ಉಡುಪಿ: ಕಾರ್ಮಿಕರ 8 ಗಂಟೆಗಳ ದುಡಿಯುವ ಅವಧಿಯನ್ನು 12 ಗಂಟೆಗಳಿಗೆ ಏರಿಸುವ ಮೂಲಕ ಬಿಜೆಪಿ ಸರ್ಕಾರ ಕಾರ್ಮಿಕ ವಿರೋಧಿ ನಿಲುವು ಪ್ರದರ್ಶಿಸುತ್ತಿದೆ ಎಂದು ಸಿಪಿಐ ಎಂ ಪಕ್ಷದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ವಾಗ್ದಾಳಿ ನಡೆಸಿದರು.
ಸಿಪಿಐ ಎಂ ಉಡುಪಿ ವಲಯ ಸಮಿತಿ ವತಿಯಿಂದ ಗುರುವಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ದರ ಕಡಿಮೆ ಮಾಡಲು ಒತ್ತಾಯಿಸಿ ಹಾಗೂ ಕಾರ್ಮಿಕ ಕಾನೂನುಗಳ ಜಾರಿ ವಿರೋಧಿಸಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಹಮ್ಮಿಕೊಂಡಿದ್ದ ಅಣುಕು ಪ್ರದರ್ಶನ ಪ್ರತಿಭಟನೆಯಲ್ಲಿ ಮಾತನಾಡಿದರು.
ಬ್ರಿಟಿಷರ ವಿರುದ್ಧ ಹೋರಾಟ ಮಾಡಿ 23ನೇ ವಯಸ್ಸಿನಲ್ಲಿಯೇ ಗಲ್ಲಿಗೇರಿದ ಭಗತ್ ಸಿಂಗ್ ಕಾರ್ಮಿಕರ ನ್ಯಾಯಯುತ ಹಕ್ಕುಗಳ ಪರವಾಗಿ ಹೋರಾಟ ಮಾಡಿದ್ದರು. ಭಗತ್ ಸಿಂಗ್ ಆಶಯದಂತೆ ಬ್ರಿಟಿಷರ ಕಾಲದಲ್ಲಿಯೇ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ 8 ಗಂಟೆಗಳ ಕೆಲಸದ ನಿಯಮವನ್ನು ಅಂದಿನ ಸರ್ಕಾರ ಜಾರಿಗೊಳಿಸಿತ್ತು.
ಆದರೆ, ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯುತ್ತಿರುವ ಸಂದರ್ಭದಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು ವಾಮಮಾರ್ಗದಲ್ಲಿ ಏಕಾಏಕಿ 8 ಗಂಟೆಗಳ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಿ ಮಸೂದೆ ಜಾರಿಗೊಳಿಸಿದೆ ಎಂದು ವಾಗ್ದಾಳಿ ನಡೆಸಿದರು.
ಕೊರೊನಾ ಬಳಿಕ ಹೃದ್ರೋಗ ಸಂಬಂಧಿ ಕಾಯಿಲೆಗಳು ಹಾಗೂ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು ಈ ಬಗ್ಗೆ ಸಂಶೋಧನೆಗಳು ನಡೆಯಬೇಕು ಎಂದು ಒತ್ತಾಯಿಸಿದರು.
ಸಿಪಿಐ ಎಂ ಉಡುಪಿ ವಲಯ ಸಮಿತಿ ಕಾರ್ಯದರ್ಶಿ ಶಶಿಧರ್ ಗೊಲ್ಲ ಮಾತನಾಡಿ, ಕಾರ್ಮಿಕರ ಆರೋಗ್ಯದ ಹಿತ ದೃಷ್ಟಿಯಿಂದ 8 ಗಂಟೆ ಕೆಲಸ, 8 ಗಂಟೆ ನಿದ್ದೆ, 8 ಗಂಟೆ ವಿಶ್ರಾಂತಿ ನಿಯಮ ಜಾರಿಯಲ್ಲಿತ್ತು. ಆದರೆ, ಕಾರ್ಮಿಕರ ಹಿತವನ್ನು ಕಡೆಗಣಿಸಿ ದುಡಿಯುವ ಅವಧಿಯನ್ನು 12 ಗಂಟೆ ಹೆಚ್ಚಿಸಿರುವುದು ಕಾರ್ಮಿಕ ವಿರೋಧಿ ನಿಲುವು ಎಂದರು.
ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಸಾರ್ವಜನಿಕರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬಡವರು ಸಿಲಿಂಡರ್ ಖರೀದಿಸಲು ಸಾಧ್ಯವಾಗದೆ ಮತ್ತೆ ಕಟ್ಟಿಗೆ ಒಲೆಯ ಮೊರೆ ಹೋಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ತಗ್ಗಿಸಲು ಸಾಧ್ಯವಾಗದಿದ್ದರೆ, ಸಮಸ್ಯೆಗಳಿಗೆ ಪರಿಹಾರ ಒದಗಿಸಲು ವಿಫಲವಾದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಪ್ರಯೋಜವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಆಡಳಿತ ವೈಖರಿ ಬದಲಾಯಿಸಿಕೊಳ್ಳದಿದ್ದರೆ, ಜನ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಮುಂದುವರಿಸಿದರೆ ಮತದಾರರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಸಮಿತಿ ಸದಸ್ಯ ಎಸ್.ಕವಿರಾಜ್ ಎಸ್, ಸಮಿತಿ ಸದಸ್ಯರಾದ ನಳಿನಿ, ಕೆ.ವಿಶ್ವನಾಥ, ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ಕೆ.ಶಂಕರ್, ಜಿಲ್ಲಾ ಕಟ್ಟಡ ಸಂಘದ ಮುಖಂಡರಾದ ಸುಭಾಷ್ ನಾಯಕ್, ಗಣೇಶ ನಾಯಕ್, ವಾಮನ ಪೂಜಾರಿ, ಸಿಐಟಿಯು ಜಿಲ್ಲಾ ಮುಖಂಡರಾದ ಉಮೇಶ್, ವಿದ್ಯಾರಾಜ್, ಪ್ರಭಾಕರ್, ಮುರಳಿ, ಸೈಯದ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.