ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಕಾರ್ಮಿಕರು ನಿರಾಶ್ರಿತರ ಕೇಂದ್ರಕ್ಕೆ

ಗೂಡ್ಸ್‌ ವಾಹನದಲ್ಲಿ ತುಂಬಿ ಕಳುಹಿಸಿದ ಪೊಲೀಸರು
Last Updated 29 ಮಾರ್ಚ್ 2020, 15:51 IST
ಅಕ್ಷರ ಗಾತ್ರ

ಪಡುಬಿದ್ರಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಧಾರವಾಡ, ವಿಜಯಪುರ ಜಿಲ್ಲೆಗಳ ಸುಮಾರು 27 ಕೂಲಿ ಕಾರ್ಮಿಕರನ್ನು ಭಾನುವಾರ ಗೂಡ್ಸ್‌ ವಾಹನದ ಮೂಲಕ ಪೊಲೀಸರು ಮಂಗಳೂರಿನ ಕದ್ರಿಯ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಿದರು.

ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಕಾರ್ಮಿಕರನ್ನು ಕಾಪು ಠಾಣಾಧಿಕಾರಿ ರಾಜಶೇಖರ ಸಾಗನೂರು ತಡೆದು ವಿಚಾರಿಸಿದ್ದರು. ‘ತಮ್ಮ ಊರಿಗೆ ಮರಳಲು ಯಾವುದೇ ವ್ಯವಸ್ಥೆ ಇಲ್ಲ. ಅತ್ತ ಊರೂ ಇಲ್ಲ ಇತ್ತ ಸೂರೂ ಇಲ್ಲದೇ ಮಕ್ಕಳು ಸಹಿತ ಪರದಾಡುವ ಪರಿಸ್ಥಿತಿ ಇದೆ’ ಎಂದು ಕಾರ್ಮಿಕರು ತಿಳಿಸಿದ್ದರು.

ನಮ್ಮನ್ನು ಬಿಟ್ಟುಬಿಡಿ:‘ನಾವು ಬಂಟ್ವಾಳ ತಾಲ್ಲೂಕಿನ ಬಿಸಿರೋಡ್‌ನ ಬಾಡಿಗೆ ಕೋಣೆಯಲ್ಲಿ ವಾಸವಿದ್ದು, ಸ್ಥಳೀಯವಾಗಿ ಕೂಲಿ ಮಾಡಿಕೊಂಡಿದ್ದೆವು. ತಮ್ಮ ಊರಿಗೆ ಮರಳಲು ಪಾದಯಾತ್ರೆ ಹೊರಟಿದ್ದೇವೆ. ನಮ್ಮನ್ನು ನಮ್ಮ ಊರಿಗೆ ತೆರಳಲು ಬಿಡಿ. ನಾವು ಅಲ್ಲಿಯೇ ಆರಾಮವಾಗಿ ಇರುತ್ತೇವೆ. ಇಲ್ಲದಿದ್ದಲ್ಲಿ ನಮ್ಮದೇ ಬಾಡಿಗೆ ಮನೆ ಬಿಸಿರೋಡ್‌ನಲ್ಲಿ ಇದೆ. ಅಲ್ಲಿಗೆ ಬಿಡಿ. ಅಲ್ಲಿಂದ ನೀವು ಹೇಳುವವರೆಗೂ ಹೊರಗೆ ಬರುವುದಿಲ್ಲ. ನಾವು ಕದ್ರಿಯ ಗಂಜಿ ಕೇಂದ್ರಕ್ಕೆ ಹೋಗುವುದಿಲ್ಲ. ಈ ವಾಹನದಲ್ಲೇ ಒಟ್ಟಿಗೆ ಹಾಕಿದ್ದೀರಿ. ಅಲ್ಲಿ ಇನ್ನಷ್ಟು ಜನರ ಜೊತೆ ಇರಿಸುತ್ತಾರೆ’ ಎಂದು ಕೂಲಿ ಕಾರ್ಮಿಕರು ಕಣ್ಣೀರು ಸುರಿಸಿ ಅಲವತ್ತುಕೊಂಡರೂ ಸ್ಪಂದನೆ ಸಿಗಲಿಲ್ಲ.

‘ಮೇಲಧಿಕಾರಿಗಳ ಸೂಚನೆಯಂತೆ ಮಂಗಳೂರಿನ ಕದ್ರಿ ಗಂಜಿ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ’ ಎಂದು ಅವರನ್ನು ಪೊಲೀಸರು ಸಮಾಧಾನ ಪಡಿಸಿದರು. ಬಳಿಕ ಗೂಡ್ಸ್ ವಾಹನದಲ್ಲಿ ಕದ್ರಿ ಕೇಂದ್ರಕ್ಕೆ ಸಾಗಿಸಲಾಯಿತು.

ಕೇರಳದಿಂದ ಬಂದ ವ್ಯಕ್ತಿಗೆ ಸೂಚನೆ: ಮೀನಿನ ಲಾರಿಯಲ್ಲಿ ಕೇರಳಕ್ಕೆ ತೆರಳಿ ವಾಪಾಸು ಬಂದಿದ್ದ ಹೆಜಮಾಡಿಯ ಎಸ್‌ಎಸ್ ರೋಡ್‌ನ ವ್ಯಕ್ತಿಯೊಬ್ಬನಿಗೆ ಎಚ್ಚರಿಕೆ ನೀಡಿರುವ ಪೊಲೀಸರು ಮತ್ತು ಆರೋಗ್ಯಾಧಿಕಾರಿಗಳು 14 ದಿನ ಮನೆಯಿಂದ ಹೊರಗೆ ಬರಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಬೀದಿನಾಯಿಗೆ ಅನ್ನ:ಕಾಪು ಭಾಗದಲ್ಲಿ ಹಸಿದು ಬಳಲಿದ್ದ ಬೀದಿ ನಾಯಿಗಳಿಗೆ ಶಿವಾನಂದ ಪೂಜಾರಿ ಮತ್ತು ತಂಡವು ಅನ್ನವನ್ನು ತಂದು ಹಾಕುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT