ಮಂಗಳವಾರ, ಮೇ 17, 2022
26 °C
ಏಕ ಪೋಷಕರನ್ನು ಕಳೆದುಕೊಂಡ ಜಿಲ್ಲೆಯ 129 ಮಕ್ಕಳು

ಉಡುಪಿ: ಕೋವಿಡ್‌ನಿಂದಾಗಿ ಮೂವರು ಮಕ್ಕಳು ಅನಾಥ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್‌–19 ಮಹಾಮಾರಿ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಿತ್ತುಕೊಂಡಿದೆ. ಪೋಷಕರನ್ನು ಕಳೆದುಕೊಂಡು ಮಕ್ಕಳು ತಬ್ಬಲಿಗಳಾಗಿದ್ದಾರೆ. ಮಕ್ಕಳನ್ನು ಕಳೆದುಕೊಂಡು ಪೋಷಕರೂ ಒಂಟಿಯಾಗಿದ್ದಾರೆ.

ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ಕೋವಿಡ್‌–19 ಸಾವಿರಾರು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದೆ. ಪೋಷಕರ ಆರೈಕೆ, ಪ್ರೀತಿ, ವಾತ್ಸಲ್ಯದಲ್ಲಿ ಬೆಳೆಯಬೇಕಿದ್ದ ಮಕ್ಕಳು ಅನಾಥರಾಗಿ ಬದುಕವಂತೆ ಮಾಡಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2020 ರಿಂದ 2022ರವರೆಗೂ ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಸಂಖ್ಯೆ 3. ಉಡುಪಿ ಹಾಗೂ ಕಾಪು ತಾಲ್ಲೂಕಿನ ತಲಾ ಒಬ್ಬರು ಬಾಲಕರು ಹಾಗೂ ಕಾರ್ಕಳ ತಾಲ್ಲೂಕಿನ ಬಾಲಕಿ ಪೋಷಕರನ್ನು ಕಳೆದುಕೊಂಡಿದ್ದಾಳೆ.

ಮೂರು ಪ್ರಕರಣಗಳಲ್ಲಿ ತಂದೆ ಹಾಗೂ ತಾಯಿ ಇಬ್ಬರೂ ಕೋವಿಡ್‌ನಿಂದ ಮೃತಪಟ್ಟಿಲ್ಲ. ಹಿಂದೆಯೇ ತಂದೆ ಅಥವಾ ತಾಯಿ ತೀರಿಕೊಂಡು ಏಕಪೋಷಕರ ಆರೈಕೆಯಲ್ಲಿದ್ದ ಮಕ್ಕಳು ಬಳಿಕ ಕೋವಿಡ್‌ನಿಂದಾಗಿ ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಕೋವಿಡ್‌ನಿಂದಾಗಿ ಜಿಲ್ಲೆಯಲ್ಲಿ ತಂದೆ ಅಥವಾ ತಾಯಿಯ ಪೈಕಿ ಒಬ್ಬರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ ಬರೋಬ್ಬರಿ 129. ಇವರಲ್ಲಿ ಬಹಳಷ್ಟು ಮಕ್ಕಳು ಕುಟುಂಬಕ್ಕೆ ಆಧಾರವಾಗಿದ್ದ ತಂದೆಯನ್ನು ಕಳೆದುಕೊಂಡಿದ್ದರೆ, ಹಲವು ಮಕ್ಕಳು ಪ್ರೀತಿ, ಮಮತೆ ತೋರುತ್ತಿದ್ದ ತಾಯಿಯನ್ನು ಕಳೆದುಕೊಂಡಿದ್ದಾರೆ.

ಸಂಬಂಧಿಗಳ ಆರೈಕೆಯಲ್ಲಿ ಅನಾಥ ಮಕ್ಕಳು: ಮೂವರು ಅನಾಥ ಮಕ್ಕಳು ಸದ್ಯ ಸಂಬಂಧಿಕರ ಆರೈಕೆಯಲ್ಲಿದ್ದಾರೆ. ಸಂಬಂಧಿಗಳಿಗೆ ಮಕ್ಕಳ ಪಾಲನೆ ಹಾಗೂ ಪೋಷಣೆ ಹೊರೆಯಾದರೆ ಮಕ್ಕಳಿಗೆ ಊಟ, ವಸತಿ ಸೇರಿದಂತೆ ಶಿಕ್ಷಣಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

ಸರ್ಕಾರದಿಂದ ಸಿಕ್ಕ ನೆರವು?
ಕೋವಿಡ್‌ ಸೋಂಕು ತಗುಲಿ ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿ ಮಾಸಿಕ ₹ 3,500 ಕೊಡಲಾಗುತ್ತಿದೆ. ಜತೆಗೆ, ವಿಶೇಷ ಪ್ರಾಯೋಜಕತ್ವ ಯೋಜನೆಯಡಿ ₹ 2,000 ನೆರವು ನೀಡಲಾಗುತ್ತಿದೆ. ಕೇಂದ್ರ ಸರ್ಕಾರ 50,000 ಹಾಗೂ ರಾಜ್ಯ ಸರ್ಕಾರ ₹ 1 ಲಕ್ಷ ನೆರವು ನೀಡಿದೆ ಎನ್ನುತ್ತಾರೆ ಜಿಲ್ಲಾ ಎಸಿಡಿಪಿಒ ಕುಮಾರ್‌.

ಅನಾಥ ಮಕ್ಕಳಿಗೆ 18 ವರ್ಷ ತುಂಬುವ ಹೊತ್ತಿಗೆ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ₹ 10 ಲಕ್ಷ ನೀಡುತ್ತದೆ. ಜಿಲ್ಲೆಯ ಮೂವರು ಮಕ್ಕಳ ಪೈಕಿ ಒಬ್ಬರಿಗೆ ₹ 10 ಲಕ್ಷ, ಇಬ್ಬರಿಗೆ ಕ್ರಮವಾಗಿ ₹ 8.60, 8.2 ಲಕ್ಷ ಆರ್ಥಿಕ ನೆರವು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

‘ಸರ್ಕಾರಕ್ಕೆ ವರದಿ ಸಲ್ಲಿಕೆ’
ಏಕ ಪೋಷಕರನ್ನು ಕಳೆದುಕೊಂಡ 129 ಮಕ್ಕಳಿಗೆ ವಿಶೇಷ ಪ್ರಾಯೋಜಕತ್ವ ಯೋಜನೆಯಡಿ ಪ್ರತಿ ತಿಂಗಳು ₹ 2,000 ಆರ್ಥಿಕ ನೆರವು ನೀಡುವುದಾಗಿ ಸರ್ಕಾರ ತಿಳಿಸಿತ್ತು. ಇದುವರೆಗೂ ಕಾರ್ಯಾದೇಶವಾಗಿಲ್ಲ. ಜಿಲ್ಲೆಯಲ್ಲಿ ಕೋವಿಡ್‌ನಿಂದ ಅನಾಥರಾದ ಮಕ್ಕಳ ವಿವರ, ಆರ್ಥಿಕ ಸ್ಥಿತಿಗತಿ, ಹಾಗೂ ಏಕ ಪೋಷಕರನ್ನು ಕಳೆದುಕೊಂಡ ಮಕ್ಕಳ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
–ಕುಮಾರ್‌, ಎಸಿಡಿಪಿಒ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು