ಸೋಮವಾರ, ಆಗಸ್ಟ್ 2, 2021
28 °C
2 ಸಾವಿರಕ್ಕೂ ಹೆಚ್ಚು ಶಂಕಿತ ಕೊರೊನಾ ಸೋಂಕಿತರ ಮಾದರಿ ಸಂಗ್ರಹ

ಮಾದರಿ ಸಂಗ್ರಹ ವೃತ್ತಿಯ ಮೇಲೆ ‘ಪ್ರೀತಿ’

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಶಂಕಿತ ಕೊರೊನಾ ಸೋಂಕಿತರ ಗಂಟಲ ದ್ರವದ ಮಾದರಿ ಸಂಗ್ರಹಿಸುವುದು ಸವಾಲಿನ ಕೆಲಸ. ಮಾದರಿ ಸಂಗ್ರಹ, ಸೋಂಕಿತರ ವಿವರ ದಾಖಲಿಸುವಿಕೆ, ಸುರಕ್ಷಿತವಾಗಿ ಲ್ಯಾಬ್‌ಗೆ ರವಾನೆ, ಹೀಗೆ ಪ್ರತಿ ಹಂತದಲ್ಲೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು.

ಜಿಲ್ಲಾ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಪ್ರೀತಿ ಈ ಕೆಲಸವನ್ನು ಅನಾಯಾಸವಾಗಿ ಮಾಡುತ್ತಿದ್ದಾರೆ. ಇದುವರೆಗೂ 2 ಸಾವಿರದಷ್ಟು ಮಾದರಿಯನ್ನು ತೆಗೆದು ಪ್ರಯೋಗಾಲಯಗಳಿಗೆ ಕಳುಹಿಸಿದ್ದಾರೆ. 

‘ಇಷ್ಟಪಟ್ಟು ಆರಿಸಿಕೊಂಡ ವೃತ್ತಿ ಲ್ಯಾಬ್‌ ಟೆಕ್ನಿಷಿಯನ್. ಶಂಕಿತ ಕೊರೊನಾ ಸೋಂಕಿತರ ಮಾದರಿ ಸಂಗ್ರಹಿಸುವ ಹುದ್ದೆಗೆಂದೇ ನೇಮಕವಾಗಿರುವುದರಿಂದ ಖುಷಿಯಿಂದ ಕೆಲಸ ಮಾಡುತ್ತಿದ್ದೇನೆ’ ಎಂದು ಆತ್ಮವಿಶ್ವಾಸದಿಂದ ನುಡಿದರು ಪ್ರೀತಿ.

‘ಆರ್‌ಟಿಪಿಸಿಆರ್‌ ಆ್ಯಪ್‌ನಲ್ಲಿ ರೋಗಿಗಳ ಹೆಸರು ದಾಖಲಿಸಿಕೊಳ್ಳುವುದರಿಂದ ಹಿಡಿದು ಪ್ರಯೋಗಾಲಯಕ್ಕೆ ಮಾದರಿಯನ್ನು ರವಾನೆ ಮಾಡುವವರೆಗೂ ಬಹಳ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಗೊಂದಲಗಳಾದರೆ ಅನಾಹುತವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ವೃತ್ತಿಯ ಸವಾಲುಗಳನ್ನು ತೆರೆದಿಟ್ಟರು’ ಅವರು.

ಕಿಯೋಸ್ಕ್‌ನಲ್ಲಿ ಮಾದರಿ ಸಂಗ್ರಹಿಸುವಾಗ ಕೈಗೆ ಗ್ಲೌಸ್‌, ಎನ್‌ 95 ಮಾಸ್ಕ್‌, ಸ್ಯಾನಿಟೈಸರ್ ಬಳಸುತ್ತೇವೆ. ಇಲ್ಲಿ ಸೋಂಕು ತಗುಲುವ ಅಪಾಯ ಕಡಿಮೆ. ಆದರೆ, ಕ್ವಾರಂಟೈನ್‌ ಕೇಂದ್ರಗಳಲ್ಲಿ, ಆಸ್ಪತ್ರೆಗಳಲ್ಲಿ, ಐಸೊಲೇಷನ್‌ ವಾರ್ಡ್‌ಗಳಲ್ಲಿ ಸೋಂಕು ತಗುಲುವ ಅಪಾಯ ಹೆಚ್ಚಾಗಿರುವುದರಿಂದ ಮಾದರಿ ಸಂಗ್ರಹಿಸುವುದಾಗ ಕಡ್ಡಾಯವಾಗಿ ಪಿಪಿಇ ಕಿಟ್ ಧರಿಸಬೇಕಾಗುತ್ತದೆ ಎಂದರು.

ಸ್ವ್ಯಾಬ್ ತೆಗೆಯುವುದು, ಸಂಗ್ರಹ, ವಿಲೇವಾರಿ ಹೇಗೆ ಎಂಬ ಬಗ್ಗೆ ತರಬೇತಿ ಪಡೆದಿರುವುದರಿಂದ ಇದುವರೆಗೂ ಆತಂಕ ಎದುರಾಗಿಲ್ಲ. ಆದರೆ, ಪಿಪಿಇ ಕಿಟ್‌ ಬಿಚ್ಚುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಸೋಂಕು ತಗುಲುವ ಅಪಾಯ ಇರುತ್ತದೆ. ಇಂತಹ ಸಂದರ್ಭದಲ್ಲಿ ಗರಿಷ್ಠ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದರು.

ಕರ್ತವ್ಯದ ಅವಧಿ ಮುಗಿದ ಕೂಡಲೇ ಆಸ್ಪತ್ರೆಯಲ್ಲಿ ಸ್ನಾನ ಮುಗಿಸಿ, ಮನೆಗೆ ತೆರಳಿ ಮತ್ತೊಮ್ಮೆ ಸ್ನಾನ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದೇನೆ. ಹಾಗಾಗಿ, ಕುಟುಂಬ ಸದಸ್ಯರ ಜತೆ ಮುಕ್ತವಾಗಿ ಬೆರೆಯಲು ಸಾದ್ಯವಾಗಿದೆ. ನಾಲ್ಕು ವರ್ಷದ ಮಗಳೊಟ್ಟಿಗೂ ಖುಷಿಯಿಂದ ಕಾಲ ಕಳೆಯುತ್ತೇನೆ ಎಂದರು ಪ್ರೀತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.