತಿಂಗಳೊಳಗೆ ನೋಂದಣಿ ಮಾಡಿಕೊಳ್ಳಬೇಕು. ಮೀನುಗಾರಿಕೆಗೆ ತೆರಳಿರುವ ಬೋಟ್‌ಗಳು ಸರ್ಕಾರದ ಸೂಚನೆಯನ್ವಯ ನಿಗದಿಪಡಿಸಿರುವ ಕಲರ್ ಕೋಡಿಂಗ್‌ಗಳನ್ನು ತಪ್ಪದೆ ಪಾಲಿಸಬೇಕು ಎಂದರು.

ಹೊರ ಜಿಲ್ಲೆಗಳಿಂದ ಅನಧಿಕೃತವಾಗಿ ಮೀನುಗಾರಿಕೆ ನಡೆಸುವ ದೋಣಿಗಳಿಗೆ ದಂಡ ವಿಧಿಸಬೇಕು. ದೋಣಿಗಳಿಗೆ ಚೀನಾ ನಿರ್ಮಿತ ಟ್ರೇಸಿಂಗ್ ಡಿವೈಸ್‌ಗಳನ್ನು ಅಳವಡಿಸಲಾಗಿದ್ದು, ಬಂದರು ಕಡೆ ದೋಣಿಗಳು ಬರುವಾಗ ಗುರುತಿಸಲು ಗೊಂದಲಗಳು ಉಂಟಾಗುತ್ತಿವೆ. ಅಂತಹ ಸಾಧನಗಳ ತಾಂತ್ರಿಕ ಸಮಸ್ಯೆ ಸರಿಪಡಿಸಬೇಕು ಎಂದರು.

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗಿದ್ದು, ಪ್ರತಿ ಜಿಲ್ಲೆಯಲ್ಲೂ ಗೋಶಾಲೆಗಳನ್ನು ತೆರೆಯಲು ಸ್ಥಳ ಗುರುತಿಸಬೇಕು. ಸುಸಜ್ಜಿತ ಗೋಶಾಲೆಗಳನ್ನು ಆರಂಭಿಸಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ. ನವೀನ್ ಭಟ್ ವೈ, ಎಸ್‌ಪಿ ಎನ್. ವಿಷ್ಣುವರ್ಧನ್, ಕರಾವಳಿ ಕಾವಲು ಪೊಲೀಸ್ ಘಟಕದ ಎಸ್‌ಪಿ ಆರ್‌. ಚೇತನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT